

ಮರಿದೇವ ಹೂಗಾರ ಹುಬ್ಬಳ್ಳಿ
ಸ್ಮಾರ್ಟ್ ಸಿಟಿ ಕಂಪನಿ ಕೈಗೆತ್ತಿಕೊಂಡಿರುವ ರಾಜಕಾಲುವೆ ‘ಗ್ರೀನ್ ಕಾರಿಡಾರ್’ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಆದರೂ, ಸಣ್ಣ ಪುಟ್ಟ ನಾಲಾಗಳಿಂದ ಹರಿದು ಬರುವ ನೀರು ಅಂದಗೆಡಿಸಲಾರಂಭಿಸಿದೆ.
ನಗರದ ಉಣಕಲ್‌ನಿಂದ ಗಬ್ಬೂರು ಕ್ರಾಸ್‌ವರೆಗಿನ (9.25 ಕಿಮೀ) ಗ್ರೀನ್ ಕಾರಿಡಾರ್ ಕಾಮಗಾರಿ ಆರಂಭಿಸಲಾಗಿದೆ. ಮೊದಲ ಹಂತದ 640 ಮೀಟರ್ ಪ್ರಾಯೋಗಿಕ ಕಾಮಗಾರಿ ಪೂರ್ಣಗೊಂಡಿದ್ದು, ಎರಡನೇ ಹಂತದ ಕಾಮಗಾರಿ ಇನ್ನೆರಡು ತಿಂಗಳಲ್ಲಿ ಮುಗಿಯುವ ಲಕ್ಷಣಗಳು ಕಂಡಬರುತ್ತಿವೆ. ಇದರ ಮಧ್ಯೆ ಪೂರ್ಣಗೊಂಡ ಗ್ರೀನ್ ಕಾರಿಡಾರ್‌ನಲ್ಲಿ ಕಸ, ಹಸಿರು ಸಸ್ಯಗಳು ಬೆಳೆದು ದುರ್ನಾತ ಬೀರಲಾರಂಭಿಸಿದೆ.
ರಾಜಕಾಲುವೆ ಗ್ರೀನ್ ಕಾರಿಡಾರ್‌ನಲ್ಲಿ ವಾಣಿಜ್ಯ ನಗರಿಯ ಕೊಳಚೆ ನೀರು ಹರಿದು ಬರುತ್ತಿದೆ. ರಾಜಕಾಲುವೆಯ ಎರಡೂ ಬದಿ ಕಲ್ಲುಗೋಡೆ ಕಟ್ಟಲಾಗಿದೆ. ಮಧ್ಯೆ ಬಿದ್ದಿದ್ದ ಮಣ್ಣು ಸಾಗಿಸಿ ಸಿಮೆಂಟ್ ನೆಲಹಾಸು ಮಾಡಲಾಗಿದೆ. ಉಣಕಲ್ ಕೆರೆಯಿಂದ ಹನುಮಂತ ನಗರದ ಮಾರ್ಗವಾಗಿ ಮುಂದೆ ಹೋಗುವ ಗ್ರೀನ್ ಕಾರಿಡಾರ್ ತುಂಬೆಲ್ಲ ತ್ಯಾಜ್ಯ, ಸಸಿಗಳು ಬೆಳೆದು ನಿಂತಿವೆ. ನಿರ್ವಹಣೆ ಇನ್ನೂ ಸ್ಮಾರ್ಟ್ ಸಿಟಿ ಕಂಪನಿ ಕೈಯಲ್ಲಿದೆ. ಆದರೆ, ಅನಧಿಕೃತ ನಾಲಾದಿಂದ ಹರಿದು ಬರುವ ಚರಂಡಿ ನೀರು, ಮಾಡಿರುವ ಕಾಮಗಾರಿಯ ಅಂದಕೆಡಿಸುತ್ತಿದೆ.
ಅಧಿಕೃತವಾಗಿ ನಾಲಾಗಳಿಂದ ಹರಿದು ಬರುವ ನೀರು ರಾಜಕಾಲುವೆಗೆ ಸರಾಗವಾಗಿ ಸೇರುತ್ತಿದೆ. ಇದಕ್ಕೆ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ.
ಬಹುತೇಕ ಹೊಸ ಬಡಾವಣೆಗಳಲ್ಲಿ ಗಟಾರು ನಿರ್ಮಿಸಿಲ್ಲ. ಹೀಗಾಗಿ, ಇಲ್ಲಿನ ನೀರು ಗಟಾರುಗಳ ಮೂಲಕ ರಾಜಕಾಲುವೆ ಸೇರುವುದಿಲ್ಲ. ರಸ್ತೆ, ಕೊಳಚೆ ಪ್ರದೇಶಗಳಲ್ಲಿ ಹರಿಯುವ ಇಲ್ಲಿನ ನೀರು ರಾಜಕಾಲುವೆ ಸೇರಿ ಕಸ ಸಂಗ್ರಹವಾಗಲು ಕಾರಣವಾಗಿದೆ. ಇಂತಹ ಬಡಾವಣೆಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಾಲಾಗಳ ಸಂಪರ್ಕವನ್ನು ಮಾಡಿಕೊಡುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಇದ್ದ ಅನುದಾನದಲ್ಲಿ ನಿರ್ಮಾಣ ಅಸಾಧ್ಯವೆಂಬ ಮಾತುಗಳು ಸ್ಮಾರ್ಟ್‌ಸಿಟಿ ಕಂಪನಿಯವರಿಂದ ಕೇಳಿಬರುತ್ತಿವೆ.
ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯಡಿ ಮಾರ್ಗದುದ್ದಕ್ಕೂ 12 ಸೇತುವೆಗಳನ್ನು ನಿರ್ಮಿಸಲಾಗಿದೆ. ಅದರ ಬಳಿ ಚೇಂಬರ್‌ಗಳನ್ನು ನಿರ್ಮಿಸಿಕೊಡಲಾಗಿದೆ. ಇದಕ್ಕೆ ನಾಲಾಗಳ ಸಂಪರ್ಕ ಕಲ್ಪಿಸಿದರೆ ಸಾಕು, ನೀರು ರಾಜಕಾಲುವೆಗೆ ಬಂದು ಸೇರಿದರೆ ತ್ಯಾಜ್ಯ ಸಂಗ್ರಹವಾಗುವುದಿಲ್ಲ. ಆದರೆ, ರಸ್ತೆ, ಖಾಲಿ ನಿವೇಶನಗಳ ಮೂಲಕ ಹರಿದುಬರುವ ನೀರು ಚೇಂಬರ್‌ಗೆ ಜೋಡಿಸುವವರು ಯಾರು ? ಎಂಬ ಚರ್ಚೆಗಳು ನಡೆದಿವೆ.
ಗಟಾರು ಮೂಲಕ ಹರಿಯದ ನೀರು ಹಲವು ಸಮಸ್ಯೆಗಳನ್ನು ತಂದೊಡ್ಡಿದೆ. ರಾಜಕಾಲುವೆ ಗ್ರಿನ್ ಕಾರಿಡಾರ್ ಇನ್ನಷ್ಟು ಅಂದಗೊಳ್ಳಬೇಕಾದರೆ ಎಲ್ಲರ ಸಹಭಾಗಿತ್ವ ಅಗತ್ಯ. ಆದರೆ, ‘ನಾನು ಮಾಡೆ, ನೀನು ಬಿಡೆ’ ಎಂಬ ಲೆಕ್ಕಾಚಾರದಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಈಗಾಗಲೇ ನಿರ್ಮಿಸಿರುವ ಸೈಕಲ್ ಟ್ರಾೃಕ್, ಹಸಿರು ವನಗಳು ಜನರ ಪ್ರಯೋಜನಕ್ಕೆ ಬಾರದಂತಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ರಾಜಕಾಲುವೆ ಗ್ರೀನ್ ಕಾರಿಡಾರ್ ನಿರ್ಮಿಸಿದ್ದೇವೆ. ಇನ್ನಷ್ಟು ಕಾಮಗಾರಿ ಬಾಕಿ ಇದೆ. ಇದರ ಮಧ್ಯೆ ಗ್ರಿನ್ ಕಾರಿಡಾರ್‌ನಲ್ಲಿ ಹಸಿರು ಬೆಳೆದು, ತ್ಯಾಜ್ಯ ಸಂಗ್ರಹವಾಗಿರುವುದು ಗಮನಕ್ಕೆ ಬಂದಿದೆ. ವಿಲೇವಾರಿ ಮಾಡಲಾಗುವುದು. ಗಟಾರು ಮೂಲಕ ಹರಿಯದ ನೀರಿನಿಂದ ಸಮಸ್ಯೆ ಆಗುತ್ತಿದೆ. ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.ಬಸವರಾಜ, ಸ್ಮಾರ್ಟ್ ಸಿಟಿ ಲಿಮಿಟೆಡ್ ಡಿಜಿಎಂ