

ಸಿರಿಗೇರಿ: ಬಳ್ಳಾರಿ ಜಿಲ್ಲೆಯಲ್ಲಿ ಮಾದರಿ ಸೋಲಾರ ಗ್ರಾಮ ಯೋಜನೆ ಅನುಷ್ಠಾನಗೊಳಿಸಲು ಐದು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ಗ್ರಾಪಂ ಉಪಾಧ್ಯಕ್ಷೆ ರಾಜಮ್ಮ ಡ್ರೈವರ್ ಹುಲುಗಪ್ಪ ಹೇಳಿದರು.
ಇದನ್ನೂ ಓದಿ: ವಿದ್ಯುತ್ ಉಪಕರಣ ಗುತ್ತಿಗೆದಾರರ ಸಂಘದ ಸಭೆ
ಜೆಸ್ಕಾಂನಿಂದ ಆಯೋಜಿಸಿದ್ದ ಪಿಎಂ, ಸೂರ್ಯಘರ್ ಮುಫ್ತ್ ಬಿಜಲಿ ಮಾದರಿ ಸೋಲಾರ ಗ್ರಾಮ ಯೋಜನೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಈ ಯೋಜನೆ ಉದ್ದೇಶ ಗ್ರಾಮಗಳಲ್ಲಿ ಸ್ವಚ್ಛ ಮತ್ತು ಹಸಿರು ವಿದ್ಯುತ್ ಉತ್ಪಾದನೆಗೆ ಉತ್ತೇಜನೆ ನೀಡುವುದರೊಂದಿಗೆ ಗ್ರಾಮಗಳನ್ನು ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬಿಯಾಗಿಸುವುದು, ಬಿಲ್ ಪಾವತಿ ಕಡಿಮೆಗೊಳಿಸುವುದು.
ಎಲ್ಲ ಮನೆ ಮತ್ತು ಸಾರ್ವಜನಿಕ ಪ್ರದೇಶಗಳಿಗೆ ಸೋಲಾರ್ ಮೂಲಕ ವಿದ್ಯುತ್ ಪೂರೈಸುವುದು, ಹೊಸ ತಂತ್ರಜ್ಞಾನ ಬಳಸಿ ಮನೆಗಳಿಗೆ ಸೋಲಾರ್ ಲೈಟಿಂಗ್, ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ಪಂಪ್‌ಗಳನ್ನು ಅಳವಡಿಸುವುದು ಮತ್ತು ಬೀದಿ ದೀಪ ಬಳಸಲು ಉತ್ತೇಜಿಸುವುದಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು. ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜಲಿ ಯೋಜನೆಯಡಿ ಪ್ರತಿ ಮನೆಗೆ 78 ಸಾವಿರ ರೂ.ವರೆಗೆ ಸರ್ಕಾರದ ಸಹಾಯಧನ ಮತ್ತು ಪ್ರಧಾನಮಂತ್ರಿ ಕುಸುಮ್-ಬಿ ಯೋಜನೆಯಡಿ ಕೃಷಿ ಪಂಪ್‌ಸೆಟ್‌ಗಳಿಗೆ ಶೇಕಡ 80 ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಾಯಧನ ನೀಡುತ್ತದೆ ಎಂದು ಗ್ರಾಪಂ ಉಪಾಧ್ಯಕ್ಷೆ ತಿಳಿಸಿದರು.
ಪಿಡಿಒ ಯು.ರಾಮಪ್ಪ, ಜೆಸ್ಕಾಂ ಶಾಖಾಧಿಕಾರಿ ಶೆಕ್ಷಾವಲಿ, ಪ್ರಮುಖರಾದ ಹೊಳಗುಂದಿ ದ್ಯಾವಣ್ಣ, ಡ್ರೈವರ್ ಹುಲುಗಪ್ಪ, ವಿ.ರೇಣುಕಪ್ಪ, ಹಳ್ಳಿಮರದ ವೀರೇಶ್, ಮೆಡಿಕಲ್ ಚಾಂದ್, ಗುಡಟ್ಟಿ ಈರಣ್ಣ, ಎನ್.ಹನುಮಂತ ಇತರರಿದ್ದರು.