

ಆನೇಕಲ್ : ವಣಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗಸಂದ್ರದಲ್ಲಿ ಗ್ರೀನ್ಹೌಸನ್ನು ಗುತ್ತಿಗೆಗೆ ನೀಡಲಿಲ್ಲ ಎನ್ನುವ ಕೋಪಕ್ಕೆ ಮೂವತ್ತು ಲಕ್ಷ ರೂಪಾಯಿ ಮೌಲ್ಯದ ಗ್ರೀನ್ ಹೌಸನ್ನು ಸಂಪೂರ್ಣ ನಾಶ ಮಾಡಲಾಗಿದೆ. ಗ್ರೀನ್ ಹೌಸ್ ಇದ್ದ ಜಮೀನನ್ನು ಎರಡು ವರ್ಷಗಳ ಹಿಂದೆ ಪ್ರಭಾವತಿ ಎಂಬುವವರಿಂದ ಕಾರ್ತಿಕ್ ಎಂಬಾತ ಕೃಷಿ ಉದ್ದೇಶಕ್ಕೆ ಖರೀದಿಸಿದ್ದರು. ಆದರೆ, ಇದಕ್ಕೂ ಮೊದಲು ಪ್ರಭಾವತಿ ಅವರು ಹಾರಗದ್ದೆ ನಿವಾಸಿಗಳಾದ ಅಣ್ಣಯ್ಯಪ್ಪ, ಶ್ರೀಧರ್ ಮತ್ತು ಮುರಳಿ ಎಂಬುವರಿಗೆ ಗ್ರೀನ್ ಹೌಸ್ ಮಾಡಲು ಜಮೀನು ನೀಡಿದ್ದರು.
ಜಮೀನನ್ನು ಕಾರ್ತಿಕ್ ಖರೀದಿಸಿದ ಬಳಿಕವೂ ಗ್ರೀನ್ ಹೌಸ್ ಗುತ್ತಿಗೆಗೆ ನೀಡಲು ಹಲವು ಬಾರಿ ಅಣ್ಣಯ್ಯಪ್ಪ, ಶ್ರೀಧರ್ ಮತ್ತು ಮುರಳಿ ಕೇಳಿದ್ದರು. ಆದರೆ ಕೃಷಿ ಉದ್ದೇಶದಿಂದ ಜಮೀನು ಪಡೆದುಕೊಂಡಿದ್ದೇವೆ ಎಂದು ಹೇಳಿದ್ದರಿಂದ ಕೋಪಗೊಂಡಿದ್ದ ಮೂವರು ಎರಡು ದಿನದ ಹಿಂದೆ ರಾತ್ರೋರಾತ್ರಿ ಗ್ರೀನ್ ಹೌಸ್ಗೆ ನುಗ್ಗಿ ಮೇಲೆ ಹಾಕಿದ್ದ ಹೊದಿಕೆಗಳನ್ನು ಕಿತ್ತುಹಾಕಿ ಕಬ್ಬಿಣದ ಸರಳುಗಳನ್ನು ಹಾಳು ಮಾಡಿದ್ದಲ್ಲದೆ ಕೆಲವನ್ನು ಅಲ್ಲಿಂದ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಸ್ಥಳಕ್ಕೆ ತೆರಳಿದ ಕಾರ್ತಿಕ್ ಮೇಲೆಯೂ ಹಲವರು ಸೇರಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಆನೇಕಲ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೂವರೂ ತಲೆಮರೆಸಿಕೊಂಡಿದ್ದಾರೆ.