

ಕುಂದಾಪುರ: ಬಿ.ಎಸ್.ಯಡಿಯೂರಪ್ಪನವರು ಹಿಂದಿನ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಚಾಲನೆಗೆ ತಂದಿದ್ದ ಹಸಿರು ಕವಚ ಮಹತ್ತರ ಯೋಜನೆ ಮತ್ತೆ ಅನುಷ್ಠಾನಗೊಳ್ಳಲಿದೆ. ಇದಕ್ಕೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು. ಕುಂದಾಪುರದಲ್ಲಿ ಗುರುವಾರ ಕುಂದಾಪುರ ತಾಲೂಕು ಅರಣ್ಯ ಇಲಾಖೆ, ತಾಲೂಕು ಪಂಚಾಯಿತಿ, ಜೀವ ವೈವಿಧ್ಯ ಮಂಡಳಿ ಆಶ್ರಯದಲ್ಲಿ ಆಯೋಜಿಸಲಾದ ಜೈವವೈವಿಧ್ಯ ಮಂಡಳಿ ಮಾಹಿತಿ ಸಭೆಯಲ್ಲಿ ಅವರು ಮಾತನಾಡಿದರು.
ಎಲ್ಲ ಇಲಾಖೆಗಳಲ್ಲೂ ಹಸಿರು ಪರಿಕಲ್ಪನೆಯಲ್ಲಿ ಹಸಿರು ಬಜೆಟ್ ಮಂಡನೆಗೆ ಸಲಹೆ ಮಾಡಿದ್ದು, ಅದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಪರಿಸರ ಹಸಿರಿನ ಜತೆ ಮುಂದೆ ಇಲಾಖೆಗಳು ಬೆಸೆದುಕೊಳ್ಳಲಿದ್ದು, ಪ್ರತಿಯೊಂದಕ್ಕೂ ಖರ್ಚು ವೆಚ್ಚದ ಲೆಕ್ಕ ಇಲಾಖೆ ಇಡಬೇಕಾಗುತ್ತದೆ ಎಂದರು. ಅರಣ್ಯ ವೈವಿಧ್ಯ, ಕೃಷಿ ವೈವಿಧ್ಯ, ದೇವರ ಕಾಡು, ಸ್ವಾಭಾವಿಕ ಕಾಡು, ಪರಿಸರ ಸೂಕ್ಷ್ಮ ಪ್ರದೇಶ, ಕೆರೆ, ನೀರಾಶ್ರಿತ ತಾಣಗಳ ಸಂರಕ್ಷಿತ ಪ್ರದೇಶ ಎಂದು ಪರಿಗಣಿಸಿ, ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತದೆ. ಕೃಷಿಯಲ್ಲಿ ವಿಶೇಷ ತಳಿಗಳ ಅನ್ವೇಷಣೆ, ಸ್ವಾಭಾವಿಕ ಕೃಷಿ, ಸಾವಯವ ಕೃಷಿ ಮಾಡಿ ವಿಶೇಷ ಸಾಧನೆ ಮಾಡಿದ ಕೃಷಿಕ ಹಾಗೂ ನಾಟಿ ವೈದ್ಯರ ಗುರುತಿಸಿ ಸನ್ಮಾನಿಸುವ ಕೆಲಸ ಕೂಡ ನಡೆಯಲಿದೆ. ಕುಂದಾಪುರ ತಾಲೂಕು ಗ್ರಾಪಂಗೆ 14ನೇ ಹಣಕಾಸು ಯೋಜನೆಯ 18.28 ಕೋಟಿ ರೂ. ಇದ್ದು, ಅದರಲ್ಲಿ ಶೇ.5 ಹಣ ಬಳಸಿಕೊಳ್ಳಲಾಗುತ್ತದೆ ಎಂದರು. ಪರಿಸರ ಆಸಕ್ತರು, ಸ್ಥಳೀಯ ನಾಗರಿಕರ ಸೇರಿಸಿಕೊಂಡು ಸಮಿತಿ ರಚನೆ ಮಾಡಲಾಗುತ್ತಿದ್ದು, ಜೀವ ವೈವಿಧ್ಯ ಕಾರ್ಯಕ್ರಮದ ಖರ್ಚು ವೆಚ್ಚಕ್ಕೆ ಶೇ.14ರ ಅನುದಾನದಲ್ಲಿ ಶೇ.5 ಅನುದಾನ ಬಳಸಲು ಅವಕಾಶವಿದೆ. ಪಶ್ಚಿಮ ಘಟ್ಟ ಅತಿ ಸೂಕ್ಷ್ಮ ಪ್ರದೇಶ ಅಳವಿನಂಚಿನಲ್ಲಿರುವ ಸಸ್ಯ ಪ್ರಬೇಧ, ಮರಗಿಡಗಳು, ಪ್ರಾಣಿ ಸಂಕುಲಗಳ ರಕ್ಷಣೆ ಕೂಡ ಜೈವಿಕ ವೈವಿಧ್ಯದಲ್ಲಿ ಬರುತ್ತದೆ ಎಂದು ಹೇಳಿದರು. ಡಾ.ಕೇಶವ ಕೊಡ್ಸೆ ಮಂಡಳಿ ಅವರು, ಯಾವ ವಿಷಯದಲ್ಲಿ ಆಸಕ್ತಿ ವಹಿಸಬೇಕು, ಹಿಂದೆ ಆಗಿದ್ದು ಮುಂದೆ ಆಗಬೇಕಾಗಿರುವ ಬಗ್ಗೆ ಸಲಹೆ ನೀಡಿದರು. ಕುಂದಾಪುರ ತಾಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಪಂ ಇಒ ಕೇಶವ ಶೆಟ್ಟಿಗಾರ್ ಇದ್ದರು.
ಅರಣ್ಯ ಪ್ರದೇಶದ ಗಣಿಗಾರಿಕೆ, ಅಕ್ರಮ ಚಟುವಟಿಕೆ, ನೀರಿನ ದುರ್ಬಳಕೆ, ತಡೆಯುವ ಜೊತೆ ವೈಶಿಷ್ಟೃ ಪರಿಸರ ಪ್ರದೇಶಗಳ ಗುರುತಿಸಿ, ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲಾಗುತ್ತದೆ. ಬರಿದಾಗುತ್ತಿರುವ ನೀರಿನ ತಾಣಗಳು, ಏರುತ್ತಿರುವ ತಾಪಮಾನ ಎಲ್ಲವನ್ನೂ ಗಮನದಲ್ಲಿಟ್ಟು ಕೊಂಡು ಮಂಡಳಿ ಕೆಲಸ ಮಾಡಲಿದೆ.
ಅನಂತ ಹೆಗಡೆ ಆಶೀಸರ, ಅಧ್ಯಕ್ಷರು, ಕರ್ನಾಟಕ ಜೀವವೈವಿಧ್ಯ ಮಂಡಳಿ