ಗ್ರೀನ್‌ಬರ್ಡ್ಸ್ ಕಾರ್ಯಕರ್ತರ ಸಭೆ: ಠೇವಣಿ ಹಣ ವಾಪಸ್ ದೊರೆಯುವ ವಿಶ್ವಾಸ

mysore
Published on

ಮೈಸೂರು; ಜಿಲ್ಲೆಯ ಗ್ರೀನ್‌ಬರ್ಡ್ಸ್ ಕಾರ್ಯಕರ್ತರ ಸಭೆ ನಗರದ ಗನ್‌ಹೌಸ್ ಬಳಿ ಇರುವ ಕುವೆಂಪು ಉದ್ಯಾನದಲ್ಲಿ ನಡೆಯಿತು.


ವಂಚನೆಗೆ ಒಳಗಾಗಿದ್ದ ಲಕ್ಷಾಂತರ ಗ್ರಾಮೀಣ ಬಡಜನರು, ಮಹಿಳೆಯರಿಗೆ ಹೋರಾಟದ ಫಲದಿಂದ ಠೇವಣಿ ಹಣ ವಾಪಸ್ ಬರುವ ಸೂಚನೆಗಳು ಕಂಡುಬರುತ್ತಿದ್ದು, ಈ ಬಗ್ಗೆ ಚರ್ಚಿಸಲು ಸಭೆ ನಡೆಸಲಾಯಿತು.


ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಲಕ್ಷಾಂತರ ಕೂಲಿಕಾರ್ಮಿಕರು, ಬಡವರು, ರೈತರು ಠೇವಣಿ ಮಾಡಿ ಹೂಡಿಕೆ ಮಾಡಿದ್ದ ಗ್ರೀನ್ ಬರ್ಡ್ಸ್ ಆಗ್ರೋ ಕಂಪನಿ ವಂಚನೆ ಪ್ರಕರಣದ ಬಗ್ಗೆ 10 ವರ್ಷಗಳಿಂದ ಹೋರಾಟ ಮಾಡಿದ್ದು, ಇದರ ಫಲವಾಗಿ ಗ್ರೀನ್ ಬರ್ಡ್ಸ್ ಸಂಸ್ಥೆಯ ಆಸ್ತಿಗಳ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.


ರಾಜ್ಯ ಸರ್ಕಾರ ನೇಮಕ ಮಾಡಿದ ವಿಶೇಷ ಪ್ರಾಧಿಕಾರದ ಮುಖ್ಯಸ್ಥ ಆದಿತ್ಯ ಬಿಸ್ವಾಸ್ ಅವರು ಸುಮಾರು 150 ಕೋಟಿ ರೂ. ಆಸ್ತಿ ಹರಾಜು ಪ್ರಕ್ರಿಯೆ ನಡೆಸಲು ಬಹಿರಂಗ ಪ್ರಕಟಣೆ ಹೊರಡಿಸಿದ್ದಾರೆ. ಆದರೆ, ಪ್ರಕಟಣೆ ಹೊರಡಿಸಿರುವ ಆಸ್ತಿಗಳ ಮೌಲ್ಯ ಈಗ ದುಪ್ಪಟ್ಟು ಏರಿಕೆಯಾಗಿದೆ.

ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಸ್ಪರ್ಧಾತ್ಮಕವಾಗಿ ಖರೀದಿ ಮಾಡಿದರೆ ಸುಮಾರು 1,40,000 ಠೇವಣಿದಾರರಿಗೆ ಹೂಡಿಕೆ ಮಾಡಿರುವ ಹಣ ವಾಪಸ್ ದೊರೆಯುತ್ತದೆ. ಆಸ್ತಿಗಳು ಕೂಡ ಫಲವತ್ತಾದ ಭೂಮಿಯಾಗಿದ್ದು ವ್ಯವಸಾಯಕ್ಕೆ ಯೋಗ್ಯವಾಗಿದೆ. ಠೇವಣಿದಾರರು ಸಹ ಹರಾಜು ಪ್ರಕ್ರಿಯೆ ಮೂಲಕ ಆಸ್ತಿ ಖರೀದಿ ಮಾಡಬಹುದಾಗಿದೆ ಎಂದು ಹೇಳಿದರು.


ನಂಜನಗೂಡು ತಾಲೂಕಿನ ಹುಲ್ಲಹಳ್ಳಿ-ಹುರ ಮುಖ್ಯರಸ್ತೆಯಲ್ಲಿರುವ ಮಾದಾಪುರ ಗ್ರಾಮದ ತೆಂಗು, ಅಡಕೆ ತೋಟ ಹಾಗೂ ನಂಜನಗೂಡು-ಚಾಮರಾಜನಗರ ಮುಖ್ಯ ರಸ್ತೆಯಲ್ಲಿರುವ ದೊಡ್ಡಕೌಲಂದೆ ಗ್ರಾಮದಲ್ಲಿ ಸುಮಾರು 6 ಎಕರೆ ತೆಂಗಿನ ತೋಟ ಭೂಮಿಯನ್ನು ಹರಾಜು ಮಾಡಲಾಗುತ್ತಿದೆ. ಇದರಲ್ಲಿ ಪಾಲ್ಗೊಳ್ಳಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.


ರೈತ ಮುಖಂಡರಾದ ಬರಡನಪುರ ನಾಗರಾಜ್, ಪುಷ್ಪಪ್ರಸಾದ್, ರೂಪಾ, ಅತ್ತಹಳ್ಳಿ ದೇವರಾಜ್, ಕಿರಗಸೂರ ಶಂಕರ್, ಜಗದೀಶ್, ತಿ.ನರಸೀಪುರ ರೂಪಾ, ಪುಷ್ಪಾ, ತಗಡೂರು ಮಾದೇವಪ್ಪ, ಉಮೇಶ್, ಚಿನ್ನಂಬಳ್ಳಿ ನಿಂಗಣ್ಣ, ನಂಜನಗೂಡು ಗೀತಮ್ಮ, ಗಿರಿಜಮ್ಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net