

ಕುಶಾಲನಗರ:
ಕುಶಾಲನಗರ ಫಾತಿಮ ಪ್ರೌಢಶಾಲೆಯಲ್ಲಿ ಮಂಗಳವಾರ ಪರಿಸರ ಸ್ನೇಹಿ ಹಸಿರು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸ್ವಚ್ಛ ಹಾಗೂ ಸ್ವಸ್ಥ ದೀಪಾವಳಿ ಗೋ ಗ್ರೀನ್ ಅಭಿಯಾನದಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲಿ ಹಣತೆ ಬೆಳಗಿಸಿ ಹಸಿರು ದೀಪಾವಳಿ ಆಚರಿಸುವ ಮೂಲಕ ಸಂಭ್ರಮಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಕುಶಾಲನಗರ ಫಾತಿಮ ಪ್ರೌಢಶಾಲೆಯ ಇಕೋ ಕ್ಪಬ್ ಆಶ್ರಯದಲ್ಲಿ ಸ್ವಚ್ಛ ಹಾಗೂ ಸ್ವಸ್ಥ ದೀಪಾವಳಿ ಗೋ ಗ್ರೀನ್ ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ ಪರಿಸರ ಸ್ನೇಹಿ ಹಸಿರು ದೀಪಾವಳಿ ಜಾಗೃತಿ ಅಭಿಯಾನದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಮಾಲಿನ್ಯಕಾರಿ ಪಟಾಕಿ ತ್ಯಜಿಸಿ ಮಾಲಿನ್ಯ ತಡೆಯಿರಿ ಎಂಬ ಘೋಷವಾಕ್ಯದೊಂದಿಗೆ ಮಣ್ಣಿನ ಹಣತೆ ಬೆಳಗಿಸಿ
ಹಸಿರು ದೀಪಾವಳಿ ಆಚರಿಸುವ ಕುರಿತ ಪರಿಸರ ಸಂದೇಶ ಸಾರಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಲೆಯ ಮುಖ್ಯ ಶಿಕ್ಷಕ ಜಫ್ರಿ ಡಿ'ಸೋಜ ವಿದ್ಯಾರ್ಥಿಗಳೆಲ್ಲರೂ ಪಟಾಕಿ ತ್ಯಜಿಸಿ ಹಣತೆ ಬೆಳಗಿಸುವ ಮೂಲಕ ಹಸಿರು ದೀಪಾವಳಿ ಆಚರಿಸುವುದರೊಂದಿಗೆ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದರು. ಹಸಿರು ದೀಪಾವಳಿ ಆಚರಣೆ ಕುರಿತು ಶಿಕ್ಷಕಿ ಅನಿತಾ ಸುಪ್ರಿಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿಗಳು ಹಣತೆ ಬೆಳಗಿಸಿ ದೀಪಾವಳಿ ಆಚರಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.
ಜಿಲ್ಲಾ ಗೈಡ್ಸ್ ವಿಭಾಗದ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನ ಮಾತನಾಡಿ, ವಿದ್ಯಾರ್ಥಿಗಳು ಮಾಲಿನ್ಯಕಾರಿ ಪಟಾಕಿ ಸಿಡಿದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಎಂ.ಎಸ್. ಗಣೇಶ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಹಸಿರು ದೀಪಾವಳಿ ಆಚರಣೆಯ ಮಹತ್ವ ತಿಳಿಸಿದ ವಿಜ್ಞಾನ ಶಿಕ್ಷಕ ಕಿರಣ್ ಪ್ರದೀಪ್ ಪೌಲ್, ಹಸಿರು ದೀಪಾವಳಿ ಕುರಿತ ಪರಿಸರ ಘೋಷಣೆಗಳನ್ನು ಹೇಳಿಸಿದರು. ಸ್ಕೌಟ್ ಮಾಸ್ಟರ್ ಎಂ.ಎಲ್.ಜಾನ್ಸನ್, ಗೈಡ್ ಕ್ಯಾಪ್ಟನ್ ಶಿಫಾನತ್, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.