ಆರ್.ಕೃಷ್ಣ ಮೈಸೂರು
ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿ ‘ಕೈಗಾರಿಕಾ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ’ ರಚನೆ ಮಾಡಬೇಕು ಎನ್ನುವ ಉದ್ಯಮಿಗಳ ಬೇಡಿಕೆಗೆ ಸರ್ಕಾರ ಕೊನೆಗೂ ಸ್ಪಂದಿಸಿದೆ.
ಎರಡು ದಶಕಗಳ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಈಗ ‘ಕೈಗಾರಿಕಾ ವಿಶೇಷ ಹೂಡಿಕೆ ವಲಯ’ ಎಂದು ಘೋಷಿಸಿ ಕೈಗಾರಿಕಾ ಪ್ರದೇಶಗಳ ಬೆಳವಣಿಗೆ ಸಹಕಾರ ನೀಡಿದೆ. ಈ ಕುರಿತು ಫೆಬ್ರವರಿ 2ರಂದು ಆದೇಶ ಹೊರಡಿಸಿರುವ ಕೈಗಾರಿಕೆ ಇಲಾಖೆ, ರಾಜ್ಯದ 12 ಕೈಗಾರಿಕಾ ಪ್ರದೇಶಗಳನ್ನು ವಿಶೇಷ ಹೂಡಿಕೆ ವಲಯ ಎಂದು ಗುರುತಿಸಿದೆ.
ಮೈಸೂರಿನಲ್ಲಿ ಹೆಬ್ಬಾಳು ಹಾಗೂ ತಾಂಡ್ಯ ವಿಶೇಷ ಹೂಡಿಕೆ ವಲಯ ಎಂದು ಘೋಷಣೆ ಮಾಡಲಾಗಿದೆ. ಇದರಂತೆ ಹೆಬ್ಬಾಳು ಕೈಗಾರಿಕಾ ವಲಯಕ್ಕೆ ಮೇಟಗಳ್ಳಿ, ಬೆಳವಾಡಿ, ಇಲವಾಲ, ಹೆಬ್ಬಾಳು, ಹಿನಕಲ್, ಹೂಟಗಳ್ಳಿ, ಕೂರ್ಗಳ್ಳಿ, ಅನಗನನಹಳ್ಳಿ ಕೈಗಾರಿಕಾ ಪ್ರದೇಶವನ್ನು ಸೇರಿಸಲಾಗಿದೆ. ಹಾಗೆಯೇ ತಾಂಡ್ಯ ಕೈಗಾರಿಕಾ ಪ್ರದೇಶಕ್ಕೆ ತೊರೆಮಾವು, ಅಡಕನಹಳ್ಳಿ, ಇಮ್ಮಾವು, ತಾಂಡವಪುರ, ಕಡಕೊಳ, ಕೋಚನಹಳ್ಳಿ ಕೈಗಾರಿಕಾ ಪ್ರದೇಶವನ್ನು ಸೇರಿಸಿ ವಲಯ ಎಂದು ಗುರುತಿಸಲಾಗಿದೆ.
ಈ ವಿಶೇಷ ಹೂಡಿಕೆ ವಲಯ ಎಂದು ಘೋಷಣೆ ಮಾಡಿರುವುದರಿಂದ ಆಯಾಯ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಅಲ್ಲಿಯ ಸಂಪನ್ಮೂಲವನ್ನು ಬಳಸಿಕೊಳ್ಳಲು ಅನುಕೂಲವಾಗಲಿದೆ. ಸರ್ಕಾರ ನಾಮನಿರ್ದೇಶನ ಮಾಡಿದವರು ಹಾಗೂ ಸರ್ಕಾರಿ ಅಧಿಕಾರಿಗಳ ನೇತೃತ್ವದಲ್ಲಿ ಆಡಳಿತ ಮಂಡಳಿ ರಚನೆಯಾಗಿ ಕೈಗಾರಿಕಾ ಪ್ರದೇಶಕ್ಕೆ ಬೇಕಾದ ಸೌಲಭ್ಯವನ್ನು ಅವರೇ ಮಾಡಿಕೊಳ್ಳಲು ಇದರಿಂದ ಅವಕಾಶ ದೊರೆಯಲಿದೆ.
ಇಷ್ಟು ವರ್ಷಕಾಲ ಉದ್ದಿಮೆದಾರರು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಲ್ಲದೆ ಆಯಾಯ ಸ್ಥಳೀಯ ಸಂಸ್ಥೆಗಳಿಗೂ ತೆರಿಗೆ ಪಾವತಿಸಬೇಕಾಗಿತ್ತು. ಇದರಿಂದ ಉದ್ಯಮಿದಾರರು ಎರಡು ಕಡೆ ತೆರಿಗೆ ಪಾವತಿಸಿದಂತಾಗಿತ್ತು.
ಆದರೆ ಹೀಗೆ ತೆರಿಗೆ ಪಡೆಯುವ ಸ್ಥಳೀಯ ಸಂಸ್ಥೆಗಳು, ಅನುದಾನವನ್ನು ಕೈಗಾರಿಕಾ ಪ್ರದೇಶಕ್ಕೆ ಬಳಸದೆ ಇನ್ನಿತರ ಕಡೆ ವಿನಿಯೋಗಿಸುತ್ತಿದ್ದವು. ಹೀಗಾಗಿ ಕೈಗಾರಿಕಾ ಪ್ರದೇಶಗಳಿಗೆ ತೆರಿಗೆ ಪಾವತಿಸಿದರೂ ಅಭಿವೃದ್ಧಿ, ಮೂಲ ಸೌಲಭ್ಯ ಇಲ್ಲದಂತಾಗುತ್ತಿತ್ತು.
ಹೊಸ ನಿಯಮದ ಪ್ರಕಾರ ಸರ್ಕಾರ ರಚಿಸುವ ಆಡಳಿತ ಮಂಡಳಿಗೆ ಮಾತ್ರ ಇನ್ನು ಮುಂದೆ ಒಂದು ತೆರಿಗೆ ಪಾವತಿಸಬೇಕು. ಅಲ್ಲದೆ ಪಾವತಿಯಾದ ತೆರಿಗೆಯಲ್ಲಿ ಶೇ.30 ಅನ್ನು ಮಾತ್ರ ಸ್ಥಳೀಯ ಸಂಸ್ಥೆಗಳಿಗೆ ನೀಡಿ, ಉಳಿದ ಶೇ.70ರಷ್ಟು ಅನುವಾನವನ್ನು ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆಯೇ ಬಳಸಿಕೊಳ್ಳಲು ಅವಕಾಶವಿದೆ. ಇದರಿಂದ ಕೈಗಾರಿಕಾ ಪ್ರದೇಶಕ್ಕೆ ಬೇಕಾದ ಸೌಲಭ್ಯವನ್ನು ಉದ್ಯಮಿದಾರರೇ ಮಾಡಿಕೊಳ್ಳಬಹುದಾಗಿದೆ.
20 ವರ್ಷಗಳ ಬೇಡಿಕೆಯಾಗಿತ್ತು:
‘ಕೈಗಾರಿಕಾ ಪಟ್ಟಣ ಪ್ರಾಧಿಕಾರ’ ರಚಿಸಬೇಕು ಎಂದು 20 ವರ್ಷಗಳಿಂದ ಉದ್ಯಮಿದಾರರು ಬೇಡಿಕೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಬೆಂಗಳೂರಿನ ಪೀಣ್ಯಾ, ಮೈಸೂರಿನ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಕೈಗಾರಿಕಾ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದಾಗಿ ಅಂದು ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರಲ್ಲದೆ, ಅದಕ್ಕಾಗಿ 100 ಕೋಟಿ ರೂ. ಅನ್ನು ಕಾಯ್ದರಿಸಿದ್ದರು.
ಆದರೆ ವರ್ಷಗಳು ಉರುಳಿದರೂ ಬಜೆಟ್‌ನಲ್ಲಿ ಮಾಡಿರುವ ಘೋಷಣೆಯನ್ನು ಇನ್ನೂ ಅನುಷ್ಠಾನಗೊಳಿಸಲು ಸರ್ಕಾರದಿಂದ ಸಾಧ್ಯವಾಗಿರಲಿಲ್ಲ. ಐಎಎಸ್ ಅಧಿಕಾರಿ ಅರವಿಂದ್ ಜಾಧವ್ ಅವರು ಕೈಗಾರಿಕಾ ಇಲಾಖೆ ನಿರ್ದೇಶಕರಾಗಿದ್ದಾಗ 1988ರಲ್ಲಿ ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಕುರಿತು ಮೊದಲ ಸಭೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಅಲ್ಲದೆ ಇದಕ್ಕೆ ಪೂರಕವಾಗಿ 2003ರ ಬಜೆಟ್‌ನಲ್ಲಿ ಪ್ರಾಧಿಕಾರ ರಚನೆ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಅದೇ ವರ್ಷ ರಾಜ್ಯ ಸರ್ಕಾರ ಜಾರಿಗೊಳಿಸಿದ ಕರ್ನಾಟಕ ಪೌರಸಭೆ ಕಾಯ್ದೆ 1964 ಕ್ಕೆ ತಿದ್ದುಪಡಿ(ಸೇರ್ಪಡೆ ) ಮಾಡಿ(ಸೆಕ್ಷನ್ 364)‘ ಕೈಗಾರಿಕಾ ಪಟ್ಟಣ ಪ್ರಾಧಿಕಾರ’ ರಚನೆ ಮಾಡುವ ಗೆಜೆಟ್ ಪ್ರಕಟಣೆಯನ್ನೂ ಹೊರಡಿಸಲಾಗಿತ್ತು. ಆದರೆ 2020-2025ರ ಕೈಗಾರಿಕಾ ನೀತಿ ಹಾಗೂ 2021- 2022ರ ಆಯವ್ಯಯದಲ್ಲಿಯೂ ಮತ್ತೆ ಮೈಸೂರಿನ ಕೈಗಾರಿಕಾ ಪ್ರದೇಶಗಳನ್ನು ಒಳಗೊಂಡಂತೆ ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಮಾಡುವ ಪ್ರಸ್ತಾಪ ನನೆಗುದಿಗೆ ಬಿದ್ದಿತ್ತು.
ಪ್ರಾಧಿಕಾರ ರಚನೆಯಿಂದಾಗುವ ಲಾಭ:
ಕೈಗಾರಿಕಾ ಪಟ್ಟಣ ಪ್ರಾಧಿಕಾರದಿಂದ ಕೈಗಾರಿಕೆಗಳ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಪೂರಕವಾಗಲಿದೆ. ಕೈಗಾರಿಕೆಗಳಿಂದ ಬರುವ ದೊಡ್ಡ ಪ್ರಮಾಣದ ತೆರಿಗೆಯನ್ನು ಕೈಗಾರಿಕಾ ಪ್ರದೇಶಗಳ ಬೆಳವಣಿಗೆಗೆ ಬಳಸಬಹುದು. ರಸ್ತೆ, ಚರಂಡಿ, ಬೀದಿ ದೀಪ, ನೀರು, ತ್ಯಾಜ್ಯ ವಿಲೇವಾರಿ ಸೇರಿದಂತೆ ಇನ್ನಿತರ ಮೂಲಸೌಲಭ್ಯ ಕಲ್ಪಿಸಿ ಕೊಳ್ಳಲು ಅವಕಾಶವಾಗಲಿದೆ.
ಜನಪ್ರತಿನಿಧಿಗಳಿಂದಲೇ ವಿರೋಧ:
ಕೈಗಾರಿಕಾ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸರ್ಕಾರ ಮುಂದಾಗಿದ್ದರೂ, ಅದರ ಅನುಷ್ಠಾನಕ್ಕೆ ಜನಪ್ರತಿನಿಧಿಗಳಿಂದಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕೈಗಾರಿಕಾ ಪ್ರದೇಶಗಳಿಂದ ಬರುವ ದೊಡ್ಡ ಮೊತ್ತದ ತೆರಿಗೆ ಹಣವನ್ನು ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆ, ನಗರಪಾಲಿಕೆಗಳು ಜನವಸತಿ ಇರುವ ಇನ್ನಿತರ ಬಡಾವಣೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಪ್ರಾಧಿಕಾರ ರಚಿಸಿದರೆ ಈ ತೆರಿಗೆ ಹಣ ಸ್ಥಳೀಯವಾಗಿ ದೊರೆಯುವುದಿಲ್ಲ ಎನ್ನುವ ಉದ್ದೇಶದಿಂದ ಜನಪ್ರತಿನಿಧಿಗಳು ಅಡ್ಡಗಾಲು ಹಾಕುತ್ತಿದ್ದರು.
ಚುನಾಯಿತ ಉದ್ದಿಮೆದಾರರಿರಬೇಕು
ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ‘ಕೈಗಾರಿಕಾ ವಿಶೇಷ ಹೂಡಿಕೆ ವಲಯ’ ಎನ್ನುವ ಹೆಸರಿನಲ್ಲಿ ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹ. ಆದರೆ ಬೇರೆ ಪ್ರಾಧಿಕಾರದ ರೀತಿ ಸರ್ಕಾರ ರಾಜಕೀಯ ವ್ಯಕ್ತಿಗಳನ್ನು ನಾಮ ನಿರ್ದೇಶನ ಮಾಡದೆ, ಚುನಾಯಿತ ಉದ್ಯಮಿದಾರರು, ಸರ್ಕಾರದ ಅಧಿಕಾರಿಗಳನ್ನು ಒಳಗೊಂಡ ಆಡಳಿತ ಮಂಡಳಿ ರಚನೆಗೆ ಅವಕಾಶ ಮಾಡಿಕೊಡಬೇಕು. ಆಗ ಉದ್ದೇಶ ನಿಜವಾಗಿ ಈಡೇರಿದಂತಾಗುತ್ತದೆ.
ಸುರೇಶ್‌ಕುಮಾರ್ ಜೈನ್
ಕಾರ್ಯದರ್ಶಿ, ಮೈಸೂರು ಕೈಗಾರಿಕೆಗಳ ಸಂಘ