

ಬದಿಯಡ್ಕ: ಮನೆ-ಮನೆಗಳಿಂದ ತ್ಯಾಜ್ಯ ವಿಲೇವಾರಿಗೆ ಸಂಗ್ರಹಿಸುವ ಹಸಿರು ಕ್ರಿಯಾಸೇನೆ ಉದ್ಯೋಗಿಗಳು ಕೃತ್ತಿಮ ಲೆಕ್ಕಾಚಾರ ನೀಡಿ ವ್ಯವಸ್ಥೆ ಬುಡಮೇಲುಗೊಳಿಸಲು ಪ್ರಯತ್ನಿಸಿದ್ದಾರೆಂಬ ಆರೋಪದಲ್ಲಿ ಇಬ್ಬರು ಹಸಿರು ಕ್ರಿಯಾಸೇನೆ ಉದ್ಯೋಗಿಗಳನ್ನು ಅಮಾನತುಗೈದು ವಿಜಿಲೆನ್ಸ್ ತನಿಖೆ ನಡೆಸಲು ಬದಿಯಡ್ಕ ಪಂಚಾಯಿತಿ ಆಡಳಿತ ಸಮಿತಿ ಸಭೆ ನಿರ್ಧರಿಸಿದೆ.
ಪಂಚಾಯಿತಿ ವ್ಯಾಪ್ತಿಯ 17ನೇ ವಾರ್ಡ್‌ನ ಹಸಿರು ಕ್ರಿಯಾಸೇನೆ ಕಾರ್ಯಕರ್ತೆಯಾದ ಸೀನತ್ ಏಣಿಯರ್ಪು, ಶಾರದ ಎಂಬುವರನ್ನು ತನಿಖೆಗೆ ವಿಧೇಯಗೊಳಿಸಿ ಕೆಲಸದಿಂದ ಅಮಾನತುಗೈಯಲು, ವಿಜಿಲೆನ್ಸ್ ಸಮಗ್ರ ತನಿಖೆಗೊಳಪಡಿಸಲು ಮಂಗಳವಾರ ಸೇರಿದ ಆಡಳಿತ ಸಮಿತಿ ಸಭೆ ನಿರ್ಧರಿಸಿದೆ. ಪಂಚಾಯಿತಿಯ 19 ಸದಸ್ಯರಲ್ಲಿ 17 ಜನಪ್ರತಿನಿಧಿಗಳ ಬೆಂಬಲದೊಂದಿಗೆ ಈ ನಿರ್ಣಯ ಕೈಗೊಂಡಿದೆ.
ಹಸಿರು ಕ್ರಿಯಾಸೇನೆ ಕಾರ್ಯಕರ್ತೆಯರು ನಡೆಸಿದ ವಂಚನೆ ಖಂಡಿಸಿ ಬುಧವಾರ ರಾತ್ರಿ ಏಣಿಯರ್ಪಲ್ಲಿ ಸ್ಥಳೀಯ ಜನಕೀಯ ಸಮಿತಿ ದೊಂದಿ ಮೆರವಣಿಗೆ ನಡೆಸಿದೆ. ಆರೋಪಕ್ಕೊಳಗಾದ ಕಾರ್ಯಕರ್ತೆಯರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ.
ಜನಕೀಯ ಸಮಿತಿ ನಡೆಸಿದ ಪ್ರತಿಭಟನೆಗೆ ಅಶ್ವಿನಿ ಕೆ.ಎಂ., ಸ್ವಪ್ನಾ, ರಜನಿ ಸಂದೀಪ್, ಪ್ರೇಮ, ಉಮೇಶ್ ಏಣಿಯರ್ಪು, ಪುನೀತ್, ಬಾಲಗೋಪಾಲ, ಸತೀಶ್ ಏಣಿಯರ್ಪು, ಅಜಿತ್ ಮೊದಲಾದವರು ನೇತೃತ್ವ ನೀಡಿದರು.
ವಾರ್ಡ್ ವ್ಯಾಪ್ತಿಯಲ್ಲಿ ಹಸಿರು ಕ್ರಿಯಾಸೇನೆ ಕಾರ್ಯಕರ್ತರು ಬಳಕೆದಾರರ ಮೊತ್ತದ ರೂಪದಲ್ಲಿ ಸಂಗ್ರಹಿಸುವ ಮೊತ್ತವನ್ನು ಬ್ಯಾಂಕ್‌ನಲ್ಲಿ ಪಾವತಿಸಬೇಕಾಗಿರುವುದು ನಿಯಮ. ಹೀಗೆ ಸಂಗ್ರಹಿಸಿದ ಮೊತ್ತ ಪೂರ್ಣ ಪಾವತಿಸದೆ ಪಂಚಾಯಿತಿ ಕಚೇರಿಯಲ್ಲಿ ನೀಡುವ ರಶೀದಿಯಲ್ಲಿ ಮಾತ್ರ ಕೃತಕ ಲೆಕ್ಕಚಾರ ನೀಡಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನ್ನೆಲೆಯಲ್ಲಿ ಹಲವು ಪಕ್ಷ ಸಂಘಟನಾತ್ಮಕವಾಗಿ ಔಪಚಾರಿಕ ಖಂಡನೆ ವ್ಯಕ್ತಪಡಿಸಿ ಆಡಳಿತ ಸಮಿತಿ ತನಿಖೆ ನಡೆಸಲು ನಿರ್ಧರಿಸಿತ್ತು. ಹಸಿರು ಕ್ರಿಯಾಸೇನೆ ಪರಿಶೋಧಕ ವಿಭಾಗ ಎಲ್ಲಾ ವಾರ್ಡ್‌ಗಳಲ್ಲಿ ಲೆಕ್ಕಚಾರ ಪರಿಶೀಲನೆ ನಡೆಸಿದ ಬಳಿಕ ಕೃತಕ ಲೆಕ್ಕಾಚಾರದ ಮೊತ್ತ ಪತ್ತೆ ಹಚ್ಚಲು ಸಾಧ್ಯವಾಗಬಹುದು. ಬಿ.ಶಾಂತ ಪಂಚಾಯಿತಿ ಅಧ್ಯಕ್ಷೆ