

ಹುಬ್ಬಳ್ಳಿ: ಈ ವರ್ಷದ ಮುಂಗಾರು ಮಳೆ ಅತಿಯಾಗಿ ಬಹುತೇಕ ಬೆಳೆಗಳು ಹಾನಿಯಾಗಿವೆ. ಪ್ರಮುಖ ಬೆಳೆ ಹೆಸರುಕಾಳು ಸಂಪೂರ್ಣ ಹಾಳಾಗಿದ್ದು, ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರಿಗೆ ಪರಿಹಾರ ನೀಡಬೇಕೆಂದು ಎಪಿಎಂಸಿ ಮಾಜಿ ಅಧ್ಯಕ್ಷ ಸುರೇಶ ಕಿರೇಸೂರ ಆಗ್ರಹಿಸಿದ್ದಾರೆ.
ಬೆಳೆಹಾನಿಯಾದಾಗ ಪರಿಹಾರ ನೀಡಲು ವಿಮೆ ಕಂಪನಿಗಳು ಕೂಡಲೇ ಧಾವಿಸಬೇಕು. ಆದರೆ, ಈಗಲೂ ಬೆಳೆವಿಮೆ ಪರಿಹಾರ ನೀಡಬೇಕಾದವರು ಮೀನಾಮೇಷ ಎಣಿಸುತ್ತಿರುವುದು ಸೋಜಿಗದ ಸಂಗತಿ.
ಅತಿವೃಷ್ಟಿಯಿಂದಾಗಿ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರ ಸಂಕಷ್ಟ ಯಾರೂ ಕೇಳುವವರು ಇಲ್ಲದಂತಾಗಿದೆ. ಹೆಸರುಕಾಳು ಕಪ್ಪಾಗಿದ್ದು, ಅಳಿದುಳಿದ ಬೆಳೆಯನ್ನು ಒಕ್ಕಲು ಮಾಡಿ ಮಾರುಕಟ್ಟೆಗೆ ತಂದರೆ ಸಮರ್ಪಕ ಬೆಲೆ ಇಲ್ಲದೇ ಕಂಗೆಟ್ಟಿದ್ದಾರೆ.
ಇಷ್ಟೆಲ್ಲ ಆದರೂ ಸರ್ಕಾರಗಳು ಕೈಕಟ್ಟಿ ಕುಳಿತಿರುವುದು ರೈತರು ಇನ್ನಷ್ಟು ತೊಂದರೆ ಅನುಭವಿಸುವಂತಾಗಿದೆ. ಹಿಂಗಾರು ಬಿತ್ತನೆ ಆರಂಭವಾಗುವ ಸಂದರ್ಭದಲ್ಲಿ ಕೂಡಲೇ ರೈತರಿಗೆ ಪರಿಹಾರ ನೀಡಬೇಕು ಎಂದು ಕಿರೇಸೂರ ಮನವಿ ಮಾಡಿದ್ದಾರೆ.