ಕೃಷಿಕರ ಕೋಟಾದಡಿ ಪಿಸಿಎಂಬಿ ವಿದ್ಯಾರ್ಥಿಗಳಿಗೆ ತರಬೇತಿ: ಗ್ರೀನೋತ್ಸವ ಫೋರಂನ ಸಂಪನ್ಮೂಲ ವ್ಯಕ್ತಿ ಡಾ.ಪ್ರೇಮಾ

Greenotsav Forum Press Meet Mandya
Published on

ಮಂಡ್ಯ: ಗ್ರೀನೋತ್ಸವ ಫೋರಂ, ಅನನ್ಯ ಹಾರ್ಟ್ಸ್ ವತಿಯಿಂದ ಕೃಷಿಕರ ಕೋಟಾದಡಿ ಬರುವ ಪಿಸಿಎಂಬಿ ವಿದ್ಯಾರ್ಥಿಗಳಿಗೆ ಮೇ.1ರಿಂದ ನಗರದ ಹೊಂಬೇಗೌಡ ಸ್ಮಾರಕ ಕಾನೂನು ಕಾಲೇಜು ಕಟ್ಟಡದಲ್ಲಿ ಪ್ರಾಯೋಗಿಕ ಪರೀಕ್ಷಾ ಪೂರ್ವ ತರಬೇತಿ ಆಯೋಜಿಸಲಾಗಿದೆ ಎಂದರು ಫೋರಂನ ಸಂಪನ್ಮೂಲ ವ್ಯಕ್ತಿ ಡಾ.ಪ್ರೇಮಾ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್, ವೈದ್ಯರ ಸಂಖ್ಯೆ ಹೆಚ್ಚಾದ ಕಾರಣ ವಿದ್ಯಾರ್ಥಿಗಳ ಒಲವು ಇತರೆ ಕೋರ್ಸ್‌ಗಳತ್ತ ತಿರುಗಿರುತ್ತದೆ. ಆದ್ದರಿಂದ ಕೃಷಿ ಕೋಟಾದಡಿ ಬರುವ ರೈತರ ಮಕ್ಕಳಿಗೆ ಕೃಷಿ ಮತ್ತು ಕೃಷಿಯೇತರ ವಿಜ್ಞಾನ ಕೋರ್ಸ್‌ಗಳಿಗೆ ಅರ್ಹತೆ ಪಡೆಯಲು ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳುವವರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯಲ್ಲಿ ಮೂರು ವರ್ಷದಿಂದ ತರಬೇತಿ ನೀಡಲಾಗುತ್ತಿದೆ. ಈ ಪೈಕಿ ಶೇ.80ರಷ್ಟು ವಿದ್ಯಾರ್ಥಿಗಳು ಪ್ರತೀ ವರ್ಷ ವಿವಿಧ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿದ್ದಾರೆ. ತರಬೇತಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯನ್ನೂ ಎದುರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೃಷಿಯಿಂದ ವಿಮುಖರಾಗುವರೇ ಹೆಚ್ಚಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಕಬ್ಬಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಒಮ್ಮೆ ಬಿತ್ತನೆ ಮಾಡಿ ಸ್ವಲ್ಪ ಸಮಯ ನೋಡಿಕೊಂಡರೆ ಸಾಕು. ನಂತರ ಅದರ ಪಾಲನೆ ಮಾಡುವ ಅಗತ್ಯವಿಲ್ಲ. ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ. ಇದೊಂದು ಸೋಮಾರಿ ಬೆಳೆ. ಕಬ್ಬು ಕಟಾವಿಗೆ ಬರುವಷ್ಟರಲ್ಲಿ ಅದಕ್ಕಾಗಿ ಲಕ್ಷಾಂತರ ರೂ ಖರ್ಚು ಮಾಡಿರುತ್ತಾರೆ. ಕಾರ್ಖಾನೆಗೆ ಸರಬರಾಜು ಮಾಡಿ ಲಕ್ಷ ಕೈಗೆ ಬಂದರೆ ರೈತರ ಸಂತಸಕ್ಕೆ ಪಾರವೇ ಇರುವುದಿಲ್ಲ. ಇದರಲ್ಲಿ ಲಾಭ ಎಷ್ಟು, ನಷ್ಟ ಎಷ್ಟು, ಶ್ರಮದ ಬಗ್ಗೆಯೂ ಚಿಂತನೆ ಮಾಡುವುದಿಲ್ಲ. ಹೀಗಾಗಿ ಕೃಷಿ ಲಾಭದಾಯಕವಾಗಿಲ್ಲ ಎಂಬುದು ಬಹುತೇಕರ ಅಭಿಪ್ರಾಯ ಎಂದರು.

ಕಬ್ಬಿನ ಬೆಳೆಯ ಮಧ್ಯದಲ್ಲಿ ವಿವಿಧ ಬೆಳೆ ಬೆಳೆಯುವ ಮೂಲಕ ಲಾಭ ಮಾಡಿಕೊಳ್ಳಬಹುದು. ಕೇವಲ ಕಬ್ಬನ್ನೇ ನಂಬಿ ಕುಳಿತರೆ ಸಾಲುವುದಿಲ್ಲ. ಬೆಳೆ ಪದ್ದತಿಯನ್ನು ಮೈಗೂಡಿಸಿಕೊಳ್ಳಬೇಕು. ಭೂಮಿಯಲ್ಲಿ ವೈವಿಧ್ಯಮಯ ಬೆಳೆ ಬೆಳೆಯುವ ಮೂಲಕ ಕೃಷಿಯನ್ನು ಲಾಭದಾಯಕವಾಗಿಸಲು ಪ್ರಯತ್ನ ಮಾಡಬಹುದು. ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಮದಲ್ಲೂ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಅರಣ್ಯಗಾರಿಕೆ, ಗೃಹ ವಿಜ್ಞಾನ, ಬಯೋಟೆಕ್ನಾಲಜಿ, ಕೃಷಿ ಮಾರುಕಟ್ಟೆ, ಮೀನುಗಾರಿಕೆ, ಕೃಷಿ ಇಂಜಿನಿಯರಿಂಗ್ ಪದವೀಧರರು ಇರಬೇಕೆಂಬುದು ನಮ್ಮ ಅಪೇಕ್ಷೆಯಾಗಿದೆ ಎಂದು ಹೇಳಿದರು.

ಅನನ್ಯ ಹಾರ್ಟ್ಸ್ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ, ಫೋರಂನ ಅಧ್ಯಕ್ಷೆ ಆರತಿ, ಉಪಾಧ್ಯಕ್ಷೆ ನೀತಾ ರೈನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net