ತಲ್ಲೂರು ಹೆದ್ದಾರಿಗೆ ಹಸಿರು ಶೃಂಗಾರ

tree
Published on

ಬಿ.ರಾಘವೇಂದ್ರ ಪೈ ಗಂಗೊಳ್ಳಿ

ತಲ್ಲೂರು-ಹೆಮ್ಮಾಡಿ ನಡುವಿನ ಹೆದ್ದಾರಿಯ ಇಕ್ಕೇಲಗಳಲ್ಲಿ ನೆಟ್ಟ ಗಿಡಗಳು ಸುಂದರವಾಗಿ ಬೆಳೆದು ನಿಂತಿದ್ದು ಸ್ಥಳಿಯರ ಹಾಗೂ ವಾಹನ ಸವಾರರ ನೆಮ್ಮದಿಗೆ ಕಾರಣವಾಗಿದೆ. ಈ ಮೂಲಕ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅರಣ್ಯ ಇಲಾಖೆ ಐದು ವರ್ಷಗಳ ಹಿಂದೆ ಕೈಗೊಂಡಿದ್ದ ಹಸಿರೀಕರಣ ಯೋಜನೆಗೆ ಈಗ ಫಲ ದೊರಕಿದೆ.

2019ರಲ್ಲಿ ಅರಣ್ಯ ಇಲಾಖೆ ಕೈಗೊಂಡ ಹೆದ್ದಾರಿ ಹಸುರೀಕರಣ ಯೋಜನೆಯಡಿ ತಲ್ಲೂರಿನಿಂದ ತ್ರಾಸಿ, ತೆಕ್ಕಟ್ಟೆಯಿಂದ ಕುಂದಾಪುರ ಹಾಗೂ ತ್ರಾಸಿ-ಗಂಗೊಳ್ಳಿ ಹೆದ್ದಾರಿ ಇಕ್ಕೆಲಗಳಲ್ಲಿ ನೆಟ್ಟಿರುವ ಗಿಡಗಳು ಬೆಳೆದು ನಿಂತಿವೆ. ಹಲವು ಗಿಡಗಳಲ್ಲಿ ವಿವಿಧ ಜಾತಿಯ ಹೂವುಗಳು ಅರಳಿದ್ದು, ಹಲಸು, ಹೊಂಗೆ, ಬಾದಾಮಿ, ದೂಪ, ಅಶ್ವಥ ಇತ್ಯಾದಿ ಗಿಡಗಳು ಮರವಾಗಿ ಬೆಳೆದಿವೆ.

ದಶಕದ ಹಿಂದೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಹಸಿರಿನಿಂದ ಕೂಡಿತ್ತು.. ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಸಾವಿರಾರು ಮರಗಳನ್ನು ಕಡಿಯಲಾಯಿತು. ನೆರಳಿನ ಆಸರೆ ಇಲ್ಲದಿದ್ದರಿಂದ ಸುಡುಬಿಸಿಲಿನ ತಾಪಕ್ಕೆ ಸ್ಥಳೀಯರು, ಪ್ರಯಾಣಿಕರು ಬೆಂದುಹೋಗುತ್ತಿದ್ದರು. ಅರಣ್ಯ ಇಲಾಖೆ ಕೈಗೊಂಡ ಹಸಿರುತ್ಥಾನ ಹೊಸ ವಿಶ್ವಾಸ ಮೂಡಿಸಿದೆ. ಈ ಯೋಜನೆ ಅಡಿಯಲ್ಲಿ ಭವಿಷ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅನೇಕ ಕಡೆಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳ್ಳಬೇಕಿದೆ.

4 ಸಾವಿರ ಗಿಡಗಳ ನಾಟಿ

ಹೆದ್ದಾರಿ ಬದಿಯಲ್ಲಿ ವನಮಹೋತ್ಸವ, ಹಸಿರುತ್ಥಾನ ಯೋಜನೆ ಸಹಿತ ಹಲವು ಪರಿಸರ ಪೂರಕ ಕಾರ್ಯಾಗಾರಗಳ ಮೂಲಕ ಇದುವರೆಗೆ ನಾಲ್ಕು ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡಲಾಗಿದೆ. ವನಮಹೋತ್ಸವದಂದು ಮಾತ್ರ ನೆಡಲಾಗುವ ಗಿಡಗಳು ಬಳಿಕ ಸೂಕ್ತ ನಿರ್ವಹಣೆ ದೊರೆಯದೇ ಇರುವುದರಿಂದ ಬಾಡುವಿಕೆ ಅಥವಾ ಹಾನಿಗೊಳ್ಳುತ್ತಿವೆ. ಇದರಿಂದ ಮರಗಳ ಸಂಖ್ಯೆ ಏರಿಕೆ ಸಾಧ್ಯವಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ಪರಿಸರೋತ್ಥಾನ ಕಾರ್ಯದಿಂದ ಮರಗಳ ಸಮೃದ್ಧ ಬೆಳವಣಿಗೆಯಾಗಲಿದೆ ಎಂದು ಪರಿಸರ ಪ್ರೇಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಚತುಷ್ಪಥ ಹೆದ್ದಾರಿಗಾಗಿ ಸಾವಿರಾರು ಮರಗಳು ನಾಶಗೊಂಡ ಬಳಿಕ ಅರಣ್ಯ ಇಲಾಖೆ ಕೈಗೊಂಡ ಹಸಿರುತ್ಥಾನ ಹೊಸ ವಿಶ್ವಾಸ ಮೂಡಿಸಿದೆ. ಹೆದ್ದಾರಿ ಬದಿ ನೆಟ್ಟ ಗಿಡಗಳು ಉತ್ತಮವಾಗಿ ಬೆಳೆದಿದ್ದು, ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯಬೇಕು. ಪರಿಸರ ಸಂರಕ್ಷಣೆ ಜತೆಗೆ ರಾ.ಹೆ.ಇಕ್ಕೆಲಗಳಲ್ಲಿ ಗಿಡನೆಟ್ಟು ಪೋಷಿಸುವ ಕಾರ್ಯ ನಡೆಯಬೇಕು. -ನರಸಿಂಹ, ಪರಿಸರ ಪ್ರೇಮಿ, ಹೆಮ್ಮಾಡಿ https://www.vijayavani.net/bantwadi-dam-installation https://www.vijayavani.net/brihath-geethothsava-mangalothsava-in-udupi-mutt

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net