ಇ-ಶ್ರಮ್ ಪ್ರಚಾರ ವಾಹನಕ್ಕೆ ಚಾಲನೆ

e sram
 ದೇವನಹಳ್ಳಿ ಜಿಲ್ಲಾಡಳಿತಭವನ ಆವರಣದಲ್ಲಿ ಇ-ಶ್ರಮ್ ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಹಸಿರು ನಿಶಾನೆ ತೋರಿಸಿದರು. ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿವಿಲ್ ನ್ಯಾಯಾಧೀಶ ಭೋಲಾ ಪಂಡಿತ್, ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ್ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ನೀಡಿ ಸಾಮಾಜಿಕ ಭದ್ರತಾ ಸೌಲಭ್ಯ ಒದಗಿಸುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಶಿವಶಂಕರ್ ಸೂಚಿಸಿದರು.

ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ದೇವನಹಳ್ಳಿಯ ಜಿಲ್ಲಾಡಳಿತಭವನದ ಅವರಣದಲ್ಲಿ ಶುಕ್ರವಾರ ಇ-ಶ್ರಮ್ ಯೋಜನೆ ಜಾಗೃತಿ ಪ್ರಚಾರ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು. ಇ-ಶ್ರಮ್ ಯೋಜನೆಯ ಕುರಿತು ಜಿಲ್ಲಾದ್ಯಂತ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಗಿದೆ, ಇದು ಜಿಲ್ಲಾದ್ಯಂತ ಸಂಚರಿಸಲಿದ್ದು, ಈ ಯೋಜನೆಯ ಬಗ್ಗೆ ಮಾಹಿತಿ ನೀಡಲಿದೆ, ಸಾರ್ವಜನಿಕರು ಈ ಯೋಜನೆ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಬಿಪಿಎಲ್ ಕಾರ್ಡ್: ಸುಪ್ರಿಂ ಕೋರ್ಟ್ ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿ (ಬಿಪಿಎಲ್) ನೀಡಲು ಆದೇಶಿಸಿದ್ದು, ಆದ್ಯತಾ ಪಡಿತರ ಚೀಟಿ ಹೊಂದಲು ಅರ್ಹ ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಪಡಿತರ ಚೀಟಿ ನೀಡುವ ಕಾರ್ಯ ಆರಂಭವಾಗಲಿದೆ, ಆದ್ದರಿಂದ ಆದ್ಯತಾ ಪಡಿತರ ಚೀಟಿ ಹೊಂದಿಲ್ಲದ ಇ-ಶ್ರಮ್ ನೋಂದಾಯಿತ ಕಾರ್ಮಿಕರು ಹತ್ತಿರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ್ ತಿಳಿಸಿದರು. ಹೆಚ್ಚಿನ ಮಾಹಿತಿಗೆ ಟೋಲ್ ಫ್ರೀ ಸಂಖ್ಯೆ 1800-425-9339 ಅಥವಾ ಸಹಾಯವಾಣಿ 1967 ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು. ಪ್ಯಾನ್-ಇಂಡಿಯಾ ರೆಸ್ಕ್ಯೂ ಆ್ಯಂಡ್ ರಿಯಾಬಿಲೇಷನ್ ಕ್ಯಾಂಪೇನ್ ಪ್ರೊಗ್ರಾಮ್ - ಎ ಸ್ಟೆಪ್ ಟು ರ್ಯಾಡಿಕೇಟ್ ಚೈಲ್ಡ್ ಲೇಬರ್ ಮತ್ತು ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ 23 ವರ್ಗಗಳ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ನೀಡಿ ಸಾಮಾಜಿಕ ಭದ್ರತಾ ಸೌಲಭ್ಯ ಒದಗಿಸುವ ಬಗ್ಗೆ ಹಾಗೂ ಇ-ಶ್ರಮ್ ಯೋಜನೆಯ ಕುರಿತು ಜಿಲ್ಲೆಯಾದ್ಯಂತ ಪ್ರಚಾರ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net