ಹಸಿರು ಪಟಾಕಿಗೆ ಮಾತ್ರ ಅನುಮತಿ

cracker
Published on

ರಾಮನಗರ: ಕರೊನಾ ಭೀತಿ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟ ಮತ್ತು ಸುಡುವುದಕ್ಕೆ ಸರ್ಕಾರ ಬ್ರೇಕ್ ಹಾಕಿ. ಹಸಿರು ಪಟಾಕಿ ಮಾರಾಟ ಮಾಡಲು ಮತ್ತು ಸಿಡಿಸಲು ಅವಕಾಶ ಮಾಡಿಕೊಟ್ಟಿದೆ. ಆದರೆ, ಹಸಿರು ಪಟಾಕಿ ಎಂದರೆ ಏನು ಎನ್ನುವ ದೊಡ್ಡ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಹಸಿರು ಪಟಾಕಿ ಸಿಡಿಸಿ ಎಂದ ಸರ್ಕಾರ ಅವುಗಳ ಮಾರಾಟಕ್ಕೆ ಉತ್ತೇಜನ ನೀಡುವ ಕೆಲಸವನ್ನು ಮಾಡಿಲ್ಲ. ಹೀಗಾಗಿ ಪಟಾಕಿ ಮಾರಾಟವನ್ನೇ ಅವಲಂಬಿಸಿದ್ದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ತತ್ತರ: ಹಸಿರು ಪಟಾಕಿಯಿಂದಾಗಿ ಮಾರಾಟಗಾರರ ಬದುಕು ಅತಂತ್ರಗೊಂಡಿದೆ. ಲಾಕ್​ಡೌನ್​ನಿಂದಾಗಿ ಹೈರಾಣಾಗಿರುವ ಮಾರಾಟಗಾರರು, ಸರ್ಕಾರದ ಆದೇಶದಿಂದ ಇನ್ನಷ್ಟು ತತ್ತರಗೊಂಡಿದ್ದಾರೆ. ಪಟಾಕಿಗಳ ಸಾಲಿನಲ್ಲಿ ಯಾವುದು ಅತೀ ಕಡಿಮೆ ಶಬ್ಧ ಮಾಡುತ್ತದೆ. ಕಡಿಮೆ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೆ ೖಐಡ್ ಅನ್ನು ಹೊರಸೂಸುತ್ತದೆ ಎಂದು ಮಾರಾಟಗಾರರು ಕಂಡು ಹಿಡಿಯಲು ಸಾಧ್ಯವೇ ಇಲ್ಲ. ಹಾಗೂ ಸಿಕ್ಕಸಿಕ್ಕ ಪಟಾಕಿ ಮಾರಿದರೆ, ಕಾನೂನು ರೀತಿ ಶಿಕ್ಷೆ, ದಂಡ ತೆರಬೇಕಾಗುತ್ತದೆ ಎಂಬ ಭಯ ಆವರಿಸಿದೆ. ಜತೆಗೆ ಪಟಾಕಿ ಮಳಿಗೆ ಆರಂಭಿಸಲು ಅನುಮತಿ ಕೋರಿ ಇನ್ನು ಯಾವ ಮಾರಾಟಗಾರರೂ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿಲ್ಲ ಎಂಬುದು ವಿಶೇಷ. ಹೀಗಾಗಿ, ಈ ಭಾರಿ ಸಂಭ್ರಮದ ಪಟಾಕಿ ಹಬ್ಬದ ಬದಲಿಗೆ, ಕದ್ದು ಮುಚ್ಚಿ ಪಟಾಕಿ ಮಾರುವವರ ಸಂಖ್ಯೆಯಂತೂ ಹೆಚ್ಚಲಿದೆ.

ಹಸಿರು ಪಟಾಕಿ ಎಂದರೇನು?

ಪಟಾಕಿ ಸಿಡಿಸುವ ಪ್ರದೇಶದಿಂದ 4 ಮೀಟರ್ ದೂರವರೆಗೆ ಅದರ ಶಬ್ದದ ಪ್ರಮಾಣ 125 ಡೆಸಿಬಲ್ಸ್ ಇದ್ದಲ್ಲಿ ಅಂತಹ ಪಟಾಕಿಗಳ ಬಳಕೆಗೆ ಸರ್ಕಾರ ನಿಷೇಧ ಹೇರಿದೆ. ಕಡಿಮೆ ಬೆಳಕು ಮತ್ತು ಶಬ್ದ ಹೊರಸೂಸುವ, ಸಿಡಿತದ ಬಳಿಕ ಕಡಿಮೆ ಪ್ರಮಾಣದ ನೈಟ್ರೋಜನ್ ಆಕ್ಸೈಡ್, ಸಲ್ಪರ್ ಡೈ ಆಕ್ಸ್ ೖಡ್ ಹೊರಚೆಲ್ಲುವ ಪಟಾಕಿಗಳನ್ನೇ ಹಸಿರು ಪಟಾಕಿ ಎನ್ನಲಾಗಿದೆ. ಆದರೆ, ಇಂತಹ ಪಟಾಕಿಗಳ ಬಗ್ಗೆ ಸ್ಪಷ್ಟ ನಿಲುವಿಗೆ ಬಾರದ ಸರ್ಕಾರ , ಜಿಲ್ಲಾಡಳಿತಕ್ಕೂ ಸರಿಯಾದ ಮಾಹಿತಿ, ನಿರ್ದೇಶನ ನೀಡಿಲ್ಲ. ಹೀಗಾಗಿ ಕೆಲ ಅಧಿಕಾರಿಗಳಿಗೂ ಹಸಿರು ಪಟಾಕಿ ಬಗ್ಗೆ ಗೊಂದಲ ಉಂಟಾಗಿದೆ. ಮಾರಾಟಗಾರರು ಸಹ ಜಿಲ್ಲಾಡಳಿತಕ್ಕೆ ಮಾರಾಟದ ಸಂಬಂಧ ಅನುಮತಿಯನ್ನೇ ಕೇಳಿಲ್ಲ. ಅನುಮತಿ ಇದ್ದರಷ್ಟೆ ಪಟಾಕಿ ಮಾರಾಟ ಮಾಡಲು ಪೊಲೀಸರು ಬಿಡುತ್ತಾರೆ. ಇಲ್ಲದಿದ್ದರೆ, ಅಷ್ಟು ಸುಲಭಕ್ಕೆ ಅವಕಾಶ ನೀಡುವುದಿಲ್ಲ. ಹೀಗಾಗಿ ಹಸಿರು ಪಟಾಕಿಗಳ ಬಗೆಗಿನ ಗೊಂದಲದಿಂದಾಗಿ ಕಾಳಸಂತೆಯಲ್ಲಿ ಪಟಾಕಿಗಳ ಸದ್ದು ಈ ಭಾರಿ ಕೇಳಬಹುದು.

ಸರ್ಕಾರದ ನಿರ್ದೇಶನಂತೆ ಹಸಿರು ಪಟಾಕಿಗಳನ್ನಷ್ಟೇ ಹಬ್ಬಕ್ಕೆ ಬಳಕೆ ಮಾಡಬೇಕು. ಕಳೆದ ವರ್ಷ ಜಿಲ್ಲಾ ಕ್ರೀಡಾಂಗಣದಲ್ಲಿ 14 ಮಳಿಗೆಗಳಿಗೆ ಪಟಾಕಿ ಮಾರಾಟ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ಈ ಬಾರಿ ಮಳಿಗೆ ಆರಂಭಿಸಲು ಅನುಮತಿ ಕೋರಿ ಇದುವರೆಗೂ ಯಾರೂ ಅರ್ಜಿ ಹಾಕಿಲ್ಲ. ಅನುಮತಿ ಇಲ್ಲದೇ, ಪಟಾಕಿ ಮಾರಾಟ ಮಾಡಲು ಪೊಲೀಸರು ಬಿಡುವುದಿಲ್ಲ. | ಎಂ.ಎಸ್.ಅರ್ಚನಾ ಜಿಲ್ಲಾಧಿಕಾರಿ ಹಸಿರು ಪಟಾಕಿ ಎಂದರೇ ಏನೆಂಬುದೇ ತಿಳಿದಿಲ್ಲ. ಹೀಗಿರುವಾಗ ಯಾವ ಪಟಾಕಿ ಮಾರಾಟ ಮಾಡಲಿ. ಜೀವನ ನಿರ್ವಹಣೆಗೆ ಇದ್ದ ದೀಪಾವಳಿ ಎಂಬ ಬೆಳಕಿನ ಹಬ್ಬವೂ ನಮ್ಮ ಪಾಲಿಗೆ ಕತ್ತಲಾದಂತಾಗಿದೆ. | ಸುರೇಶ್ ಪಟಾಕಿ ಮಾರಾಟಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net