ದೇಶದ ಪುರಾತನ ಸಂಸ್ಕೃತಿಗೆ ಗೌರವ : ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಶುಭನುಡಿ

New Project (34)
Published on

ಕಾಸರಗೋಡು: ದೇಶದ ಪುರಾತನ ಸಂಸ್ಕೃತಿಗೆ ತಲೆಬಾಗುವುದರ ಜತೆಗೆ ಮೂಲಧರ್ಮಕ್ಕೆ ಗೌರವ ನೀಡಿದಾಗ ಸನಾತನ ಧರ್ಮ ಮತ್ತಷ್ಟು ಪ್ರಾಜ್ವಲ್ಯಮಾನವಾಗುತ್ತದೆ ಎಂದು ಕಾಂಚಿ ಕಾಮಕೋಟಿ ಪೀಠಾಧಿಪತಿ ಜಗದ್ಗುರು ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು. ಎಡನೀರು ಮಠದಲ್ಲಿ ಜರುಗಿದ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ಕಾಂಚಿಶ್ರೀಗಳ ಭೇಟಿಯಿಂದ ಎಡನೀರು ಮಠದ ಭಕ್ತವೃಂದದ ಹಲವು ಸಮಯದ ಕಾಯುವಿಕೆಗೆ ಮುಕ್ತಿ ಲಭಿಸಿದೆ. ಶ್ರೀಕೇಶವಾನಂದ ಭಾರತೀ ಸ್ವಾಮೀಜಿ ಕೃಷ್ಣೈಕ್ಯರಾದ ಸಂದರ್ಭ ಕಾಂಚಿಶ್ರೀಗಳಿಂದ ಸನ್ಯಾಸತ್ವ ಸ್ವೀಕರಿಸುವ ಸೌಭಾಗ್ಯ ಲಭಿಸಿದೆ. ವೈದಿಕ ಸಂಸ್ಕೃತಿ, ವೇದ ಸಂಸ್ಕೃತಿಯ ಬೆಳವಣಿಗೆಗೆ ಹಾಗೂ ಸನಾತನ ಧರ್ಮದ ಉಳಿವಿಗೆ ಕಾಂಚಿಮಠ ಮಹತ್ತರ ಕೊಡುಗೆ ನೀಡಿದೆ ಎಂದು ತಿಳಿಸಿದರು.

ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಕಾಂಚಿಶ್ರೀಗಳಿಗೆ ಗುರುವಂದನೆ ಸಮರ್ಪಿಸಿದರು. ಕರ್ನಾಟಕ ಮಾನವಹಕ್ಕು ಆಯೋಗದ ಅಧ್ಯಕ್ಷ ಟಿ.ಶ್ಯಾಮಭಟ್, ಕಾಂಚಿ ಕಾಮಕೋಟಿ ಮಠದ ವಿದ್ವಾಂಸರು ಉಪಸ್ಥಿತರಿದ್ದರು.

ಕಯ್ಯೂರು ನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು. ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ವಂದಿಸಿದರು. ಖ್ಯಾತ ಕಲಾವಿದರಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಬಯಲಾಟ ನಡೆಯಿತು.

ಅವಿನಾಭಾವ ಸಂಬಂಧ

ಕಲೆ, ಸಂಸ್ಕೃತಿ, ಧಾರ್ಮಿಕ ವಿಚಾರಗಳಲ್ಲಿ ಮಹತ್ತರ ಸಾಧನೆ ಮಾಡುತ್ತಿರುವ ಎಡನೀರು ಮಠ ಹಾಗೂ ಕಾಂಚಿ ಕಾಮಕೋಟಿ ಮಠದೊಂದಿಗಿನ ಸಂಬಂಧ ಅವಿನಾಭಾವದಿಂದ ಕೂಡಿದೆ. ಭೂ ಮಸೂದೆ ಕಾಯ್ದೆಗೆ ಸಂಬಂಧಿಸಿ ಕಾನೂನು ಹೋರಾಟದ ಮೂಲಕ ದೇಶದ ಪರಮೋಚ್ಚ ನ್ಯಾಯಾಲಯದಲ್ಲಿ ಶ್ರೀಮಠದ ಹೆಸರು ದಾಖಲಾಗುವಂತೆ ಮಾಡಿದ್ದ ಕೃಷ್ಣೈಕ್ಯ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಶ್ರೀಶಂಕರ ಪರಂಪರೆಯನ್ನು ಪ್ರಚಾರಪಡಿಸುವುದರ ಜತೆಗೆ ಕಲೆ, ಶಿಕ್ಷಣಕ್ಕೂ ಮಹತ್ವದ ಕೊಡುಗೆ ನೀಡಿದ್ದಾರೆ. ಇದೇ ಪರಂಪರೆ ಮುಂದುವರಿಸುತ್ತಿರುವ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರ ಸೇವಾತತ್ಪರತೆ ಶ್ಲಾಘನೀಯ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net