ಹಸಿರು ಮೈಸೂರು-ಲಕ್ಷವೃಕ್ಷ ಆಂದೋಲನ ಯಶಸ್ವಿ

Published on

ಮೈಸೂರು: ಎಚ್.ವಿ.ರಾಜೀವ್ ಸ್ನೇಹ ಬಳಗದಿಂದ 2019ರಿಂದ ನಗರದಲ್ಲಿ ಕೈಗೊಂಡ ಹಸಿರು ಮೈಸೂರು-ಲಕ್ಷವೃಕ್ಷ ಆಂದೋಲನ ಯಶಸ್ವಿಯಾಗಿದ್ದು, ಇದುವರೆಗೆ ನಗರದಾದ್ಯಂತ ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ ಎಂದು ಬಳಗದ ಮುಖ್ಯಸ್ಥ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ತಿಳಿಸಿದರು.

ಈಗ ಮಳೆ ಸಹ ಉತ್ತಮವಾಗಿ ಬೀಳುತ್ತಿರುವ ಕಾರಣ ನಮ್ಮಲ್ಲಿರುವ ಇನ್ನೂ 15 ಸಾವಿರ ಗಿಡಗಳನ್ನು ಆಸಕ್ತರು ಉಚಿತವಾಗಿ ಪಡೆಯಬಹುದಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಮ್ಮ ಫಾರ್ಮ್‌ನಲ್ಲಿ ಮಹಾಗನಿ, ಹೊಂಗೆ, ಬೇವು, ನೇರಳೆ, ಹಿಪ್ಪೆ, ಬಿಲ್ವಪತ್ರೆ, ಹಲಸು, ಅತ್ತಿ ಅರಳಿ, ಆಲ, ಬೆಟ್ಟದನೆಲ್ಲಿ, ಹೊಳೆ ಮತ್ತಿ, ತಪಸಿ, ದಾಳಿಂಬೆ, ಬಸವನಪಾದ, ಬುಗಡಿ, ಶಿವನಿ, ಗೇರು, ಕಾಡು ಬಾದಾಮಿ, ಗೋಣಿ, ಸೀಬೆ, ಸಂಪಿಗೆ, ಕಾಡುಬೆಂಡೆ ಮೊದಲಾದ ಸುಮಾರು 24 ಬಗೆಯ ಸಸಿಗಳು ಸಿಗುತ್ತಿವೆ ಎಂದು ಮಾಹಿತಿ ನೀಡಿದರು.

ಆಸಕ್ತರು ಗಿಡ ನೆಟ್ಟ ನಂತರ ಸುಮಾರು 3 ವರ್ಷ ನೀರೆರೆದು ಪೋಷಿಸುವ ಭರವಸೆ ನೀಡಬೇಕು. ಸಸಿಗಳನ್ನು ಉಚಿತವಾಗಿ ನೀಡಲಾಗುವುದು. ಇದಕ್ಕಾಗಿ ಕೆ.ಎಸ್.ಶೇಷಪ್ರಸಾದ್ (93530 06616), ಆರ್.ಸುನಿಲ್ (73536 38002) ಸಂಪರ್ಕಿಸಬಹುದು. ಅವರು ವಿವರಗಳನ್ನು ನೀಡಲಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net