ಹಸಿರು ದೀಪಾವಳಿ ಆಚರಣೆ ಬಗ್ಗೆ ಜಾಗೃತಿ ಕಾರ್ಯಕ್ರಮ

green deepavani
Published on

ಕುಶಾಲನಗರ:

ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಮಾಲಿನ್ಯಕಾರಿ ಪಟಾಕಿ ಸಿಡಿತದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಂಬAಧ ಬುಧವಾರ ಕುಶಾಲನಗರ ತಾಲೂಕು ಮುಳ್ಳುಸೋಗೆ ಬಳಿಯ ಗುಮ್ಮನಕೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ "ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ" ಕುರಿತ ಜಾಗೃತಿ ಅಭಿಯಾನ ನಡೆಯಿತು. ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ಶಾಲೆಯ ಇಕೋ ಕ್ಲಬ್ ವತಿಯಿಂದ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು. ಜಾಥಾದಲ್ಲಿ ಪಾಲ್ಗೊಂಡಿದ್ದ ಶಾಲಾ ಮಕ್ಕಳು ಗುಮ್ಮನಕೊಲ್ಲಿ ಗ್ರಾಮದಲ್ಲಿ ಸಂಚರಿಸಿ ಮಾಲಿನ್ಯಕಾರಿ ಪಟಾಕಿ ಸಿಡಿಸುವುದರಿಂದ ಉಂಟಾಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸಿದರು. ದೀಪಾವಳಿ ಹಬ್ಬದಲ್ಲಿ ಮಾಲಿನ್ಯಕಾರಿ ಪಟಾಕಿಗಳನ್ನು ತ್ಯಜಿಸಿ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸುವ ಮೂಲಕ ಹಸಿರು ದೀಪಾವಳಿ ಆಚರಿಸಬೇಕು ಎಂದು ಮನವಿ ಮಾಡಿದರು.

ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ. ಪ್ರವೀಣ್ ದೇವರಗುಂಡ ಸೋಮಪ್ಪ ಮಾತನಾಡಿ, ದೀಪಾವಳಿ ಸಂದರ್ಭದಲ್ಲಿ ಮಾಲಿನ್ಯ ಕಡಿಮೆ ಮಾಡಲು ಮತ್ತು ಸಾಕುಪ್ರಾಣಿಗಳನ್ನು ರಕ್ಷಿಸಲು ಪಟಾಕಿಗಳನ್ನು ತಪ್ಪಿಸುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಹೇಗೆ ಆಚರಿಸಬೇಕು ಎಂಬ ಬಗ್ಗೆ ವಿದ್ಯಾರ್ಥಿ ಸಮುದಾಯದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕಣ್ಣಿಗೆ ಮುದ ನೀಡಿ ಅಂಧತ್ವಕ್ಕೆ ಕಾರಣವಾಗುವ ಪಟಾಕಿ ಸಿಡಿತದಿಂದ ಉಂಟಾಗುವ ವಾಯು ಮಾಲಿನ್ಯ ನಮ್ಮ ಆರೋಗ್ಯ ಹಾಗೂ ಪರಿಸರವನ್ನು ಕೆಡಿಸುವ ರಾಸಾಯನಿಕಗಳ ವಿಷಗುಳಿಗೆಗಳಾಗಿವೆ ಎಂದರು.

ಹಸಿರು ದೀಪಾವಳಿ ಆಚರಣೆಯ ಮಹತ್ವ ಕುರಿತು ಮಾಹಿತಿ ನೀಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಪಟಾಕಿ ಸಿಡಿತ ನಮ್ಮ ಆರೋಗ್ಯ ಹಾಗೂ ಪರಿಸರಕ್ಕೆ ಹಾನಿಯುಂಟು ಮಾಡುತ್ತದೆ. ಈ ದಿಸೆಯಲ್ಲಿ ನಾವು ಸ್ವಚ್ಛ ಹಾಗೂ ಸ್ವಸ್ಥ ಪರಿಸರಕ್ಕಾಗಿ ಹಸಿರು ದೀಪಾವಳಿ ಆಚರಿಸುವ ಮೂಲಕ ಮಾಲಿನ್ಯ ತಡೆಯಬೇಕು. ಪಟಾಕಿ ಸಿಡತವು ನೆಲ, ಜಲ, ಗಾಳಿಯನ್ನು ವಿಕಾರಗೊಳಿಸಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ ಎಂದರು.

ಹಸಿರು ದೀಪಾವಳಿ ಆಚರಣಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಶಾಲಾ ಮುಖ್ಯ ಶಿಕ್ಷಕಿ ಎಚ್.ಎಚ್. ಸಾಕಮ್ಮ ಮಾತನಾಡಿ, ವಿದ್ಯಾರ್ಥಿಗಳು ಪಟಾಕಿ ತ್ಯಜಿಸಿ ಹಣತೆ ಬೆಳಗಿಸಿ ಹಸಿರು ದೀಪಾವಳಿ ಆಚರಿಸಬೇಕು ಎಂದರು.

ಸ್ವಚ್ಛ ಹಾಗೂ ಸ್ವಸ್ಥ ದೀಪಾವಳಿ ಆಚರಣೆ ಕುರಿತ ಪ್ರತಿಜ್ಞಾ ವಿಧಿಯನ್ನು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಎಚ್.ಎಸ್. ಉಮಾದೇವಿ ಬೋಧಿಸಿದರು. ಸಿಆರ್‌ಪಿ ಟಿ.ಈ. ವಿಶ್ವನಾಥ್ ಪರಿಸರ ಘೋಷಣೆಗಳ ಭಿತ್ತಿ ಫಲಕಗಳನ್ನು ಬಿಡುಗಡೆಗೊಳಿಸಿದರು. ಶಾಲಾ ವಿದ್ಯಾರ್ಥಿನಿ ಅಸ್ಮಿಯ ಅನಿಸಿಕೆ ವ್ಯಕ್ತಪಡಿಸಿ, ತಾನು ಜನರಲ್ಲಿ ಹಸಿರು ದೀಪಾವಳಿ ಆಚರಿಸುವ ಮೂಲಕ ಪಟಾಕಿ ತ್ಯಜಿಸುವ ಬಗ್ಗೆ ಜಾಗೃತಿ ಮೂಡಿಸುತ್ತೇನೆ ಎಂದರು.

ಜಿಲ್ಲಾ ಗೈಡ್ಸ್ ವಿಭಾಗದ ಸಹಾಯಕ ಆಯುಕ್ತೆ ಸಿ.ಎಂ. ಸುಲೋಚನಾ, ಸ್ಕೌಟ್ಸ್, ಗೈಡ್ಸ್ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಕೆ.ವಿ. ಅರುಣ್, ಕೆ.ಆರ್. ರೋಹಿಣಿ, ಎ.ಸಿ. ಶಾಂತಿ, ಕಾರ್ಯದರ್ಶಿ ಎಂ.ಎಸ್.ಗಣೇಶ್, ಸಹ ಕಾರ್ಯದರ್ಶಿ ಎಸ್.ಆರ್. ಶಿವಲಿಂಗ, ಸದಸ್ಯ ಎಂ.ಎಸ್.ಕುಮಾರ್, ಲಯನ್ಸ್ ಕ್ಲಬ್ ವಲಯಾಧಿಕಾರಿ ಸುಮನ್, ಕಾರ್ಯದರ್ಶಿ ನಿತಿನ್, ಖಜಾಂಚಿ ಕಿರಣ್, ಕ್ಲಬ್ ಮಾಜಿ ಅಧ್ಯಕ್ಷ ಕೊಡಗನ ಹರ್ಷ, ಸದಸ್ಯ ಸತೀಶ್, ಸಮಿತಿ ಸದಸ್ಯರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net