ಹುಬ್ಬಳ್ಳಿ: ಗಂಗಾಧರ್ ಸಾಲಿಮಠ ನಿರ್ದೇಶನದಲ್ಲಿ ಮೂಡಿಬಂದಿರುವ ಗ್ರೇ ಗೇಮ್ಸ್ ಸಿನಿಮಾ ಮೇ 10ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.
ಫ್ಯಾಮಿಲಿ ಸಸ್ಪೆನ್ಸ್ ಡ್ರಾಮಾ ಶೈಲಿಯ ಸಿನಿಮಾದಲ್ಲಿ ನಾಯಕನಾಗಿ ವಿಜಯ್ ರಾವೇಂದ್ರ ನಟಿಸಿದ್ದಾರೆ.
ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಪಡೆದಿರುವ ಈ ಸಿನಿಮಾ ಸದ್ಯ ಪ್ರಚಾರ ಕಣಕ್ಕಿಳಿಯುತ್ತಿದೆ. ವಿಜಯ್ ರಾವೇಂದ್ರ ಜತೆಗೆ ಭಾವನಾ ರಾವ್, ಶ್ರುತಿ ಪ್ರಕಾಶ, ಅಪರ್ಣಾ ವಸ್ತೇಯ, ರವಿ ಭಟ್ ಮುಖ್ಯ ಭೂಮಿಕೆಯಲ್ಲಿದ್ದರೆ, ಇನ್ನುಳಿದಂತೆ ಜೈ, ಇಶಿತಾ ಸಿಂಗ್ ಇನ್ನುಳಿದ ಪಾತ್ರವರ್ಗವದಲ್ಲಿದ್ದಾರೆ.
ಇತ್ತೀಚೆಗೆ ಗೋವಾದಲ್ಲಿ ನಡೆದ 54ನೇ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಈ ಸಿನಿಮಾ ಪ್ರದರ್ಶನ ಕಂಡಿತ್ತು.
ಆನ್ಲೈನ್ ಗೇಮಿಂಗ್ ಜತೆಗೆ ಮಾನಸಿಕ ಆರೋಗ್ಯ, ತಂತ್ರಜ್ಞಾನದ ವಿಚಾರವೂ ಸಿನಿಮಾದಲ್ಲಿರಲಿದೆ. ನೋಡುಗನನ್ನು ಭಾವನಾತ್ಮಕವಾಗಿಯೂ ಯೋಚನೆಗೆ ಇಳಿಸುವ ಶಕ್ತಿ ಈ ಚಿತ್ರಕ್ಕಿದೆ ಎಂಬುದು ಚಿತ್ರತಂಡದ ಅಂಬೋಣ.
ನಿರ್ಮಾಪಕ ಆನಂದ್ ಮುಗದ್, ಕರ್ನಾಟಕದಾದ್ಯಂತ ಚಲನಚಿತ್ರವನ್ನು ಪ್ರೇಕ್ಷಕರ ಮಡಿಲಿಗೆ ಹಾಕಲು ನಾವು ಉತ್ಸುಕರಾಗಿದ್ದೇವೆ. ಗ್ರೇ ಗೇಮ್ಸ್ ಸಿನಿಮಾ ಮಾಡಲು ತಮ್ಮ ಉತ್ಸಾಹ ಮತ್ತು ಬದ್ಧತೆಯನ್ನು ತೋರಿಸಿದ ನಮ್ಮ ಅದ್ಭುತ ತಂಡದ ಅಚಲವಾದ ಸಮರ್ಪಣೆಗೆ ಈ ಸಿನಿಮಾ ಸಾಕ್ಷಿಯಾಗಿದೆ' ಎನ್ನುತ್ತಾರೆ.
ಡೀಸ್ ಫಿಲ್ಮ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಗಂಗಾಧರ್ ಸಾಲಿಮಠ ನಿರ್ದೇಶಕರು. ವರುಣ್ ಡಿ.ಕೆ. ಛಾಯಾಗ್ರಹಣ, ಜಗದೀಶ್ ಸಂಕಲನ, ಶ್ರೀಯಾಂಶ ಶ್ರೀರಾಮ್, ಡೊಳೇಶ್ವರ್ ರಾಜ್ ಸುಂಕು, ಅಶ್ವಿನ್ ಹೇಮಂತ್ ಸಂಗೀತ ನೀಡಿದ್ದಾರೆ. ಕಿರಣ್ ಕಾವೇರಪ್ಪ ಸಾಹಿತ್ಯ, ಟಗರು ರಾಜು ನತ್ಯ ನಿರ್ದೇಶನ ಮಾಡಿದ್ದು, ಬಸವರಾಜ್ ಖೇಡದ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.