

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಮರವಂತೆ ಔಟ್‌ಡೋರ್ ಬಂದರಿನ ದ್ವಿತೀಯ ಹಂತದ ಕಾಮಗಾರಿ ಆರಂಭಕ್ಕೆ ಎದುರಾಗಿದ್ದ ತೊಡಕು ನಿವಾರಣೆಯಾಗಿದೆ. ಸಿಆರ್‌ಜಡ್ ಸಮಸ್ಯೆಗೆ ಸಿಲುಕಿದ್ದ ಮರವಂತೆ ಹೊರಬಂದರಿನ ಎರಡನೇ ಹಂತದ ಕಾಮಗಾರಿಗೆ ಹಸಿರು ನಿಶಾನೆ ದೊರೆತಿದೆ.
ಕೇರಳ ಮಾದರಿಯ ಔಟ್‌ಡೋರ್ ಬಂದರು ನಿರ್ಮಾಣಕ್ಕೆ 2011ರಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. ಮೊದಲ ಹಂತದಲ್ಲಿ 55 ಕೋಟಿ ರೂ. ಟೆಂಡರ್ ಆಗಿದ್ದು, ಕೊಚ್ಚಿ ಮೂಲದ ಕಂಪನಿ ಗುತ್ತಿಗೆ ಪಡೆದು 2013ರಲ್ಲಿ ಕಾಮಗಾರಿ ಆರಂಭಿಸಿತ್ತು. ಬಂದರಿನ ದಕ್ಷಿಣದಲ್ಲಿ 525 ಮೀ. ಉದ್ದ ಬ್ರೇಕ್ ವಾಟರ್ ನಿರ್ಮಾಣ ನಡೆದ ಬೆನ್ನಲ್ಲೇ 2016ರಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಹಾನಿಗೊಳಗಾಗಿತ್ತು.
ಮರವಂತೆ ಹೊರಬಂದರಿನ ಎರಡನೇ ಹಂತದ ಕಾಮಗಾರಿಗೆ ನಾಲ್ಕು ವರ್ಷ ಹಿಂದೆ ಸರ್ಕಾರದಿಂದ 85 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ಮತ್ತು ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದರೂ ಸಿಆರ್‌ಜಡ್ ಕ್ಲಿಯರೆನ್ಸ್ ಇಲ್ಲದ್ದರಿಂದ ಕಾಮಗಾರಿ ಆರಂಭಕ್ಕೆ ಹಿನ್ನಡೆಯಾಗಿತ್ತು. ಬಂದರು ಮತ್ತು ಮೀನುಗಾರಿಕಾ ಇಲಾಖೆ ಕರಾವಳಿ ನಿರ್ವಹಣಾ ಯೋಜನೆ ನಕ್ಷೆ ಸಹಿತ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಕೊನೆಗೂ ಸಿಆರ್‌ಜಡ್ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ಮರುಜೀವ ದೊರಕಿದಂತಾಗಿದೆ
ಐದು ಸಾವಿರ ಮಂದಿಗೆ ಮರವಂತೆ ಬಂದರು ಜೀವನಾಧಾರವಾಗಿದ್ದು, 500ಕ್ಕೂ ಅಧಿಕ ದೋಣಿಗಳಿವೆ. ಮೊದಲ ಹಂತಕ್ಕೆ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಮೀನುಗಾರರು ಕಷ್ಟಗಳ ಎದುರಿಸಿದ್ದು, ವಿಪರೀತ ಗಾಳಿ, ಅಲೆಗಳ ಅಬ್ಬರವಿದ್ದಾಗ ದೋಣಿ ನಿಲುಗಡೆ, ಸಂಚಾರಕ್ಕೆ ಅಡಚಣೆಯಾಗುತ್ತಿತ್ತು.
ಔಟ್‌ಡೋರ್ ಬಂದರು ನಿರ್ಮಾಣ ಯೋಜನೆ 2016ರಲ್ಲೇ ಮುಕ್ತಾಯಗೊಳ್ಳಬೇಕಿತ್ತು. ಅಲ್ಲಿಂದ ಬಳಿಕ ಪ್ರತಿವರ್ಷವೂ ಪ್ರಾಕೃತಿಕ ವಿಕೋಪದಿಂದ ಅಡಚಣೆಯಾಗುತ್ತಲೇ ಇದ್ದು, ಮೀನುಗಾರರ ಜೀವನ ನರಕಸದೃಶವಾಗಿದೆ. ಈ ಹಿನ್ನೆಲೆಯಲ್ಲಿ 85 ಕೋಟಿ ರೂ. ವೆಚ್ಚದ ಎರಡನೇ ಹಂತದ ಕಾಮಗಾರಿ ಶೀಘ್ರವೇ ಆರಂಭಗೊಳ್ಳಬೇಕು. -ವಾಸುದೇವ ಖಾರ್ವಿ, ಸ್ಥಳೀಯ ಮೀನುಗಾರ ಮುಖಂಡ ಮರವಂತೆ ಔಟ್‌ಡೋರ್ ಬಂದರಿನ ದ್ವಿತೀಯ ಹಂತದ ಕಾಮಗಾರಿ ಆರಂಭಕ್ಕೆ ಎದುರಾಗಿದ್ದ ತೊಡಕು ನಿವಾರಣೆಯಾಗಿದೆ. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು. ಮೀನುಗಾರರಿಗೆ ಯಾವುದೇ ರೀತಿಯಲ್ಲಿ ತೊಂದರೆ, ಅನಾನುಕೂಲ ಆಗದಂತೆ ಕಾಮಗಾರಿ ನಿರ್ವಹಿಸಲು ಸೂಚನೆ ನೀಡಲಾಗುವುದು. -ಪ್ರಸನ್ನ ಶೇಟ್, ಎಕ್ಸಿಕ್ಯೂಟಿವ್ ಇಂಜಿನಿಯರ್, ಬಂದರು ಮತ್ತು ಮೀನುಗಾರಿಕೆ ಇಲಾಖೆ
ಪಾಯಿಂಟ್ಸ್ * 2011ರಲ್ಲಿ ಅನುಮೋದನೆ, 2013ರಲ್ಲಿ ನಿರ್ಮಾಣ ಆರಂಭ *2016ರಲ್ಲಿ ಪ್ರಾಕೃತಿಕ ವಿಕೋಪದಿಂದ ಸ್ಥಗಿತ *ಸಿಆರ್‌ಜಡ್ ನಿರಾಕ್ಷೇಪಣೆ ಪಡೆಯುವಲ್ಲಿ ಮೀನುಗಾರಿಕಾ ಇಲಾಖೆ ಯಶಸ್ವಿ