ಹಸಿರೀಕರಣಕ್ಕೆ ಅಮೃತ್ 2.0 ವರದಾನ

23 KAMPLI 07
ಕಂಪ್ಲಿಯಲ್ಲಿ ಮಹಿಳಾ ಸ್ವಸಹಾಯ ಗುಂಪಿನ ಕಾರ್ಯಕರ್ತೆಯರಿಗೆ ಅಮೃತ 2.0 ಯೋಜನೆಯಡಿ ತಾಯಿ ಹೆಸರಿನಲ್ಲೊಂದು ಸಸಿ ಕಿಟ್‌ಗಳನ್ನು ಅಧ್ಯಕ್ಷ ಭಟ್ಟ ಪ್ರಸಾದ್ ವಿತರಿಸಿದರು. ಸದಸ್ಯರಾದ ಸಿ.ಆರ್.ಹನುಮಂತ, ವಿ.ಎಲ್.ಬಾಬು, ಅಧಿಕಾರಿಗಳಾದ ಶರಣಪ್ಪ, ಪ್ರಶಾಂತ ಚಿತ್ರಗಾರ ಇತರರಿದ್ದರು.
Published on

ಕಂಪ್ಲಿ: ಪಟ್ಟಣದಲ್ಲಿ ಐತಿಹಾಸಿಕ ಸೋಮಪ್ಪ ಕೆರೆ ಸಭಾಂಗಣದಲ್ಲಿ, ಪುರಸಭೆ ಆಡಳಿತದಿಂದ ಕೇಂದ್ರ ಸರ್ಕಾರದ ಅಮೃತ್ 2.0 ಯೋಜನೆಯಡಿ ತಾಯಿ ಹೆಸರಿನಲ್ಲೊಂದು ಸಸಿ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ, ಪಟ್ಟಣವನ್ನು ಹಚ್ಚಹಸಿರು, ಸುಂದರ ಪಟ್ಟಣವನ್ನಾಗಿ ರೂಪಿಸಲು ಅಮೃತ್ 2.0 ಯೋಜನೆ ವರದಾನವಾಗಿದೆ. ಪಟ್ಟಣದ ತುಂಬ ಸಸಿಗಳನ್ನು ನೆಟ್ಟು ಪೋಷಿಸುವ ಯೋಜನೆ ಇದಾಗಿದೆ ಎಂದರು.

ಪರಿಸರ ವಿಭಾಗದ ಕಿರಿಯ ಅಭಿಯಂತರ ಶರಣಪ್ಪ ಮಾತನಾಡಿ, ಅಮೃತ್ 2.0 ಯೋಜನೆಯಡಿ ಪಟ್ಟಣದ ಎಲ್ಲ ರಸ್ತೆಗಳ ಬದಿ, ಎಲ್ಲ ಉದ್ಯಾನಗಳಲ್ಲಿ ಸಸಿ ನೆಡಲು ಯೋಜಿಸಲಾಗಿದೆ. ಸೋಮಪ್ಪ ಕೆರೆ ಪ್ರದೇಶದಲ್ಲಿ 500 ಸಸಿ ನೆಡಲಾಗುವುದು. ಸಸಿಗಳನ್ನು ನೆಟ್ಟು 2 ವರ್ಷ ತನಕ ಪೋಷಿಸಲು ಮಹಿಳಾ ಸ್ವಸಹಾಯ ಗುಂಪಿನ ಕಾರ್ಯಕರ್ತೆಯರನ್ನು ನೇಮಿಸಲಾಗಿದೆ. 3 ಗುಂಪುಗಳನ್ನು ಆಯ್ಕೆ ಮಾಡಿದ್ದು, ಇವರಿಗೆ ಗುರುತಿನ ಚೀಟಿ, ಕಿಟ್, ವಾಟರ್‌ಬಾಟಲ್‌ಗಳನ್ನು ವಿತರಿಸಲಾಗಿದೆ ಎಂದರು.

ಯೋಜನೆ ಕುರಿತು ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು. ಪುರಸಭೆ ಸದಸ್ಯರಾದ ಸಿ.ಆರ್.ಹನುಮಂತ, ವಿ.ಎಲ್.ಬಾಬು, ವ್ಯವಸ್ಥಾಪಕ ಪ್ರಶಾಂತ್ ಚಿತ್ರಗಾರ, ಸಿಬ್ಬಂದಿ ಆನಂದ ಗಿರಿಜಾಲಿ, ರೇಣುಕಮ್ಮ, ರೋಜಾ, ಪ್ರಮುಖರಾದ ಆಟೋ ರಾಘು, ಜಿ.ಸುಧಾಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net