ಗ್ರೇಟರ್ ಮೈಸೂರು ಕ್ರೆಡಿಟ್‌ವಾರ್..!

mysore-mysuru
Published on

ಸದೇಶ್ ಕಾರ್ಮಾಡ್ ಮೈಸೂರು
ನಗರ ಪಾಲಿಕೆಯಲ್ಲಿ ಇದೀಗ ‘ಗ್ರೇಟರ್ ಮೈಸೂರು ಕ್ರೆಡಿಟ್ ವಾರ್’ ಪ್ರಾರಂಭವಾಗಿದ್ದು, ಚುನಾವಣೆ ಹೊಸ್ತಿಲಿನಲ್ಲಿರುವ ನಗರ ಪಾಲಿಕೆಯಲ್ಲಿ ಇದೀಗ ಗ್ರೇಟರ್ ಮೈಸೂರು ಪ್ರಮುಖ ಚರ್ಚೆಯ ವಿಷಯವಾಗಿದೆ.

ಪ್ರಸ್ತುತ ನಗರ ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಆಡಳಿತ ನಡೆಸುತ್ತಿದ್ದು, ತನ್ನ ಅಧಿಕಾರಾವಧಿಯ ಕೊನೆಯ ಸಭೆಯಲ್ಲಿ ‘ಬೃಹತ್ ಮೈಸೂರು ಮಹಾನಗರ ಪಾಲಿಕೆ’ (ಗ್ರೇಟರ್ ಮೈಸೂರು) ವಿಷಯ ಮಂಡಿಸಿ ಅನುಮೋದನೆ ಪಡೆದು ನಂತರ ಇದೇ ವಿಷಯವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದು ಮೈತ್ರಿಕೂಟದ ಲೆಕ್ಕಾಚಾರವಾಗಿತ್ತು. ಆದರೆ, ಕಾಂಗ್ರೆಸ್ ತನ್ನ ರಾಜಕೀಯ ತಂತ್ರಗಾರಿಕೆ ಮೂಲಕ ಮೈತ್ರಿಕೂಟದ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ವಿಚಾರವಾಗಿ ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪ ಪ್ರಾರಂಭಗೊಂಡಿದೆ.

ಆಗಿದ್ದೇನು?

ಮೇಯರ್ ಶಿವಕುಮಾರ್ ಆ.31 ರಂದು ಬೆಳಗ್ಗೆ 11ಕ್ಕೆ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಪಾಲಿಕೆ ಕೌನ್ಸಿಲ್ ಸಭೆ ಹಮ್ಮಿಕೊಂಡಿದ್ದರು. ಆದರೆ, ಅದೇ ದಿನ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಬೆಂಗಳೂರಿನಲ್ಲಿ ನಗರದ ಅಭಿವೃದ್ಧಿಗೆ ಕುರಿತು ಸಭೆ ಏರ್ಪಡಿಸಿದ್ದ ಹಿನ್ನೆಲೆಯಲ್ಲಿ ನಗರ ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳು ತೆರಳುವ ಅನಿವಾರ್ಯತೆ ಇತ್ತು. ಹೀಗಾಗಿ ಆಯುಕ್ತರ ಸೂಚನೆ ಮೇರೆಗೆ ಕೌನ್ಸಿಲ್ ಕಾರ್ಯದರ್ಶಿ ಸಭೆಯನ್ನು ಮೂದೂಡಿದ್ದರು. ನಗರ ಪಾಲಿಕೆ ಕಾಂಗ್ರೆಸ್ ಸದಸ್ಯರ ಸೂಚನೆಯ ಮೇರೆಗೆ ಇಂಥದೊಂದು ಸಭೆಯನ್ನು ಸಚಿವರು ಆಯೋಜಿಸುವ ಮೂಲಕ ಕೌನ್ಸಿಲ್ ಸಭೆಯನ್ನು ಮುಂದೂಡುವಂತೆ ಮಾಡಿದ್ದಾರೆ ಎಂಬುದು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಆರೋಪವಾಗಿದೆ.

ಕ್ರೆಡಿಟ್ ಯಾರಿಗೆ ಸೇರಬೇಕು?

ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ನಡೆಸುತ್ತಿರುವ ಸಂದರ್ಭ ಗ್ರೇಟರ್ ಮೈಸೂರು ವಿಷಯಕ್ಕೆ ನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ದೊರೆತರೆ ಅದರ ಕ್ರೆಡಿಟ್ ಯಾರಿಗೆ ಹೋಗಲಿದೆ ಎಂಬುದು ಇದೀಗ ಪ್ರಮುಖ ಚರ್ಚೆಯ ವಿಷಯವಾಗಿದೆ. ಈ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ.

ಗ್ರೇಟರ್ ಮೈಸೂರು ರಚನೆಯಾದರೆ ಬೇಕಾಗುವ ಸಿಬ್ಬಂದಿ, ಅರ್ಥಿಕ ಸಂಪನ್ಮೂಲದ ಕುರಿತು ವಿಸ್ತೃತವಾಗಿ ಚರ್ಚೆ ನಡೆಸದೆ ಅನುಮೋದನೆ ನೀಡುವುದು ಸರಿಯಲ್ಲ. ಇದರಿಂದ ನಗರದ ಬೆಳವಣಿಗೆ ಅಡ್ಡಿಯಾಗಲಿದ್ದು, ಬಿಜೆಪಿ-ಜೆಡಿಎಸ್ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಅಂತಿಮ ಕ್ಷಣದಲ್ಲಿ ಗ್ರೇಟರ್ ಮೈಸೂರು ವಿಷಯ ಚರ್ಚೆಗೆ ತಂದಿದ್ದಾರೆ ಎಂಬುದು ಕಾಂಗ್ರೆಸ್‌ನ ಆರೋಪ ಾಗಿದ್ದು, ಕಾಂಗ್ರೆಸ್‌ಗೆ ಅಭಿವೃದ್ಧಿ ವಿಚಾರದಲ್ಲಿ ಆಸಕ್ತಿ ಇಲ್ಲ ಎಂಬುದು ಬಿಜೆಪಿ ಪ್ರತ್ಯಾರೋಪ ಮಾಡುತ್ತಿದೆ. ಪಾಲಿಕೆ ಅಧಿಕಾರಾವಧಿ ನ.16ಕ್ಕೆ ಮುಕ್ತಾಯಗೊಳ್ಳಲಿದ್ದು, ಈಗಾಗಲೇ ಪಾಲಿಕೆಯಲ್ಲಿ ಚುನಾವಣೆಯ ಕಾವು ಪ್ರಾರಂಭಗೊಂಡಿದೆ. ಚುನಾವಣೆಯಲ್ಲಿ ಗ್ರೇಟರ್ ಮೈಸೂರು ವಿಚಾರ ಪ್ರಮುಖವಾಗಿ ಚರ್ಚೆಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.

ಆಯುಕ್ತರ ವಿರುದ್ಧ ದೂರು

‘ಮೇಯರ್ ಅಧಿಕಾರ ಮೊಟಕು’ ವಿಚಾರ ಇದೀಗ ಸರ್ಕಾರದ ಅಂಗಳದವರೆಗೂ ತಲುಪಿದೆ. ಸರ್ಕಾರದ ಮುಖ್ಯಕಾರ್ಯದರ್ಶಿ, ನಗರಾಭಿವೃದ್ಧಿ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿರುವ ಮೇಯರ್ ಶಿವಕುಮಾರ್ ಆಯುಕ್ತರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆ.31ರಂದು ಹಮ್ಮಿಕೊಂಡಿದ್ದ ಪಾಲಿಕೆ ಕೌನ್ಸಿಲ್ ಸಭೆಯನ್ನು ನಿಯಮ ಬಾಹಿರವಾಗಿ ಆಯುಕ್ತರು ಮುಂದೂ ಡಿದ್ದಾರೆ. ಸಭೆಯನ್ನು ಕರೆಯುವ, ಮುಂದೂಡುವ ಅಧಿಕಾರ ಮೇಯರ್‌ಗೆ ಮಾತ್ರ ಇದೆ. ಆದರೆ, ನನ್ನ ಗಮನಕ್ಕೆ ತಾರದೆ ಆಯುಕ್ತರು ಸಭೆ ಮುಂದೂಡಿರುವುದು ನಿಯಮ ಬಾಹಿರ. ಮೇಯರ್ ಅಧಿಕಾರ ಕಸಿದಿರುವ ಆಯುಕ್ತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನಗರವನ್ನು ಯೋಜನಾಬದ್ಧವಾಗಿ ಅಭಿವೃದ್ಧಿ ಪಡಿಸಲು ಗ್ರೇಟರ್ ಮೈಸೂರು ರಚನೆ ಅನಿವಾರ್ಯ. ಆದರೆ, ಕಾಂಗ್ರೆಸ್ ಸದಸ್ಯರು ಅಭಿವೃದ್ಧಿಯನ್ನು ಬಯಸುತ್ತಿಲ್ಲ. ಈ ಕಾರಣಕ್ಕೆ ಆಗಸ್ಟ್ 31 ರಂದು ಹಮ್ಮಿಕೊಂಡಿದ್ದ ಸಭೆಯನ್ನು ಆಯುಕ್ತರ ಮೇಲೆ ಒತ್ತಡ ಹೇರಿ ಮುಂದೂಡುವಂತೆ ಮಾಡಿದ್ದಾರೆ. ಗ್ರೇಟರ್ ಮೈಸೂರು ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ಮಾಡಲು ಅವಕಾಶ ಇತ್ತು. ಆದರೆ, ಕಾಂಗ್ರೆಸ್ ಸದಸ್ಯರು ಚರ್ಚೆಗೆ ಸಿದ್ಧರಿಲ್ಲ.
ಶಿವಕುಮಾರ್, ಮೇಯರ್

ಮೇಯರ್ ಶಿವಕುಮಾರ್ ಹಲವು ಬಾರಿ ಸಭೆಯನ್ನು ದಿಢೀರಾಗಿ ಮುಂದೂಡುವ ಸಂದರ್ಭ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿ ಸುತ್ತಿದ್ದೇನೆ ಎಂಬ ಪ್ರಜ್ಞೆ ಅವರಿಗೆ ಇರಲಿಲ್ಲವೇ? ಅಷ್ಟಕ್ಕೂ ಮೇಯರ್ ಆ.31 ರಂದು ಹಮ್ಮಿಕೊಂಡ ಸಭೆಯೇ ಅಕ್ರಮ. ಸಭೆಗೆ ಒಂದು ವಾರ ಮುಂಚಿತವಾಗಿ ಸದಸ್ಯರಿಗೆ ನೋಟಿಸ್ ನೀಡಬೇಕು. ಆದರೆ, ತರಾತುರಿಯಲ್ಲಿ ಸಭೆ ಕರೆದಿದ್ದು, ಇದಕೋಸ್ಕರ ಕಡತದಲ್ಲಿ ದಿನಾಂಕವನ್ನು ತಿದ್ದಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆ ನಮ್ಮ ಬಳಿ ಇದೆ. ಗ್ರೇಟರ್ ಮೈಸೂರು ವಿಷಯನ್ನು ತರಾತುರಿಯಲ್ಲಿ ಮಂಡಿಸಿ ಅನುಮೋದನೆ ಪಡೆಯುವುದು ಸರಿಯಲ್ಲ. ಗ್ರೇಟರ್ ಮೈಸೂರು ರಚನೆಯಾದರೆ ಎಷ್ಟು ಸಿಬ್ಬಂದಿ ಬೇಕು, ಎಷ್ಟು ಆರ್ಥಿಕ ಸಂಪನ್ಮೂಲ ಬೇಕು ಎಂದು ವಿಸ್ತೃತವಾಗಿ ಚರ್ಚೆಯಾಗಬೇಕು. ತರಾತುರಿಯಲ್ಲಿ ಗ್ರೇಟರ್ ಮೈಸೂರು ರಚಿಸುವ ಅವಶ್ಯಕತೆ ಏದೆ? ಇವರದ್ದೇ ಸರ್ಕಾರದ ಅವಧಿಯಲ್ಲಿ ಏತಕ್ಕೆ ಮಂಡಿಸಲಿಲ್ಲ?
ಅಯೂಬ್ ಖಾನ್, ನಗರ ಪಾಲಿಕೆ ಕಾಂಗ್ರೆಸ್ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net