ಮತ್ಸಾಲಯ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್

Green signal for construction of Matsalaya
Published on

ಮಡಿಕೇರಿ:

ಈಗಾಗಲೇ ಹಲವು ವಿಶೇಷತೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕೊಡಗಿನಲ್ಲಿ ಆಧುನಿಕ ಶೈಲಿಯ ಅಕ್ವೇರಿಯಂ ಕೂಡ ಬರುವ ದಿನಗಳು ದೂರವಿಲ್ಲ. ಹಾರಂಗಿ ಅಣೆಕಟ್ಟೆ ವ್ಯಾಪ್ತಿಯಲ್ಲೇ ಮತ್ಸಾö್ಯಲಯ ನಿರ್ಮಾಣಕ್ಕೆ ಮೀನುಗಾರಿಕೆ ಸಚಿವ ಮಂಕಾಳ ಎಸ್. ವೈದ್ಯ ಸಹಮತ ಸೂಚಿಸಿದ್ದಾರೆ. ಇಲಾಖೆ ಅಧಿಕಾರಿಗಳು ಕೂಡ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಕ್ಕೆ ಬರಲಿದೆ.

ಮಲೆನಾಡಿನ ಮಡಿಲಲ್ಲಿ ಇರುವ ಕೊಡಗು ಪ್ರಾಕೃತಿಕ ಸೌಂದರ್ಯದಿAದಾಗಿ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಪ್ರತಿನಿತ್ಯವೂ ಸೆಳೆಯುತ್ತಿದೆ. ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಕಾಲ ಕಾಲಕ್ಕೆ ಸಾಕಷ್ಟು ಸವಲತ್ತುಗಳನ್ನು ಸರ್ಕಾರ ಒದಗಿಸುತ್ತಾ ಬಂದಿದೆ. ಆಧುನಿಕ ಜಮಾನ ಮತ್ತು ಸಮಯಕ್ಕೆ ಸರಿಯಾಗಿ ಬದಲಾಗುತ್ತಿರುವ ಟ್ರೆಂಡ್‌ಗೆ ಅನುಗುಣವಾಗಿ ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಒಂದಿಲ್ಲೊAದು ಆಕರ್ಷಣೆಗಳನ್ನು ಒದಗಿಸುತ್ತಾ ಬಂದಿದೆ. ಇದೀಗ ಮೀನುಗಾರಿಕೆ ಇಲಾಖೆ ಮುಖಾಂತರವೂ ಪ್ರವಾಸಿಗರಿಗಾಗಿ ಅನೇಕ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಲಾಗುತ್ತಿದೆ.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಪರಿಸರಕ್ಕೆ ಪೂರ ಸುಸ್ಥಿರ ಪ್ರವಾಸೋದ್ಯಮಕ್ಕೆ ಜಿಲ್ಲೆಯಲ್ಲಿ ಆದ್ಯತೆ ಕೊಡಲು ಆಸಕ್ತರಾಗಿದ್ದು, ಈ ನಿಟ್ಟಿನಲ್ಲಿ ತಮ್ಮ ಚಿಂತನೆಗಳನ್ನು ಸಾಕಷ್ಟು ಬಾರಿ ಹಂಚಿಕೊAಡಿದ್ದಾರೆ. ಇದೀಗ ಮೀನುಗಾರಿಕೆ ಇಲಾಖೆ ಮೂಲಕವೂ ಪ್ರವಾಸಿಗರನ್ನು ಆಕರ್ಷಿಸುವ ಸಾಧ್ಯತೆ ಬಗ್ಗೆ ಮೀನುಗಾರಿಕೆ ಸಚಿವ ಮಂಕಾಳ ಎಸ್. ವೈದ್ಯ ಅವರೊಂದಿಗೂ ಚರ್ಚೆ ನಡೆಸಿದ್ದು, ಡಾ. ಮಂತರ್ ಗೌಡ ಅವರ ಯೋಜನೆಗೆ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ. ಕೂಡಲೇ ಕಾರ್ಯೋನ್ಮುಖರಾಗುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೊಡಗಿನಲ್ಲಿ ಮೀನುಗಾರಿಕೆ ಇಲಾಖೆ ಮುಖಾಂತರ ಅಕ್ವೇರಿಯಂ ಆರಂಭಿಸುವುದು ಡಾ. ಮಂತರ್ ಗೌಡ ಅವರ ಚಿಂತನೆಗಳಲ್ಲಿ ಒಂದಾಗಿದೆ. ಆದರೆ ಸರ್ಕಾರದ ಸಂಪೂರ್ಣ ಅನುದಾನದಲ್ಲಿ ಅಕ್ವೇರಿಯಂ ನಿರ್ಮಾಣ ಮತ್ತು ನಿರ್ವಹಣೆ ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯವಾಗಿದ್ದು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಸಚಿವ ಮಂಕಾಳ ಎಸ್. ವೈದ್ಯ ಉತ್ಸುಕರಾಗಿದ್ದಾರೆ. ಈ ಸಂಬAಧ ಈಗಾಗಲೇ ಇಲಾಖೆ ಅಧಿಕಾರಿಗಳ ಜತೆಗೆ ಸಚಿವರು ಒಂದು ಸುತ್ತಿನ ಪ್ರಾಥಮಿಕ ಚರ್ಚೆ ನಡೆಸಿದ್ದು, ಅಗತ್ಯವಿರುವ ಜಾಗ ಗುರುತಿಸುವಂತೆಯೂ ಸೂಚಿಸಿದ್ದಾರೆ.

ಮೀನುಗಾರಿಕೆ ಇಲಾಖೆ ಅಡಿಯಲ್ಲಿ ಹಾರಂಗಿ ಜಲಾಶಯದ ಒತ್ತಿನಲ್ಲಿ ಸದ್ಯಕ್ಕೆ ಮೀನು ಮರಿ ಉತ್ಪಾದನಾ ಕೇಂದ್ರ ಕಾರ್ಯಾಚರಿಸುತ್ತಿದೆ. ಅಪರೂಪದ ಮಹಶೀರ್ ಮೀನು ಮರಿಗಳ ಉತ್ಪಾದನೆ ಸೇರಿದಂತೆ ರೈತರಿಗೆ ಸಾಕಲು ಅಗತ್ಯವಿರುವ ವಿವಿಧ ತಳಿಗಳ ಮೀನು ಮರಿಗಳನ್ನು ಈ ಕೇಂದ್ರದಲ್ಲಿ ಉತ್ಪಾದಿಸಿ ಪೂರೈಕೆ ಮಾಡಲಾಗುತ್ತಿದೆ. ಅಲಂಕಾರಿಕಾ ಮೀನುಗಳ ಪ್ರಾಯೋಗಿಕ ಸಾಕಾಣಿಕೆಯೂ ಇಲ್ಲಿ ನಡೆಯುತ್ತಿದೆ. ಇದೇ ಜಾಗದಲ್ಲಿ ಅಕ್ವೇರಿಯಂ ಸ್ಥಾಪಿಸಲು ಶಾಸಕ ಡಾ. ಮಂತರ್ ಗೌಡ ಆಸಕ್ತಿ ತೋರಿಸಿದ್ದಾರೆ.

ಮೀನು ಮರಿ ಉತ್ಪಾದನಾ ಕೇಂದ್ರದಲ್ಲಿ ಅಕ್ವೇರಿಯಂ ಸ್ಥಾಪನೆಯಾದರೆ ಸ್ಥಳಾವಕಾಶದ ಸಮಸ್ಯೆ ತಲೆದೋರಬಹುದು ಎನ್ನುವುದು ಅಧಿಕಾರಿಗಳ ಆತಂಕ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದರೆ ವಾಹನ ನಿಲುಗಡೆ ಸೇರಿದಂತೆ ವಿವಿಧ ತೊಂದರೆಗಳು ಎದುರಾಗಬಹುದು. ಮೀನು ಮರಿಗಳ ಉತ್ಪಾದನೆ ಸಂದರ್ಭ ಆರೋಗ್ಯಯುತ ಪರಿಸರದ ಅಗತ್ಯವಿದ್ದು, ಪ್ರವಾಸಿಗರ ಅತ್ಯಧಿಕ ಓಡಾಟದಿಂದ ಇದಕ್ಕೂ ಅಡ್ಡಿ ಆಗಬಹುದು ಎನ್ನಲಾಗುತ್ತಿದೆ.

ಹಾರಂಗಿ ಜಲಾಶಯದ ಒತ್ತಿನಲ್ಲಿ ನಿರ್ಮಾಣ ಆಗಿರುವ ಉದ್ಯಾನದಲ್ಲಿ ಮತ್ಸಾö್ಯಗಾರ ಕಾರ್ಯಾಚರಣೆ ಆರಂಭಿಸಿದರೆ ಎಲ್ಲಾ ರೀತಿಯಿಂದಲೂ ಅನುಕೂಲತೆ ಇದೆ ಎನ್ನುವುದು ಅಧಿಕಾರಿಗಳ ಮಾತು. ಇಲ್ಲಿ ವಾಹನ ನಿಲುಗಡೆಗೆ ವಿಶಾಲ ಜಾಗವಿದೆ. ಉದ್ಯಾನ, ಸಂಗೀತ ಕಾರಂಜಿಯೂ ಇಲ್ಲಿರುವುದರಿಂದ ಪ್ರವಾಸಿಗರಿಗೆ ಒಂದೇ ಸ್ಥಳದಲ್ಲಿ ಹೆಚ್ಚಿನ ಪ್ರವಾಸಿ ಆಕರ್ಷಣೆಗಳ ವೀಕ್ಷಣೆಗೆ ಅವಕಾಶ ಆಗುತ್ತದೆ ಎನ್ನುವ ಸಲಹೆಗಳು ಕೇಳಿಬಂದಿದೆ. ಬಹುತೇಕ ಇದೇ ಜಾಗವೇ ಅಂತಿಮ ಆಗುವ ಎಲ್ಲಾ ಸಾಧ್ಯತೆಗಳು ಇದೆ.

ದೇಶ ವಿದೇಶಗಳ ಬಗೆ ಬಗೆಯ ಮೀನುಗಳನ್ನು ಒಂದೇ ಸ್ಥಳದಲ್ಲಿ ವೀಕ್ಷಿಸುವ ಅವಕಾಶವನ್ನು ಪ್ರವಾಸಿಗರಿಗೆ ಕಲ್ಪಿಸುವ ಮಹತ್ವದ ಉದ್ದೇಶ ಅಕ್ವೇರಿಯಂ ನಿರ್ಮಾಣದ ಹಿಂದೆ ಇದೆ. ಇದು ಹಾರಂಗಿ ಮಾತ್ರವಲ್ಲದೆ ಕೊಡಗಿಗೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ಅನುಕೂಲ ಆಗಬಹುದು ಎನ್ನಲಾಗುತ್ತಿದೆ. ಶಾಸಕ ಡಾ. ಮಂತರ್ ಗೌಡ ಕೂಡ ಇದೇ ಉದ್ದೇಶದಿಂದ ಹಾರಂಗಿಯಲ್ಲಿ ಅಕ್ವೇರಿಯಂ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿ ತೋರಿಸಿದ್ದು, ಯೋಜನೆಯನ್ನು ಆದಷ್ಟು ಬೇಗ ಅನುಷ್ಠಾನಕ್ಕೆ ತರುವ ವಿಶ್ವಾಸದಲ್ಲಿದ್ದಾರೆ.

ಕಾವೇರಿ ನದಿಯಲ್ಲಿ ಮಾತ್ರ ಹೆಚ್ಚಾಗಿ ಕಂಡು ಬರುವ ಅಪರೂಪದ ಮಹಶೀರ್ ತಳಿಯ ಮೀನುಗಳು ಕಾವೇರಿಯ ಉಪನದಿ ಹಾರಂಗಿಯಲ್ಲಿ ದೊಡ್ಡ ಪ್ರಮಾಣದಲ್ಲಿದೆ. ಈ ಮೀನುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಹಾರಂಗಿ ಅಣೆಕಟ್ಟೆಯಿಂದ ಕೂಡಿಗೆ ಸೇತುವೆ ತನಕ ಮೀನುಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ. ಹಾರಂಗಿ ಸೇತುವೆ ಬಳಿ ಸೋಪಾನ ಕಟ್ಟೆ ಮಾದರಿಯಲ್ಲಿ ನದಿ ಬದಿಯಲ್ಲಿ ಕಟ್ಟೆ ಕಟ್ಟಿ ಇಲ್ಲಿ ಮೀನುಗಳಿಗೆ ಪ್ರವಾಸಿಗರ ಮೂಲಕ ಆಹಾರ ನೀಡುವ ಯೋಜನೆ ಬಗ್ಗೆಯೂ ಸಚಿವ ಮಂಕಾಳ ಎಸ್. ವೈದ್ಯ ಆಸಕ್ತಿ ತೋರಿಸಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೆ ಬಂದರೂ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಬಹುದಾಗಿದೆ.

ಕೊಡಗಿನಲ್ಲಿ ಎರಡು ಸ್ಥಳಗಳನ್ನು ಮತ್ಯಧಾಮವನ್ನಾಗಿ ಘೋಷಣೆ ಮಾಡಲು ಈ ಹಿಂದಿನ ಸರ್ಕಾರ ಉದ್ದೇಶಿಸಿತ್ತು. ಹಾಲಿ ಮೀನುಗಾರಿಕೆ ಸಚಿವ ಮಂಕಾಳ ಎಸ್. ವೈದ್ಯ ಕೂಡ ಈ ವಿಷಯದಲ್ಲಿ ಆಸಕ್ತಿ ತೋರಿಸಿದ್ದಾರೆ. ಕುಶಾಲನಗರ ತಾಲೂಕಿನ ಕಾವೇರಿ ನಿಸರ್ಗಧಾಮ ಮತ್ತು ಮಡಿಕೇರಿ ತಾಲೂಕಿನ ಪಾಕದಲ್ಲಿ ಮತ್ಸö್ಯಧಾಮ ಘೋಷಿಸಿಸುವುದಕ್ಕೆ ಸಂಬAಧಿಸಿದAತೆ ಸಚಿವರು ಅಧಿಕಾರಿಗಳಿಂದ ಮಾಹಿತಿ ಕೇಳಿದ್ದಾರೆ. ಎಲ್ಲವೂ ಅಂದುಕೊAಡAತೆ ಆದರೆ ಅಪರೂಪದ ಮಹಶೀರ್ ಮೀನುಗಳ ತಾಣವಾದ ಈ ಎರಡೂ ಪ್ರದೇಶಗಳು ಆದಷ್ಟು ಶೀಘ್ರ ಮತ್ಸö್ಯಧಾಮವಾಗಿ ಘೋಷಣೆ ಆಗಲಿದೆ. ಈ ಮೂಲಕ ಇವೆರಡೂ ಸ್ಥಳಗಳು ಪ್ರವಾಸಿತಾಣ ಆಗುವುದು ಮಾತ್ರವಲ್ಲದೆ, ಇಲ್ಲಿ ಮೀನುಗಳ ರಕ್ಷಣೆಗೆ ಹೆಚ್ಚಿನ ಕಾನೂನು ಬಲ ಸಿಗಲಿದೆ.

ಹಾರಂಗಿ ಜಲಾಶಯಕ್ಕೆ ವರ್ಷಪೂರ್ತಿ ನೂರಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಈಗ ಸಂಗೀತ ಕಾರಂಜಿ, ಸಾಕಾನೆ ಶಿಬಿರ ಹಾಗೂ ಬೃಂದಾವನ ಇದೆ. ಇಲ್ಲಿ ಸರ್ಕಾರಿ ಮತ್ಸಾö್ಯಲಯ ಸ್ಥಾಪಿಸಿದಲ್ಲಿ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ. ಹಾರಂಗಿ ಮೀನುಗಾರಿಕೆ ಪ್ರದೇಶದಲ್ಲಿ ಖಾಲಿ ಇರುವ ಜಾಗದಲ್ಲಿ ಮತ್ಸಾö್ಯಲಯ ಸ್ಥಾಪಿಸಿ, ಕೊಡಗಿನ ಪ್ರವಾಸೋದ್ಯಮ ಬಲಪಡಿಸಲು ಸಚಿವರಲ್ಲಿ ಮನವಿ ಮಾಡಿಕೊಂಡಿದ್ದು, ಅವರು ಪೂರಕವಾಗಿ ಸ್ಪಂದಿಸಿದ್ದಾರೆ.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ

ಹಾರAಗಿಯಲ್ಲಿ ಅಕ್ವೇರಿಯಂ ಸ್ಥಾಪಿಸಲು ಶಾಸಕ ಡಾ. ಮಂತರ್ ಗೌಡ ಮನವಿ ಮಾಡಿಕೊಂಡಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಮತ್ಸಾö್ಯಲಯ ಆರಂಭಕ್ಕೆ ಬೇಕಾದ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾರಂಗಿಯಲ್ಲಿ ಮೀನುಗಳಿಗೆ ಆಹಾರ ಕೊಡಲು ಪ್ರವಾಸಿಗರಿಗೆ ಅವಕಾಶ ಆಗುವಂತೆ ವ್ಯವಸ್ಥೆ ಮಾಡಿ ಪ್ರವಾಸಿ ಆಕರ್ಷಣೆ ಹೆಚ್ಚಿಸಲೂ ಚಿಂತಿಸಲಾಗಿದೆ.
ಮ0ಕಾಳ ಎಸ್. ವೈದ್ಯ, ಮೀನುಗಾರಿಕೆ ಮತ್ತು ಬಂದರು ಸಚಿವ

ಹಾರAಗಿಯಲ್ಲಿ ಅಕ್ವೇರಿಯಂ ಸ್ಥಾಪನೆ ಕುರಿತಂತೆ ಸಚಿವರು ಅಧಿಕಾರಿಗಳ ಜತೆಗೆ ಚರ್ಚೆ ನಡೆಸಿದ್ದಾರೆ. ಪಿಪಿಪಿ ಮಾದರಿಯಲ್ಲಿ ಅಕ್ವೇರಿಯಂ ಸ್ಥಾಪನೆ ಮಾಡಲಾಗುವುದು. ಸೂಕ್ತ ಜಾಗವನ್ನು ಸದ್ಯದಲ್ಲೇ ಗುರುತಿಸಲಾಗುವುದು. ಕಾವೇರಿ ನಿಸರ್ಗಧಾಮ ಮತ್ತು ಪಾಕದಲ್ಲಿ ಮತ್ಸö್ಯಧಾಮ ಘೋಷಣೆ ಸಂದರ್ಭ ಸಚಿವರು ಪೂರಕ ಮಾಹಿತಿ ಕೇಳಿದ್ದು, ಅವುಗಳನ್ನು ಕೊಡಲಾಗಿದೆ.
ಸಚಿನ್, ಉಪನಿರ್ದೇಶಕ, ಮೀನುಗಾರಿಕೆ ಇಲಾಖೆ, ಕೊಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net