ಅಯೋಧ್ಯೆಯಲ್ಲಿ ಕೋಡಿ ಮಾದರಿ ಗ್ರೀನ್ ಮಸೀದಿ

Published on

ಕುಂದಾಪುರ: ಅಯೋಧ್ಯೆ ಧನ್ನಿಪುರಲ್ಲಿ ನಿರ್ಮಾಣವಾಗಲಿರುವ ಮಸೀದಿಗೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಕೋಡಿಯಲ್ಲಿರುವ ಬದ್ರಿಯಾ ಜುಮಾ ಗ್ರೀನ್ ಮಸೀದಿ ಮಾದರಿಯಾಗಲಿದೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ಮಸೀದಿ ನಿರ್ಮಾಣಕ್ಕೆ ಅಯೋಧ್ಯೆ ಸಮೀಪ ಧನ್ನಿಪುರದಲ್ಲಿ 5 ಎಕರೆ ಭೂಮಿ ನೀಡಲಾಗಿದೆ. ಮಸೀದಿ ಹೇಗಿರಬೇಕು ಎನ್ನುವ ಮಾದರಿಗಳ ಸಮೀಕ್ಷೆ ನಡೆಸುತ್ತಿದ್ದು, ವೀಕ್ಷಣೆ ಮಾಡಿದ ಮಸೀದಿಗಳಲ್ಲಿ ಖತಾರ್ ಹಾಗೂ ಕೋಡಿ ಮಸೀದಿಗಳೂ ಇವೆ. ಕೋಡಿ ಗ್ರೀನ್ ಮಾದರಿಯಲ್ಲಿ ಮಸೀದಿ ನಿರ್ಮಾಣಕ್ಕೆ ಸುನ್ನಿ ವಕ್ತ್ ಬೋರ್ಡ್ ಒಪ್ಪಿಗೆ ನೀಡಿದೆ. ದೆಹಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪುರಾತತ್ವ ವಿನ್ಯಾಸಕರು ಕೋಡಿ ಗ್ರೀನ್ ಮಸೀದಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋಡಿಯಲ್ಲಿ ಪ್ರಪಂಚದ ಮೊಟ್ಟಮೊದಲ ಪರಿಸರ ಸ್ನೇಹಿ ಮಸೀದಿಯಿದೆ. ದೆಹಲಿ ಕಾನ್ಫರೆನ್ಸ್‌ನಲ್ಲಿ ಕೋಡಿ ಮಸೀದಿಯ ವಿನ್ಯಾಸ ಎಲ್ಲರ ಗಮನ ಸೆಳೆದಿತ್ತು. ಪರಿಸರಕ್ಕೆ ಒಗ್ಗಿಕೊಂಡು ನಿರ್ಮಾಣ ಮಾಡುವ ಉದ್ದೇಶದ ಧುನ್ನಿಪುರ ಮಸೀದಿಗೆ ಇದೇ ಕೋಡಿ ಬದ್ರಿಯಾ ಜುಮಾ ಗ್ರೀನ್ ಮಸೀದಿ ಮಾದರಿಯಾಗಲಿದೆ. ಇಲ್ಲಿ ಎಲ್ಲವೂ ಪ್ರಾಕೃತಿಕ: ಕೋಡಿ ಮಸೀದಿ ಪರಿಸರ ಸ್ನೇಹಿ ಗ್ರೀನ್ ಮಸ್ಜಿದ್ ಎಂದೇ ಗುರುತಿಸಿಕೊಂಡಿದೆ. ಮಸೀದಿ ಒಳಗೆ ವಾತಾವರಣ ತಂಪು ತಂಪು..ಎಲ್ಲವೂ ಪ್ರಾಕೃತಿಕ. ಮಸೀದಿ ಸುತ್ತ ಹಸಿರು ಹೊದಿಕೆ ಇದ್ದು, ತಾಪಮಾನ ಕನಿಷ್ಠ ಮಟ್ಟದಲ್ಲಿರುತ್ತದೆ. ಮಸೀದಿ ಸುತ್ತ ಗಿಡ, ಮರ ಬೆಳೆಸಲಾಗಿದೆ. ಇಂಗ್ಲಿಷ್‌ನಲ್ಲಿ ಎಲ್ ಬರೆದಂತಹ ವಿನಾಸದ ಕಟ್ಟಡದಲ್ಲಿ ಗಾಳಿ, ಬೆಳಕು ಸರಾಗವಾಗಿ ಹರಿಯುತ್ತದೆ. ದ್ವಾರಗಳು ವಿಶೇಷ ಟರ್ಬೋ ಆಗಿದ್ದು, ತಾಪಮಾನ ತಡೆಯುವ ಚೀನೀ ಟೈಲ್ಸ್ ಬಳಸಲಾಗಿದೆ. 70 ಅಡಿ ಎತ್ತರದ ಮಿನಾರ್ ಪ್ರಾರ್ಥನಾ ಸ್ಥಳದಲ್ಲಿ ತಂಪಿನ ವಾತಾವರಣವಿದೆ. ನೀರಿನ ಸಂರಕ್ಷಣೆಗೆ ಪ್ರೆಸ್‌ಮ್ಯಾಟಿಕ್ ಟೋಟೋ ಬಳಸಲಾಗಿದೆ. ಮಿನಾರ್ ಮೇಲ್ಗಡೆ ಗಾಳಿಯಂತ್ರ ಅಳವಡಿಸಿ ವಿದ್ಯುತ್ ಉತ್ಪಾದನೆಯನ್ನೂ ಮಾಡಲಾಗುತ್ತಿದೆ. ವಿದ್ಯುತ್ ಬಳಕೆಯೂ ಕಡಿಮೆ. ಮಸೀದಿಗೆ ಪರಿಸರ ಸ್ನೇಹಿ ಸರ್ಟಿಫಿಕೆಟ್ ಕೂಡ ಸಿಕ್ಕಿದೆ.

ಅಯೋಧ್ಯೆ ಧನ್ನಿಪುರದಲ್ಲಿ ಕೋಡಿ ಬದ್ರಿಯಾ ಜುಮಾ ಮಸೀದಿ ಮಾದರಿಯಲ್ಲಿ ಮಸೀದಿ ನಿರ್ಮಾಣವಾಗಲಿದೆ. ನಿರ್ಮಾಣ ಕಾರ‌್ಯದಲ್ಲಿ ಕೈ ಜೋಡಿಸುವಂತೆ ಅವರು ಕೇಳಿಕೊಂಡಿದ್ದಾರೆ. ಮಸೀದಿಯ ಪುರಾತತ್ವ ಗ್ರಂಥಾಲಯ, ಆಡಿಟೋರಿಯಂ ಎಲ್ಲ ಪರಿಸರ ಸ್ನೇಹಿ ನೆಲೆಯಲ್ಲಿ ಆಗಬೇಕು ಎನ್ನುವ ಉದ್ದೇಶದಲ್ಲಿ ಕೆಲಸ ಮಾಡುತ್ತಿದ್ದೇವೆ. ಸಯ್ಯದ್ ಮೊಹಮ್ಮದ್ ಬ್ಯಾರಿ ಕೋಡಿ ಮಸೀದಿ ನಿರ್ಮಾತೃ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net