ಸೊಪ್ಪಿನ ವ್ಯಾಪಾರಿಗೆ ₹8 ಲಕ್ಷ ಧೋಖಾ

ಹಣ ಬದಲಾಯಿಸಿಕೊಳ್ಳುವ ನೆಪದಲ್ಲಿ ಕೃತ್ಯ ನಡೆದಿದೆ. ಸಂತ್ರಸ್ತನಿಗೆ ಪೇಪರ್ ತುಂಬಿದ ಬ್ಯಾಗ್ ನೀಡಿದ್ದ ಆರೋಪಿಗಳು, ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲು, ತನಿಖೆ ಚುರುಕು.
AI Photo
AI Photo
Published on: 

ಬೆಂಗಳೂರು: ಭಾರತೀಯ ಹಣ ಕೊಟ್ಟರೆ, ಅದಕ್ಕೆ ದುಪ್ಪಟ್ಟು ಪ್ರಮಾಣದಲ್ಲಿ ಸೌದಿ ಕರೆನ್ಸಿ ನೀಡುವುದಾಗಿ ನಂಬಿಸಿ ಸೊಪ್ಪಿನ ವ್ಯಾಪಾರಿಯೊಬ್ಬರಿಗೆ ನ್ಯೂಸ್ ಪೇಪರ್ ಬ್ಯಾಗ್ ನೀಡಿ, 8 ಲಕ್ಷ ರೂ. ವಂಚಿಸಿದ ಪ್ರಕರಣ ಜಯನಗರದಲ್ಲಿ ನಡೆದಿದೆ.

ಶಿವಾಜಿನಗರ ನಿವಾಸಿ ಶಕಿಲ್ ಅಹಮ್ಮದ್ (34) ಹಣ ಕಳೆದುಕೊಂಡವರು. ಈ ಸಂಬಂಧ ನಾಲ್ವರ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆ.27ರ ಭಾನುವಾರ ಬೆಳಗ್ಗೆ 6 ಗಂಟೆಗೆ ಬನಶಂಕರಿ ಮೆಟ್ರೋ ನಿಲ್ದಾಣದ ಬಳಿ ವಂಚನೆ ನಡೆದಿದೆ. ಆರೋಪಿಗಳು, ಸೊಪ್ಪಿನ ವ್ಯಾಪಾರಿಯಿಂದ 8 ಲಕ್ಷ ರೂ.ಗಳು ಇರುವ ಬ್ಯಾಗನ್ನು ಸ್ವೀಕರಿಸಿದ್ದಾರೆ. ಬಳಿಕ ಅವರು ಒಂದು ಬ್ಯಾಗನ್ನು ನೀಡಿ, ಇದರಲ್ಲಿ ಸೌದಿ ಹಣ ಇದೆ ಎಂದು ತಿಳಿಸಿ, ಅಲ್ಲಿಂದ ಪರಾರಿಯಾಗಿದ್ದಾರೆ.

ಆರೋಪಿಗಳು ಕೊಟ್ಟ ಬ್ಯಾಗಿನಲ್ಲಿ ಸೌದಿ ಕರೆನ್ಸಿ ಇದೆ ಎಂದು ನಂಬಿದ್ದ ಸಂತ್ರಸ್ತ, ಮನೆಗೆ ಬಂದು ಬ್ಯಾಗ್ ತೆರೆದಾಗ ಅದರಲ್ಲಿ ನ್ಯೂಸ್ ಪೇಪರ್ ತುಂಬಿರುವುದನ್ನು ಗಮನಿಸಿ ಕಂಗಾಲಾಗಿದ್ದಾನೆ. ಕೂಡಲೇ ಆರೋಪಿಗಳಿಗೆ Phone ಕರೆ ಮಾಡಿದ್ದ. ಅವರ ನಂಬರ್ ಸ್ವಿಚ್‌ಆ್ ಬರುತ್ತಿದ್ದರಿಂದ ಗಾಬರಿಯಾಗಿ ಠಾಣೆಗೆ ಓಡಿ ಬಂದು ದೂರು ಸಲ್ಲಿಸಿದ್ದಾರೆ.

ದೂರು ಸ್ವೀಕರಿಸಿದ ಪೊಲೀಸರು, ಹಣ ವರ್ಗಾವಣೆ ಮಾಡಿಕೊಳ್ಳಲು ನಿಂತಿದ್ದ ಸ್ಥಳದ ಸುತ್ತಮುತ್ತಲಿನ ಸ್ಥಳಗಳಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸಲು ತಂಡ ರಚನೆ ಮಾಡಿದ್ದು, ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಸೊಪ್ಪು ವ್ಯಾಪಾರಿ ಬಳಿ ಅಷ್ಟೊಂದು ಹಣ ಎಲ್ಲಿಂದ ಬಂತು.?

ಅಕ್ರಮವಾಗಿ ಹಣ ಬದಲಾಯಿಸಿಕೊಳ್ಳುವಾಗ ಲಕ್ಷಾಂತ ರೂ. ವಂಚನೆ ಆಗಿರುವ ಬಗ್ಗೆ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆ ಪೊಲೀಸರು, ಸಂತ್ರಸ್ತ ಶಕಿಲ್‌ನನ್ನೂ ತನಿಖೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ. ಸೊಪ್ಪಿನ ವ್ಯಾಪಾರಿ ಬಳಿ 8 ಲಕ್ಷ ರೂ. ಹಣ ಎಲ್ಲಿಂದ ಬಂತು ಎಂಬುದರ ಜಾಡು ಹಿಡಿದು ತನಿಖೆ ಶುರು ಮಾಡಿದ್ದಾರೆ. ಈ ವೇಳೆ ಸಂತ್ರಸ್ತ ‘ಸಾಲ ಮಾಡಿದ್ದೆ ಮತ್ತು ಸೈಟ್‌ವೊಂದನ್ನು ಮಾರಿದ್ದೆ’ ಎಂದು ಅನುಮಾನಾಸ್ಪದ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net