

ಗಂಗೊಳ್ಳಿ: ಕುಂದಾಪುರ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಈ ವರ್ಷಾರಂಭದಲ್ಲೇ ರಾಷ್ಟ್ರೀಯ ಮಟ್ಟದ ಗ್ರೀನ್ ಫ್ಲಾಗ್ ಅವಾರ್ಡ್‌ಗೆ ಪಾತ್ರವಾಗಿದೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮಾನವ ಸಂಗ್ರಹಾಲಯ ಮತ್ತು ಪರ್ಯಾವರ್ಣ ಶಿಕ್ಷಾ ಕೇಂದ್ರ ಸಹಯೋಗದಲ್ಲಿ ಆಯೋಜಿಸಲಾದ ಕಾರ್ಯಾಗಾರದ ವಾರ್ಷಿಕ ಪುರಸ್ಕಾರ ಸಮಾರೋಪ ಸಮಾರಂಭದಲ್ಲಿ ಇಕೋ ಸ್ಕೂಲ್ ಆಫ್ ಇಂಡಿಯಾ ಮತ್ತು ಎಫ್.ಇ.ಇ- ಗ್ಲೋಬಲ್‌ನವರು ಕೊಡಮಾಡುವ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಗ್ರೀನ್ ಫ್ಲಾೃಗ್ ಪ್ರಶಸ್ತಿಯನ್ನು ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ ನಿರ್ದೇಶಕರಾದ ಪ್ರೊ.ಅಮಿತಾಬ್ ಪಾಂಡೆ ಹಾಗೂ ಡಾ.ಸುನೀಲ್ ಉಮಾರಾವ್ ಹಟ್ಟಿಯಂಗಡಿ ಪ್ರದಾನಿಸಿದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲ ಶರಣಕುಮಾರ ಮತ್ತು ಆಡಳಿತಾಧಿಕಾರಿ ವೀಣಾ ರಶ್ಮಿ ಎಂ. ಸಂಸ್ಥೆ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. ಶಾಲೆಯಲ್ಲಿ ಹಮ್ಮಿಕೊಳ್ಳುವ ಪರಿಸರ ಸ್ನೇಹಿ ಕಾರ್ಯ ಚಟುವಟಿಕೆ, ಸ್ವಚ್ಛತೆ ಕಾರ್ಯ ವಿಧಾನ, ಮಾಹಿತಿ ಮತ್ತು ಜನಜಾಗೃತಿ ಕಾರ್ಯಕ್ರಮ ಇತ್ಯಾದಿ ಅಂಶಗಳ ಮಾನದಂಡದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ.