ತಿಪಟೂರು ಉಪಕಾರಾಗೃಹ ಪುನರಾರಂಭಕ್ಕೆ ಹಸಿರು ನಿಶಾನೆ

21 TPT Sub-Jail
Published on

ತಿಪಟೂರು: ಕೈದಿಗಳಿಗೆ ವಿಡಿಯೋ ಸಂವಾದ ಸೌಲಭ್ಯ ಸೇರಿ ಅಂದಾಜು 40 ಲಕ್ಷ ರೂ. ವೆಚ್ಚದಲ್ಲಿ ಅಗತ್ಯ ಸುರಕ್ಷತಾ ಸಲಕರಣೆಗಳನ್ನು ಅಳವಡಿಸಿದ ಬಳಿಕ ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ನಗರದ ಉಪಕಾರಾಗೃಹ ಮರು ಆರಂಭಕ್ಕೆ ಕೊನೆಗೂ ಹಸಿರು ನಿಶಾನೆ ಸಿಕ್ಕಿದೆ.

ರಾಜ್ಯ ಸರ್ಕಾರದ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಜಿಲ್ಲಾ ಅಧೀಕ್ಷಕರು ಸೆ.20ರಿಂದ ತಾಲೂಕು ಬಂದೀಖಾನೆ ಪುನರಾರಂಭಿಸುವಂತೆ ಪತ್ರ ಬರೆದಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.

ಉಪಕಾರಾಗೃಹ ಮರು ಆರಂಭಕ್ಕೆ ಸಂಬಂಧಿಸಿದಂತೆ ಡಿವೈಎಸ್‌ಪಿ ಎನ್.ಚಂದನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ, ರಾಜ್ಯ ಬಂದೀಖಾನೆ ವರಿಷ್ಠ ಅಧಿಕಾರಿಗಳ ಗಮನಕ್ಕೆ ತಂದಿದ್ದರು, ಈ ಹಿನ್ನೆಲೆಯಲ್ಲಿ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ.

ಪೊಲೀಸರಲ್ಲಿ ಮೂಡಿದ ನಿರಾಳತೆ: ನಗರದ ಬಂದೀಖಾನೆ ಸ್ಥಗಿತಗೊಂಡಿದ್ದರಿಂದ ಕಿಬ್ಬನಹಳ್ಳಿ, ನೊಣವಿನಕೆರೆ, ತಿಪಟೂರು ನಗರ, ಗ್ರಾಮಾಂತರ, ಹೊನ್ನವಳ್ಳಿ, ಚಿಕ್ಕನಾಯಕನಹಳ್ಳಿ, ಹಂದನಕೆರೆ, ತುರುವೇಕೆರೆ, ದಂಡಿನಶಿವರ, ಹುಳಿಯಾರು ಸೇರಿ ಒಟ್ಟು 10 ಠಾಣೆಗಳ ವ್ಯಾಪ್ತಿಯ ವಿಚಾರಣಾಧೀನ ಕೈದಿಗಳನ್ನು ತುಮಕೂರು ಜಿಲ್ಲಾ ಬಂದೀಖಾನೆಗೆ ಒಪ್ಪಿಸುವುದು, ವಿಚಾರಣೆಗೆ ನ್ಯಾಯಾಲಯಕ್ಕೆ ಕರೆತರುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಇದರ ನಡುವೆ ಕರೊನಾ ಆತಂಕ ಎದುರಾಗಿದ್ದು ಹೊತ್ತಲ್ಲದ ಹೊತ್ತಿನಲ್ಲಿ ಸಾರಿಗೆ ಬಸ್‌ಗಳಲ್ಲಿ ಕೈದಿಗಳನ್ನು ಕರೆದೊಯ್ಯುವುದು ಸುರಕ್ಷತೆ ದೃಷ್ಟಿಯಿಂದ ಪೊಲೀಸರಿಗೂ ಸವಾಲಿನ ಕೆಲಸವಾಗಿತ್ತು. ಇದೀಗ ನಿರಾಳಭಾವ ಮೂಡಿದೆ.

ವಿಜಯವಾಣಿ ಗಮನ ಸೆಳೆದಿತ್ತು: ತಿಪಟೂರಿನ ಉಪ ಬಂದೀಖಾನೆ ಸ್ಥಗಿತಗೊಂಡಿರುವ ಕುರಿತು ಜೂನ್ 17 ರಂದು ವಿಜಯವಾಣಿ ‘ಉಪ ಬಂದೀಖಾನೆಗೆ ಮುಕ್ತಿ ಯಾವಾಗ?’ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಗಮನಸೆಳೆದಿತ್ತು, ವರದಿಗೆ ತಡವಾಗಿಯಾದರೂ ಸ್ಪಂದನೆ ಸಿಕ್ಕಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸತತ ಪ್ರಯತ್ನದಿಂದ ಉಪ ಕಾರಾಗೃಹ ಪುನರಾರಂಭಕ್ಕೆ ಚಾಲನೆ ಸಿಕ್ಕಿದೆ. ನಮ್ಮ ಸಿಬ್ಬಂದಿ, ಇಲ್ಲಿಂದ ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಹೊಗಿ ಬರುವ ಶ್ರಮ, ಮತ್ತು ಕಾಲಹರಣ ತಪ್ಪಿದಂತಾಗಿದೆ. ಎನ್.ಚಂದನ್ ಕುಮಾರ್ ಡಿವೈಎಸ್‌ಪಿ ತಿಪಟೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net