

ಹುಬ್ಬಳ್ಳಿ: ರಾಜ್ಯದ ನಾಲ್ಕು ಪ್ರಮುಖ ರೈಲು ಯೋಜನೆಗಳ ಅಂತಿಮ ಸರ್ವೆ (ಫೈನಲ್ ಲೋಕೇಶನ್ ಸರ್ವೆ) ನಡೆಸಲು ರೈಲ್ವೆ ಸಚಿವಾಲಯ ಹಸಿರು ನಿಶಾನೆ ತೋರಿಸಿದೆ. ರಾಜ್ಯದಲ್ಲಿ ಸರಕು ಸಾಗಾಟ ಹಾಗೂ ಪ್ರಯಾಣಿಕರ ಸಂಚಾರ ಅಭಿವೃದ್ಧಿಗೆ ಇದರಿಂದ ಮತ್ತಷ್ಟು ವೇಗ ಸಿಗಲಿದೆ. ಆದರೆ, ಅಂತಿಮ ಸರ್ವೆ ನಡೆಸಿದ ನಂತರ ರೈಲ್ವೆ ಸಚಿವಾಲಯ ಆ ಮಾರ್ಗಗಳ ಆರ್ಥಿಕ ಸ್ಥಿತಿಗತಿ ಕುರಿತು ಮತ್ತೊಮ್ಮೆ ಅಧ್ಯಯನ ನಡೆಸಲಿದೆ. ಆ ಮಾರ್ಗದಲ್ಲಿ ರೈಲು ಸಂಚಾರದಿಂದ ಆರ್ಥಿಕ ಚಟುವಟಿಕೆ ನಡೆಯುವುದು ಮನದಟ್ಟಾದಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಸಚಿವಾಲಯ ಅಂತಿಮ ಸಮ್ಮತಿ ನೀಡಲಿದೆ.
ಇದೀಗ ಅಂತಿಮ ಹಂತದ ಸರ್ವೆ ನಡೆಸುವುದಕ್ಕಾಗಿ ಸ್ವಾಮಿಹಳ್ಳಿ - ರಾಯದುರ್ಗ ಮಧ್ಯದ 52 ಕಿಮೀ ಉದ್ದದ ಹೊಸ ಮಾರ್ಗ ನಿರ್ವಣಕ್ಕೆ 1.30 ಕೋಟಿ ರೂ.ಗಳನ್ನು, ಬಳ್ಳಾರಿ - ಚಿಕ್ಕಜಾಜೂರ ಮಧ್ಯದ 185 ಕಿಮೀ ಉದ್ದದ ಮಾರ್ಗವನ್ನು ದ್ವಿಪಥಗೊಳಿಸಲು 3.70 ಕೋಟಿ ರೂ., ಹೊಸಪೇಟೆ- ಬಳ್ಳಾರಿಯ 65 ಕಿಮೀ ಉದ್ದದ ಮಾರ್ಗವನ್ನು ಚತುಷ್ಪಥಗೊಳಿಸಲು 1.30 ಕೋಟಿ ರೂ. ಹಾಗೂ ಚಿಕ್ಕಬಳ್ಳಾಪುರ - ಗೌರಿಬಿದನೂರ ಮಧ್ಯದ 44 ಕಿಮೀ ಉದ್ದದ ಹೊಸ ಮಾರ್ಗ ನಿರ್ವಣಕ್ಕೆ 1.10 ಕೋಟಿ ರೂ.ಗಳನ್ನು ರೈಲ್ವೆ ಸಚಿವಾಲಯ ಬಿಡುಗಡೆಗೊಳಿಸಿದೆ. ಒಟ್ಟು 346 ಕಿಮೀ ಉದ್ದದ ರೈಲ್ವೆ ಮಾರ್ಗಕ್ಕಾಗಿ 7.40 ಕಿಮೀ ಕೋಟಿ ರೂ. ಬಿಡುಗಡೆಗೊಳಿಸಿದೆ.
ಸ್ವಾಮಿಹಳ್ಳಿ - ರಾಯದುರ್ಗ ನೂತನ ಮಾರ್ಗ ನಿರ್ವಣದಿಂದ ಬೆಂಗಳೂರು, ಮೈಸೂರಿಗೆ ಪ್ರಯಾಣಿಸಲು ಮತ್ತೊಂದು ಪ್ರತ್ಯೇಕ ಮಾರ್ಗ ದೊರೆತಂತಾಗುತ್ತದೆ. ಈ ಮಾರ್ಗದಲ್ಲಿ ಸಂಚರಿಸುವುದರಿಂದ ಬೆಂಗಳೂರು, ಮೈಸೂರಿನ ಅಂತರ ಕಡಿಮೆಯಾಗುತ್ತದೆ. ಪ್ರಯಾಣಿಕರಿಗೆ ಸಾಕಷ್ಟು ಸಮಯ ಹಾಗೂ ಪ್ರಯಾಣ ದರದ ಉಳಿತಾಯವಾದಂತಾಗುತ್ತದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೂ ಇದರಿಂದ ಸಾಕಷ್ಟು ನೆರವು ದೊರೆತಂತಾಗುತ್ತದೆ.
ಬಳ್ಳಾರಿ - ಚಿಕ್ಕಜಾಜೂರ ಮಾರ್ಗ ಇದೀಗ ಏಕಪಥ ಮಾರ್ಗ ಇದೆ. ಇದು ದ್ವಿಪಥಗೊಳ್ಳುವುದರಿಂದ ಹೆಚ್ಚು ರೈಲುಗಳ ಸಂಚಾರ ಪ್ರಾರಂಭಿಸಬಹುದು. ಇದರಿಂದ ಪ್ರಯಾಣಿಕರ ಹಾಗೂ ಸರಕು ಸಾಗಣೆ ಸಾಗಾಟ ಹೆಚ್ಚುತ್ತದೆ. ಭವಿಷ್ಯದಲ್ಲಿ ಈ ಮಾರ್ಗವನ್ನು ಇಲೆಕ್ಟ್ರಿಫಿಕೇಶನ್ಗೊಳಿಸಲು ಸಹ ಇದು ಅನುಕೂಲ.
ಹೊಸಪೇಟೆ - ಬಳ್ಳಾರಿ ಮಾರ್ಗ ಹುಬ್ಬಳ್ಳಿ ವಿಭಾಗದ ಅತೀ ಹೆಚ್ಚು ದಟ್ಟಣೆ ಇರುವ ಮಾರ್ಗ. ಈ ಮಾರ್ಗದಲ್ಲಿ ಪ್ರಯಾಣಿಕರ ಹಾಗೂ ಸರಕು ಸಾಗಣೆಯ ರೈಲುಗಳು ಅತಿ ಹೆಚ್ಚಾಗಿ ಸಂಚರಿಸುತ್ತವೆ. ಜಿಂದಾಲ್ ಸ್ಟೀಲ್ ಪ್ಲಾಂಟ್ ಸೇರಿ ರಾಜ್ಯದ ಇತರ ಕೈಗಾರಿಕೆಗಳಿಗೆ ಬರುವ ಕಚ್ಚಾವಸ್ತುಗಳು ಸುಮಾರು ಶೇ.50ರಷ್ಟು ಇದೇ ಮಾರ್ಗದಿಂದ ಬರುತ್ತವೆ. ಭಾರತದ ಪೂರ್ವ ಭಾಗದಲ್ಲಿರುವ ಗಣಿಗಾರಿಕೆಗೆ ತಲುಪುವ ಕಚ್ಚಾವಸ್ತುಗಳನ್ನು ಸಾಗಿಸುವ ಹೆಚ್ಚಿನ ರೈಲುಗಳು ಸಹ ಈ ಮಾರ್ಗದಿಂದ ಸಂಚರಿಸುತ್ತವೆ. ಬಹುದಿನಗಳ ಬೇಡಿಕೆಯಾಗಿದ್ದ ಚಿಕ್ಕಬಳ್ಳಾಪುರ - ಗೌರಿಬಿದನೂರ ಹೊಸ ಮಾರ್ಗದ ಅಂತಿಮ ಸರ್ವೆ ನಡೆಸಲು ಸಹ ಸೂಚಿಸಲಾಗಿದೆ.
ಸಚಿವಾಲಯಕ್ಕೆ ವರದಿ: ಅಂತಿಮ ಸರ್ವೆಯಲ್ಲಿ ರೈಲು ಮಾರ್ಗಕ್ಕೆ ಬೇಕಾಗುವ ಭೂಮಿ ಹಾಗೂ ಇನ್ನಿತರ ವಿಷಯವನ್ನು ಅಧ್ಯಯನ ಮಾಡಲಾಗುತ್ತದೆ. ಈ ಅಧ್ಯಯನದ ವರದಿಯನ್ನು ರೈಲ್ವೆ ಸಚಿವಾಲಯಕ್ಕೆ ಕಳಿಸಲಾಗುತ್ತದೆ. ಆ ನಂತರ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದಲ್ಲಿ ಭೂಮಿ ವಶಪಡಿಸಿಕೊಳ್ಳುವ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಲಿದೆ.
ನೂತನ ರೈಲು ಮಾರ್ಗಗಳ ಅಂತಿಮ ಸರ್ವೆ ಕಾರ್ಯಕ್ಕೆ ರೈಲ್ವೆ ಸಚಿವಾಲಯ ಸೂಚಿಸಿದೆ. ಶೀಘ್ರ ಅಂತಿಮ ಸರ್ವೆ ಕಾರ್ಯ ಪ್ರಾರಂಭಗೊಳ್ಳಲಿದೆ. ಸರ್ವೆಯ ವರದಿಯನ್ನು ಸಚಿವಾಲಯಕ್ಕೆ ಕಳುಹಿಸಲಾಗುವುದು.
| ಅನೀಶ ಹೆಗಡೆ
ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ನೈಋತ್ಯ ರೈಲ್ವೆ ವಲಯ, ಹುಬ್ಬಳ್ಳಿ