

ಬೆಂಗಳೂರು ಗ್ರಾಮಾಂತರ: ಪಶು ವೈದ್ಯ ಸಂಘ ಹಾಗೂ ಸರ್ಕಾರದ ಹಗ್ಗಾ-ಜಗ್ಗಾಟದಿಂದ ರಾಜ್ಯಾದ್ಯಂತ ಅ.2ರಿಂದ ಆರಂಭವಾಗಬೇಕಿದ್ದ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮಕ್ಕೆ ಎದುರಾಗಿದ್ದ ವಿಘ್ನ ನಿವಾರಣೆಯಾಗಿದೆ.
ಸಂಘದ ಕೆಲ ಬೇಡಿಕೆಗಳಿಗೆ ಸರ್ಕಾರ ಒಪ್ಪಿದ್ದು, ಅ.12ರಿಂದ ಎಲ್ಲ ಜಿಲ್ಲೆಗಳಲ್ಲೂ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.
ಕರೊನಾ ತೀವ್ರವಾಗಿ ಹರಡುತ್ತಿರುವುದು ಹಾಗೂ ಪಶುಗಳಲ್ಲಿ ಚರ್ಮಗಂಟು ಕಾಯಿಲೆ ಕಾಣಿಸಿಕೊಂಡಿರುವ ಸಂದರ್ಭದಲ್ಲಿ ಕಾರ್ಯಕ್ರಮ ಮುಂದೂಡುವುದು ಒಳಿತು ಎಂದು ಪಶು ವೈದ್ಯ ಸಂಘ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಈ ಬಗ್ಗೆ ಸರ್ಕಾರ ಚರ್ಚಿಸಿ ಸುರಕ್ಷತಾ ಪರಿಕರ ವಿತರಣೆ ಸೇರಿ ಮತ್ತಿತರ ವಿಶೇಷ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದೆ, ಜತೆಗೆ ಚರ್ಮಗಂಟು ಸೋಂಕಿರುವ ಪಶುಗಳನ್ನು ಹೊರತುಪಡಿಸಿ ಆರೋಗ್ಯವಂತ ಪಶುಗಳಿಗಷ್ಟೆ ಲಸಿಕೆ ಹಾಕುವ ಷರತ್ತಿಗೆ ಸಮ್ಮತಿ ಸೂಚಿಸಿದೆ ಎಂದು ರಾಜ್ಯ ಪಶುವೈದ್ಯ ಸಂಘದ ಅಧ್ಯಕ್ಷ ಎಸ್.ಸಿ ಸುರೇಶ್ 'ವಿಜಯವಾಣಿ'ಗೆ ತಿಳಿಸಿದ್ದಾರೆ.
1.1 ಕೋಟಿ ಜಾನುವಾರುಗಳಿಗೆ ಲಸಿಕೆ: ರಾಜ್ಯದಲ್ಲಿ 1.1 ಕೋಟಿ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, 65 ಸಾವಿರ ವೈದ್ಯಕೀಯ ಸಿಬ್ಬಂದಿ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ, 45 ದಿನದ ಅಭಿಯಾನದಲ್ಲಿ ಪ್ರತಿ ಹಳ್ಳಿಗಳಲ್ಲಿ ಪ್ರತಿದಿನ ಸುಮಾರು 70 ರೈತರನ್ನು ಸಂಪರ್ಕಿಸಿ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ, ಲಸಿಕೆ ಹಾಕಲ್ಪಟ್ಟ ಜಾನುವಾರು ಮಾಹಿತಿಯನ್ನು ಇನ್ಾ ತಂತ್ರಾಂಶದಲ್ಲಿ ದಾಖಲಿಸಿ ಆನ್‌ಲೈನ್‌ನಲ್ಲಿ ಮಾಹಿತಿ ದೊರೆಯುವ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಸಿಕೆ ಹಾಕದಿದ್ದರೆ ನಷ್ಟ: ಕಾಲುಬಾಯಿ ರೋಗ ತಗುಲಿದ ಜಾನುವಾರುಗಳಲ್ಲಿ ಶೇ.40 ಹಾಲಿನ ಇಳುವರಿ ಕಡಿಮೆಯಾಗುತ್ತದೆ, ಹೈನೋದ್ಯಮಕ್ಕೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ, ಈ ರೋಗ ಸಾಂಕ್ರಾಮಿಕವಾಗಿರುವುದರಿಂದ ವೇಗವಾಗಿ ಆರೋಗ್ಯವಂತ ಜಾನುವಾರುಗಳಿಗೂ ಸೋಂಕು ತಗುಲುತ್ತದೆ.
ಸ್ವಂತ ವಾಹನ ಬಳಕೆಗೆ ಅನುಮತಿ: ವೈದ್ಯಕೀಯ ಸಿಬ್ಬಂದಿ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿರುವುದರಿಂದ ಸಿಬ್ಬಂದಿ ಸ್ವಂತ ವಾಹನ ಬಳಸಲು ಅನುಮತಿ ನೀಡಲಾಗಿದೆ. ಸರ್ಕಾರದ ವಾಹನಗಳಲ್ಲಿ ಹೆಚ್ಚಿನ ಸಿಬ್ಬಂದಿ ತೆರಳಿದರೆ ಕಷ್ಟವಾಗುತ್ತದೆ ಎಂಬ ಆತಂಕ ಎದುರಾಗಿರುವುದರಿಂದ ಸ್ವಂತ ವಾಹನಕ್ಕೆ ತಗುಲುವ ವೆಚ್ಚವನ್ನು ಸರ್ಕಾರ ಭರಿಸಲಿದೆ.
ಕರೊನಾ ನಡುವೆಯೂ ಕಾಲುಬಾಯಿ ಲಸಿಕಾ ಕಾರ್ಯಕ್ರಮಕ್ಕೆ ಮುಂದಾಗಲಾಗಿದೆ, ದೇಶವನ್ನು ಕಾಲುಬಾಯಿ ರೋಗಮುಕ್ತಗೊಳಿಸುವ ಉದ್ದೇಶದೊಂದಿಗೆ ಎಲ್ಲ ಸಿಬ್ಬಂದಿ ಕರ್ತವ್ಯ ನಿರ್ವಹಣೆಗೆ ಮುಂದಾಗಲಿದ್ದಾರೆ. ಎಸ್.ಸಿ ಸುರೇಶ್, ಅಧ್ಯಕ್ಷ, ರಾಜ್ಯ ಪಶುವೈದ್ಯ ಸಂಘ ಗ್ರಾಮಾಂತರ ಜಿಲ್ಲೆಯಲ್ಲೂ ಅ.12ರಿಂದ ಕಾರ್ಯಕ್ರಮ ಆರಂಭಿಸಲಾಗುವುದು. ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ, ಹೆಚ್ಚಿನ ವಾಹನ ಸೌಲಭ್ಯ ಕಲ್ಪಿಸಲಾಗಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯಕ್ರಮ ಯಶಸ್ವಿಗೊಳಿಸಲಾಗುವುದು. ಡಾ.ಬಾಲಚಂದ್ರ, ಉಪನಿರ್ದೇಶಕ, ಪಶುಪಾಲನಾ ಇಲಾಖೆ, ಬೆಂ.ಗ್ರಾಮಾಂತರ