

ಜೊಯಿಡಾ: ಸುಪಾ ಅಣೆಕಟ್ಟಿನ ವಿದ್ಯುತ್ ಉತ್ಪಾದನಾ ಕೇಂದ್ರದಿಂದ ಅನತಿ ದೂರದಲ್ಲಿರುವ ಅವೇಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗುಂದ ಗ್ರಾಮಕ್ಕೆ ಇಂದಿನವರೆಗೂ ಹಸಿ ಮರದ ಮೇಲೆ ವಿದ್ಯುತ್ ಲೈನ್ ಹಾಕಿ ಮನೆಗಳಿಗೆ ಸಂಪರ್ಕ ನೀಡಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು 79 ವರ್ಷ ಕಳೆದರೂ ಬಾಡಗುಂದಕ್ಕೆ ಹಸಿ ಮರಗಳೇ ವಿದ್ಯುತ್ ಕಂಬಗಳಾಗಿವೆ!
ಬಾಡಗುಂದದಲ್ಲಿ 8ಕ್ಕೂ ಹೆಚ್ಚು ಮನೆಗಳಿಗೆ ಸುಮಾರು ಎರಡು ದಶಕಗಳಿಂದ ವಿದ್ಯುತ್ ತಂತಿಗಳನ್ನು ಮರದ ಮೇಲಿಂದಲೇ ಹಾಕಿ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಮಳೆಗಾಲದಲ್ಲಿ ಮರಗಳು ನೆಲಕ್ಕೆ ಬಾಗಿ ವಿದ್ಯುತ್ ಪ್ರವಹಿಸುತ್ತಿರುವ ತಂತಿಗಳು ಕೈಗೆ ನಿಲುಕುವಂತಿವೆ. ಏನಾದರೂ ಅವಘಡ ಸಂಭವಿಸುವ ಮುನ್ನವೇ ಕಾಂಕ್ರೀಟ್ ಕಂಬಗಳನ್ನು ಅಳವಡಿಸಿಕೊಡಿ ಎಂದು ಸಂಬಂಧಿಸಿದ ಹೆಸ್ಕಾಂ ಹಾಗೂ ಗ್ರಾಪಂಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.
ಹಸಿ ಮರ ಮುರಿದು ಬಿದ್ದಾಗ ಗ್ರಾಮಸ್ಥರು ಹೆಸ್ಕಾಂ ಸಿಬ್ಬಂದಿಯನ್ನು ಕರೆಸಿ ಮರದ ಕಂಬಗಳನ್ನು ಹಾಕಿ ಹಾಗೂ ಮರಗಳಿಗೆ ತಂತಿ ಕಟ್ಟಿಕೊಂಡು ಮನೆಮನೆಗೆ ವಿದ್ಯುತ್ ಸಂಪರ್ಕ ಸರಿಪಡಿಸಿಕೊಳ್ಳುತ್ತಿದ್ದಾರೆ. ಕೆಲವು ಕಡೆ ಮರದ ಕೊಂಬೆಗಳಿಗೆ ತಂತಿ ಕಟ್ಟಿಕೊಂಡು ಅದರ ಮೇಲೆ ಬಲ್ಬ್ ಹಾಕುವ ದುಸ್ಥಿತಿಯಿದೆ.
ಸಿಮೆಂಟ್ ಕಂಬ ಹಾಕಲು ಅನುಮತಿ ಇಲ್ಲವೆನ್ನುವ ಕೆಇಬಿ ಅಧಿಕಾರಿಗಳಿಗೆ, ಮರದ ಮೇಲೆ ವೈರ್ ಹಾಕಲು ಹೇಗೆ ಅನುಮತಿ ಸಿಗುತ್ತಿದೆ ಎಂಬುದು ಯಕ್ಷಪ್ರಶ್ನೆ! ಶಾಲೆಗೆ ಹೋಗುವ ಮಕ್ಕಳು ಸೇರಿದಂತೆ ಗ್ರಾಮಸ್ಥರು ಹಾಗೂ ದನಕರುಗಳಿಗೆ ಇದು ಅಪಾಯಕಾರಿಯಾಗಿದ್ದು, ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ ಎನ್ನುವುದು ಸ್ಥಳೀಯರ ಅಳಲು.
ಅವೇಡಾ ಗ್ರಾಪಂ ಹಾಗೂ ಹೆಸ್ಕಾಂ ಅಧಿಕಾರಿಗಳಿಗೆ ಜನರು ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಯವರು ಗಣೇಶಗುಡಿಯಲ್ಲಿನ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರೂ ಪರಿಸ್ಥಿತಿ ಬದಲಾಗಿಲ್ಲ. ಬರೀ ಆಶ್ವಾಸನೆ ಕೊಡುವುದನ್ನು ಬಿಟ್ಟು ಕೂಡಲೇ ವಿದ್ಯುತ್ ಕಂಬ ಅಳವಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಸರ್ಕಾರ ಮತ್ತು ಹೆಸ್ಕಾಂ ಅಧಿಕಾರಿಗಳು ಇಲ್ಲಿಯ ಮನೆಗಳಿಗೆ ಅಧಿಕೃತವಾಗಿ ವಿದ್ಯುತ್ ಮೀಟರ್ ಅಳವಡಿಸಿ ವಿದ್ಯುತ್ ಸಂಪರ್ಕ ಒದಗಿಸಿ ಎರಡು ದಶಕಗಳೇ ಕಳೆದಿವೆ. ಹಸಿ ಮರಗಳಿಗೆ ಅಳವಡಿಸಿರುವ ವಿದ್ಯುತ್ ತಂತಿಗಳನ್ನು ಬದಲಾಯಿಸಿ ಸಿಮೆಂಟ್ ಕಂಬ ಹಾಕಲು ಹಾಕಲು ಅನುಮತಿ ಇಲ್ಲವೆಂದು ಹೇಳುತ್ತಿದ್ದಾರೆ. ಇನ್ನೂ ಎಷ್ಟು ವರ್ಷ ನಾವು ಜೀವಭಯದಲ್ಲಿ ಬದುಕಬೇಕು? ಕೂಡಲೇ ಕಂಬ ಹಾಕಿ ಸರಿಪಡಿಸಿ ಇಲ್ಲವಾದರೆ ಏನಾದರೂ ಅಪಘಾತವಾದಲ್ಲಿ ಹೆಸ್ಕಾಂ ಮತ್ತು ಗ್ರಾಮ ಪಂಚಾಯಿತಿಯೆ ಹೊಣೆ ಹೊರಬೇಕು. ರಮೇಶ ಬಾಡಗುಂದ ನಿವಾಸಿ ವಿದ್ಯುತ್ ಕಂಬ ಒದಗಿಸಲು ಕ್ರಿಯಾ ಯೋಜನೆಯಲ್ಲಿ ಕಾಮಗಾರಿ ಸೇರಿಸಿ ಅಂದಾಜುಪತ್ರ ಸಿದ್ಧಪಡಿಸಿ ಟೆಂಡರ್ ಕರೆಯಲಾಗಿದೆ. ಕೂಡಲೇ ಕಾಮಗಾರಿ ಕೈಗೊಳ್ಳುವ ಬಗ್ಗೆ ಕ್ರಮ ಜರುಗಿಸಲಾಗುವುದು. | ನಜೀರಸಾಬ್ ಅಕ್ಕಿ ಪಿಡಿಒ, ಅವೇಡಾ ಗ್ರಾಪಂ