

ರಾಯಚೂರು: ಕೋವಿಡ್ ಹಿನ್ನೆಲೆಯಲ್ಲಿ ಮಾಜಿ ಉಪಪ್ರಧಾನಿ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್ ಜಯಂತಿಯನ್ನು ಸೋಮವಾರ ಜಿಲ್ಲಾದ್ಯಂತ ಸರಳ ರೀತಿಯಲ್ಲಿ ಆಚರಿಸಲಾಯಿತು.
ನಗರದ ರೈಲು ನಿಲ್ದಾಣದ ಹತ್ತಿರುವಿರುವ ಜಗಜೀವನರಾಮ್ ಪುತ್ಥಳಿಗೆ ಶಾಸಕರಾದ ಡಾ.ಶಿವರಾಜ ಪಾಟೀಲ್, ಬಸನಗೌಡ ದದ್ದಲ್ ಹಾಗೂ ಗಣ್ಯರು ಮಾಲಾರ್ಪಣೆ ಮಾಡುವ ಮೂಲಕ ಜಗಜೀವನರಾಮ್‌ಗೆ ನಮನಗಳನ್ನು ಸಲ್ಲಿಸಿದರು. ಮಾಜಿ ಎಂಎಲ್ಸಿ ಎನ್.ಎಸ್.ಬೋಸರಾಜು, ನಗರಸಭೆ ಅಧ್ಯಕ್ಷ ಇ.ವಿನಯಕುಮಾರ್, ಆರ್‌ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ವಕ್ಫ್ ಬೋರ್ಡ್ ಅಧ್ಯಕ್ಷ ಮುಕ್ತಿಯಾರ್, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಎಸ್ಪಿ ಪ್ರಕಾಶ ನಿಕಮ್, ಅಪರ ಜಿಲ್ಲಾಧಿಕಾರಿ ಕೆ.ಆರ್.ದುರಗೇಶ್ ಹಾಗೂ ಇತರರಿದ್ದರು.
ಸಂಗೀತಕ್ಕೆ ಹೆಜ್ಜೆ ಹಾಕಿದ ಶಾಸಕ
ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ನಗರ ಶಾಸಕ ಡಾ.ಶಿವರಾಜ ಪಾಟೀಲ್ ವಾದ್ಯಮೇಳದ ಸಂಗೀತಕ್ಕೆ ಕುಣಿಯುವ ಮೂಲಕ ಗಮನ ಸೆಳೆದರು. ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿದ ನಂತರ ಬ್ಯಾಂಡ್ ಮೇಳದ ಮುಂದೆ ಕುಣಿದಾಗ ಕಾರ್ಯಕರ್ತರು ಜಯಕಾರ ಹಾಕಿ ಶಾಸಕರನ್ನು ಹೆಗಲ ಮೇಲೆ ಎತ್ತಿಕೊಂಡು ಸಂಭ್ರಮಿಸಿದರು.