ಹಸಿರು ಮಹಾನಗರವಾಗಿಸುವ ಗುರಿ, ವಿವಿಧ ಸಂಘಟನೆಗಳಿಂದ 19 ಸಾವಿರ ಸಸಿ ವಿತರಣೆ

IMG_20231227_212007_746.jpg
Published on

ಹುಬ್ಬಳ್ಳಿ: ಪರಿಸರ ಸಂರಕ್ಷಣೆಗಾಗಿ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಇವರಿಂದ ಉದ್ಘಾಟನೆಗೊಂಡ ರನ್ ಫಾರ್ ನೇಚರ್ ಕಾರ್ಯಕ್ರಮದ ಅಡಿ ಸುಮಾರು 19 ಸಾವಿರ ಸಸಿಗಳನ್ನು ಜನಸಾಮಾನ್ಯರಿಗೆ ವಿತರಣೆ ಮಾಡಲಾಗಿದೆ.

ಗ್ರೀನ್ ಕರ್ನಾಟಕ ಅಸೋಶಿಯೇಶನ್, ವಸುಂಧರಾ ಫೌಂಡೇಷನ್ ಹಾಗೂ ವಿ ಕೇರ್ ಫೌಂಡೇಷನ್ ವತಿಯಿಂದ ಕಳೆದ 7 ತಿಂಗಳಿಂದ ನಿರಂತರ ಪರಿಸರದ ಕೆಲಸ ಮಾಡುತ್ತ ಬರಲಾಗಿದೆ. ಸುಮಾರು 6 ಸಾವಿರ ಗಿಡಗಳನ್ನು ವಿವಿಧ ಬಡಾವಣೆಯ ಉದ್ಯಾನ ಹಾಗೂ ಕೆರೆಗಳ ದಂಡೆಯ ಮೇಲೆ ನೆಡಲಾಗಿದೆ.

ಮುಖ್ಯ ಪ್ರಾಯೋಜಕರಾದ ಕಾಟವೆ ಬಿಲ್ಡರ್ಸ್ ಆ್ಯಂಡ್ ಡೆವಲಪರ್, ಸ್ವರ್ಣ ಗ್ರುಪ್ ಆಫ್ ಕಂಪನೀಸ್, ಎಸ್.ಸಿ. ಶೆಟ್ಟರ್ ಆ್ಯಂಡ್ ಸನ್ಸ್ ಲಿಮಿಟೆಡ್, ಪಂಚಾಮೃತ ಡಿಲಕ್ಸ್ ರೈಸ್ ಹಾಗೂ ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಹಾಗೂ ಅನೇಕ ಉದ್ಯಮಿಗಳು ಸಹಕಾರ ನೀಡಿದ್ದಾರೆ ಎಂದು ಗ್ರೀನ್ ಕರ್ನಾಟಕ ಅಸೋಸಿಯೇಶನ್ ಅಧ್ಯಕ್ಷ ಚನ್ನು ಹೊಸಮನಿ, ವಸುಂಧರಾ ಫೌಂಡೇಷನ್ ಅಧ್ಯಕ್ಷ ಮೇಘರಾಜ ಕೆರೂರ ತಿಳಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪ್ರಸ್ತಾವನೆ ಮೇರೆಗೆ ಕೋಲ್ ಇಂಡಿಯಾ ಲಿಮಿಟೆಡ್ ಸಿಎಸ್ಆರ್ ಅನುದಾನದಲ್ಲಿ 4 ಸಾವಿರ ಸಸಿಗಳನ್ನು ವಿವಿಧೆಡೆ ನೆಡಲಾಗಿದೆ.

ಬರುವ ಮಳೆಗಾಲದಲ್ಲಿ ಸ್ಥಳಿಯರು, ಉದ್ಯಮಿಗಳ ಸಹಕಾರದೊಂದಿಗೆ ಇನ್ನೂ ಹೆಚ್ಚಿನ ಗುರಿ ಇಟ್ಟುಕೊಂಡು ಸುಮಾರು 30ರಿಂದ 40 ಸಾವಿರ ಸಸಿಗಳನ್ನು ಮಹಾನಗರದಲ್ಲಿ ನೆಟ್ಟು ಹಸಿರು ನಗರವಾಗಿಸುವ ಗುರಿ ಹೊಂದಿದ್ದೇವೆ. ರನ್ ಫಾರ್ ನೇಚರ್ ಸಮಾರೋಪದ ಅಂಗವಾಗಿ 150 ಸಸಿಗಳನ್ನು ನಗರದ ತೋಳನಕೆರೆ ಉದ್ಯಾನದಲ್ಲಿ ನೆಡಲಾಯಿತು ಎಂದು ತಿಳಿಸಿದ್ದಾರೆ.

ಮೇಯರ್ ವೀಣಾ ಬರದ್ವಾಡ, ಡಾ. ವಿ.ಎಸ್.ವಿ. ಪ್ರಸಾದ, ಉದ್ಯಮಿಗಳಾದ ವೆಂಕಟೇಶ ಕಾಟವೆ, ರಮೇಶ ಪಾಟೀಲ್, ವಿಶ್ವನಾಥ ಸೋಮಾಪೂರ, ಪ್ರಕಾಶ ಬಾನಾ, ಗಿರೀಶ ನಾಲ್ವಡಿ, ಸುನೀಲ್ ಧಾರವಾಡ ಶೆಟ್ಟಿ, ಪಾಲಿಕೆ ಸದಸ್ಯರಾದ ರಾಮಣ್ಣ ಬಡಿಗೇರ, ಶಿವು ಮೆಣಸಿನಕಾಯಿ, ವಿ-ಕೇರ್ ಫೌಂಡೇಶನ್ ಅಧ್ಯಕ್ಷ ಗಂಗಾಧರ ಗುಜಮಾಗಡಿ, ಜೀವನ ವಸ್ತ್ರದ, ವಿನಾಯಕ ನಾಯ್ಕರ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net