ಗ್ರೀನ್ ಝೋನೆಂದು ಮನಸ್ಸಿಗೆ ಬಂದಂತೆ ಇರದಿರಲು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಸೂಚನೆ

290420 Kushtagi Traders Meeting
Published on

ಕುಷ್ಟಗಿ: ಜಿಲ್ಲೆಯನ್ನು ಗ್ರೀನ್ ಝೋನ್ ಆಗಿಯೇ ಮುಂದುವರಿಸಿಕೊಂಡು ಹೋಗಬೇಕಿದೆ. ಹೀಗಾಗಿ ಲಾಕ್‌ಡೌನ್ ಸಡಿಲಿಕೆ ನಂತರವೂ ಮುಂಜಾಗ್ರತೆ ವಹಿಸಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವರ್ತಕರ ಸಭೆಯಲ್ಲಿ ಮಾತನಾಡಿದರು. ಗ್ರೀನ್ ಝೋನ್ ಎಂಬ ಕಾರಣಕ್ಕೆ ಮನಸ್ಸಿಗೆ ಬಂದಂತೆ ಇರುವುದು ಬೇಡ. ಬೇರೆ ಜಿಲ್ಲೆ ಹಾಗೂ ರಾಜ್ಯದಿಂದ ಸಾವಿರಕ್ಕೂ ಹೆಚ್ಚು ಜನ ಬಂದಿದ್ದಾರೆ. ಅವರಲ್ಲಿ ರೆಡ್ ಝೋನ್ ಜಿಲ್ಲೆಗಳಿಂದಲೂ ಬಂದವರೂ ಇದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಆರೋಗ್ಯ ಸಂಬಂಧಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ತರಕಾರಿ, ಕಿರಾಣಿ ವರ್ತಕರಿಗೆ ಬೆಳಗ್ಗೆ 6ರಿಂದ 10ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಪಟ್ಟಣದಲ್ಲಿ ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮುಂದುವರಿಯಲಿದೆ. ತಳ್ಳುವ ಬಂಡಿ ಮೂಲಕ ತರಕಾರಿಯನ್ನೂ ಮನೆಗೆ ತಲುಪಿಸಲಾಗುತ್ತಿದೆ. ವಿವಿಧ ಗ್ರಾಮಗಳಿಂದ ಬರುವ ಗ್ರಾಹಕರು ನಿಗದಿತ ಸಮಯದಲ್ಲಿ ಬಂದು ಹೋಗಬೇಕು. ವ್ಯಾಪಾರಿಗಳು ಹಾಗೂ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ವ್ಯವಹರಿಸಬೇಕು ಎಂದರು.

ತಹಸೀಲ್ದಾರ್ ಎಂ.ಸಿದ್ದೇಶ ಮಾತನಾಡಿ, ಟ್ರೇಡ್ ಲೈಸನ್ಸ್ ಹೊಂದಿರುವ ವರ್ತಕರು ಮಾತ್ರ ಅಂಗಡಿ ತೆರೆದು ವ್ಯವಹರಿಸಬೇಕು. ಕ್ಷೌರಿಕ ಹಾಗೂ ಬಟ್ಟೆ ಅಂಗಡಿ ತೆರೆಯುವಂತಿಲ್ಲ. ಯಾವುದೇ ಅಂಗಡಿಗಳಲ್ಲಿ ಗುಟ್ಖಾ, ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ಗೂಡ್ಸ್ ವಾಹನ ಹೊರತುಪಡಿಸಿ ಉಳಿದ ಖಾಸಗಿ ವಾಹನಗಳ ಓಡಾಟವನ್ನೂ ನಿಷೇಧಿಸಲಾಗಿದೆ. ಲಾಕ್‌ಡೌನ್ ಅವಧಿ ಮುಗಿಯುವ ವರೆಗೆ ಮದುವೆ ಇತರ ಸಾಮೂಹಿಕ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ. ಬೀದಿ ಬದಿ ಪಾನ್‌ಶಾಪ್ ಹಾಗೂ ಟಿ ಸೆಂಟರ್‌ಗಳಿಗೂ ಅವಕಾಶ ಇರುವುದಿಲ್ಲ. ಐದು ವರ್ಷದೊಳಗಿನ ಹಾಗೂ 60ವರ್ಷ ಮೇಲ್ಪಟ್ಟವರ ಸಂಚಾರಕ್ಕೂ ಅವಕಾಶ ಇರುವುದಿಲ್ಲ ಎಂದು ಮಾಹಿತಿ ನೀಡಿದರು. ತಾಪಂ ಇಒ ಕೆ.ತಿಮ್ಮಪ್ಪ, ಸಿಪಿಐ ಜಿ.ಚಂದ್ರಶೇಖರ, ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ್ ಇದ್ದರು. ಪಟ್ಟಣದ ವಿವಿಧ ವರ್ತಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net