ಡಿಪೋ ಉದ್ಘಾಟನೆಗೆ ಅಧಿಕಾರಿಗಳ ಮೀನಮೇಷ

0 5chn 2
Published on

ಚನ್ನಗಿರಿ: ತಾಲೂಕಿನ ಅಜ್ಜಿಹಳ್ಳಿ ಗ್ರಾಮದ ಬಳಿಯಲ್ಲಿ ಸರ್ಕಾರದ ಅನುದಾನ 8 ಕೋಟಿ ರೂ. ವೆಚ್ಚದಲ್ಲಿ ಕೆಎಸ್​ಆರ್​ಟಿಸಿ ಡಿಪೋ ಕಾಮಗಾರಿ ಮುಗಿದರೂ ಉದ್ಘಾಟನೆ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. 15 ದಿನಗಳೊಳಗೆ ಉದ್ಘಾಟನೆ ಮಾಡದಿದ್ದರೆ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹಸಿರುಸೇನೆ ಅಧ್ಯಕ್ಷ ಬಸವಾಪುರ ರಂಗನಾಥ್ ತಿಳಿಸಿದರು.

ತಾಲೂಕಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ದಾವಣಗೆರೆಯಲ್ಲಿ ಏ.16 ರಂದು ನಡೆಯಲಿರುವ ನವಕರ್ನಾಟಕ ನಿರ್ಮಾಣ ಆಂದೋಲನ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ವಾತಂತ್ರ್ಯ ಬಂದು 76 ವಸಂತಗಳು ಕಳೆದರೂ ತಾಲೂಕಿನ ಅನೇಕ ಗ್ರಾಮಗಳು ಬಸ್ ಸೌಕರ್ಯ ಕಂಡಿಲ್ಲ. ಮಕ್ಕಳಿಗೆ ಶಾಲಾ- ಕಾಲೇಜಿಗೆ ಹೋಗಿ ಬರಲು ಕಷ್ಟವಾಗುತ್ತಿದೆ. ಮಕ್ಕಳು ಕಲಿಕೆಯಲ್ಲಿ ಹಿಂದೆ ಉಳಿಯುತ್ತಿದ್ದಾರೆ. ಬಸ್ ಸೌಲಭ್ಯ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂದರು.

ಬಸ್ ಡಿಪೋ ಅವಶ್ಯಕತೆ ಇದೆ ಎಂದು 2021 ರಲ್ಲಿ ಸರ್ಕಾರದ ಅನುದಾನವನ್ನು ಮಂಜೂರು ಮಾಡಿಸಿ ನಿವೇಶವನ್ನು ಗುರುತಿಸಿ, ಟೆಂಡರ್ ಕರೆದು ಕಾಮಗಾರಿ ನೀಡಿ, ಗುತ್ತಿಗೆದಾರರು ಕಾಮಗಾರಿ ಮುಗಿಸಿ 6 ತಿಂಗಳಾದರೂ ಕಟ್ಟಡದ ಉದ್ಘಾಟನೆ ಮಾಡುತ್ತಿಲ್ಲ ಎಂದು ಹೇಳಿದರು.

ತಾಲೂಕಿನ ಚಿಕ್ಕಮಾಡಾಳು ಗ್ರಾಮದ ಬಳಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಕಟ್ಟಡದ ಕಾಮಗಾರಿ ಸಂಪೂರ್ಣವಾಗಿದ್ದರೂ ಉದ್ಘಾಟನೆಯಾಗಿಲ್ಲ. ಮೇಲಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಬೇಕಿದೆ ಎಂದು ತಿಳಿಸಿದರು.

ದಾವಣಗೆರೆಯಲ್ಲಿ ನಡೆಯುವ ನವಕರ್ನಾಟಕ ನಿರ್ಮಾಣ ಆಂದೋಲನಕ್ಕೆ ತಾಲೂಕಿನಿಂದ ಒಂದು ಸಾವಿರ ರೈತರು ಭಾಗವಹಿಸಲಿದ್ದಾರೆ ಎಂದರು.

ಸಭೆಯಲ್ಲಿ ರೈತಸಂಘದ ಪ್ರಧಾನ ಕಾರ್ಯದರ್ಶಿ ಖಲೀಂವುಲ್ಲಾ, ರಾಜ್ಯ ಕಾರ್ಯದರ್ಶಿ ಚನ್ನಬಸಪ್ಪ, ಬಸವರಾಜ್, ಶಂಕರ್ ದೇವರಹಳ್ಳಿ, ಜಕ್ಕಲಿ ನಾಗರಾಜ್, ದಾವಣಗೆರೆ ಗಣೇಶ್, ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net