ಸಸಿಗಳ ಪೋಷಣೆ ಜವಾಬ್ದಾರಿ ಹೊರಬೇಕು

green day
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಸಸಿಗಳನ್ನು ನೆಡುವುದಷ್ಟೇ ಅಲ್ಲ ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನು ನಾವೆಲ್ಲ ಸಮರ್ಪಕವಾಗಿ ನಿರ್ವಹಿಸಬೇಕು ಪರಿಸರಕ್ಕೆ ಗಿಡಮರಗಳು ಎಷ್ಟು ಪೂರಕ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶೆ ವಿ.ಆರ್.ಲತಾ ತಿಳಿಸಿದರು.

ಕೃಷ್ಣಗಿರಿ ಜಿಲ್ಲೆಯ ಹೊಸೂರು ತಳಿ ರಸ್ತೆಯಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಆಯೋಗ ಮತ್ತು ತಮಿಳುನಾಡು ರಾಜ್ಯ ಕಾನೂನು ಸೇವೆಗಳ ಆಯೋಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಹಸಿರು ಪರಿಸರ ಸೃಷ್ಟಿಸುವ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ರಾಜ್ಯ ಕಾನೂನು ಸೇವೆಗಳ ಆಯೋಗದ ಪರವಾಗಿ ಹಸಿರು ಪರಿಸರ ಸೃಷ್ಟಿಸುವ ಜಾಗೃತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳು, ಗ್ರಾಮೀಣಾಭಿವೃದ್ಧಿ ಮತ್ತು ಹೆದ್ದಾರಿ ಇಲಾಖೆಗಳು ಹೊಸೂರಿನ ಹೊಸೂರು ತಳಿ ರಸ್ತೆಯಲ್ಲಿ 250 ಸಸಿಗಳನ್ನು ನೆಡುವ ಕಾರ್ಯಕ್ರಮದ ಮೊದಲ ಹಂತ ಪ್ರಾರಂಭಿಸಿವೆ. ಜಿಲ್ಲಾದ್ಯಂತ ಸಸಿ ನೆಡುವ ಕಾರ್ಯಕ್ರಮ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು. ಪೂವರಸನ್, ಬೇವು, ಅರಸಮರಂ ಮತ್ತು ಪುಲಿಯನ್ ಸೇರಿ ವಿವಿಧ ಜಾತಿಯ ಸಸಿಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು. ಸಸಿಗಳನ್ನು ನೆಟ್ಟು ಅವುಗಳ ಪೋಷಣೆಯ ಜವಾಬ್ದಾರಿ ಹೊರಬೇಕು ಸಸಿಗಳನ್ನು ನೆಟ್ಟು ಪೋಷಿಸುವುದು ಪರಿಸರಕ್ಕೆ ಎಷ್ಟು ಮುಖ್ಯ ಎಂಬುದನ್ನು ತಿಳಿದು ಎಲ್ಲರಲ್ಲೂ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಅಭಿವೃದ್ಧಿ ನೆಪದಲ್ಲಿ ನಾಶ ಬೇಡ: ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶೆ ಹೇಮಲತಾ ಮಾತನಾಡಿ, ಮರಗಳು ಇಂಗಾಲವನ್ನು ಹೀರಿಕೊಳ್ಳುತ್ತವೆ ಮತ್ತು ನಾವು ಉಸಿರಾಡುವ ಆಮ್ಲಜನಕವನ್ನು ಉತ್ಪಾದಿಸುತ್ತವೆ ಎಂಬುದನ್ನು ನಾವೆಲ್ಲರೂ ತಿಳಿದುಕೊಂಡಿದ್ದೇವೆ ಆದರೂ ನಾವು ಅಭಿವೃದ್ಧಿ ನೆಪದಲ್ಲಿ ಕಾಡುಗಳನ್ನು ನಾಶಮಾಡಿ ಹವಾಮಾನ ಬದಲಾವಣೆ, ವಾಯು ಮಾಲಿನ್ಯಕ್ಕೆ ಕಾರಣವಾಗಿದ್ದೇವೆ ಎಂದು ವಿಷಾಧ ವ್ಯಕ್ತಪಡಿಸಿದರು. ಗಿಡಮರಗಳು ನೈಸರ್ಗಿಕ ಗಾಳಿ ಶೋಧಕದಂತೆ ಕಾರ್ಯನಿರ್ವಹಿಸುತ್ತವೆ, ಗಿಡಮರಗಳಿಂದ ಬರುವ ವಾಯು ಮಾಲಿನ್ಯಕಾರಕಗಳನ್ನು ತೆಗೆದುಹಾಕುತ್ತದೆ ಎಂದರು. ನೈಸರ್ಗಿಕವಾಗಿ ಮತ್ತೆ ಬೆಳೆಯಬಹುದಾದ ಪ್ರದೇಶಗಳಲ್ಲಿ ಸಸಿ ನೆಡುವುದರಿಂದ ಅರಣ್ಯ ವ್ಯಾಪ್ತಿಯನ್ನು ಪುನರ್‌ಸ್ಥಾಪಿಸಬಹುದು ಸ್ವಚ್ಛ ಸುಂದರ ಪರಿಸರ ನಿರ್ಮಾಣ ಮಾಡಬಹುದು ಎಂದರು.

ಮಾಹಿತಿಗಾಗಿ ಆಯೋಜನೆ: ಜನರು ರಾಷ್ಟ್ರೀಯ ಕಾನೂನು ಸೇವೆಗಳ ಆಯೋಗ, ತಮಿಳುನಾಡು ಕಾನೂನು ಸೇವೆಗಳ ಆಯೋಗದ ಬಗ್ಗೆ ತಿಳಿದುಕೊಳ್ಳಲು ಹಾಗೂ ಕಾನೂನು ಸಮಸ್ಯೆಗಳ ಬಗ್ಗೆ ಹಾಗೂ ಲಭ್ಯವಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಈ ಸಭೆ ಆಯೋಜಿಸಲಾಗಿದೆ ಎಂದು ನ್ಯಾಯಾಧೀಶ ಗೋಕುಲ ಕೃಷ್ಣನ್ ತಿಳಿಸಿದರು. ಜಿಲ್ಲಾ ಉಚಿತ ಕಾನೂನು ನೆರವು ಕೇಂದ್ರ ನಿಮಗೆ ನ್ಯಾಯಾಲಯದಲ್ಲಿ ವಕೀಲರನ್ನು ಒದಗಿಸುವುದಲ್ಲದೆ, ಸರ್ಕಾರದಿಂದ ಇತರ ಮೂಲ ಹಕ್ಕುಗಳನ್ನೂ ಒದಗಿಸುತ್ತದೆ ಎಂಬುದನ್ನು ನೀವು ತಿಳಿದಿರಬೇಕು ಎಂದರು.

ಜಾಗೃತಿ ಕಾರ್ಯಕ್ರಮ:

ಹವಾಮಾನ ಬದಲಾವಣೆಯ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಸಾಂಕೇತಿಕವಾಗಿ ಸಸಿಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.ಜಿಲ್ಲಾ ಪ್ರಧಾನ ನ್ಯಾಯಾಧೀಶೆ ವಿ.ಆರ್.ಲತಾ, ನ್ಯಾಯಾಧೀಶೆ ಆರ್.ಹೇಮಲತಾ ಹಾಗೂ ಜಿಲ್ಲಾಧಿಕಾರಿ ಎಸ್.ದಿನೇಶ್‌ಕುಮಾರ್ ಜಂಟಿಯಾಗಿ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿದರು. ಹೊಸೂರಿನ ಭವಾನಿಯ ಗ್ರ್ಯಾಂಡ್‌ಪ್ಯಾಲೇಸ್ ಸಭಾಂಗಣದಲ್ಲಿ ದೀಪ ಬೆಳಗಿಸುವ ಮೂಲಕ ಸಭೆ ಉದ್ಘಾಟಿಸಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net