

ಸದೇಶ್ ಕಾರ್ಮಾಡ್ ಮೈಸೂರು
ರಾಜ್ಯದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಮುಂಚೂಣಿಯಲ್ಲಿರುವ ಸಾಂಸ್ಕೃತಿಕ ನಗರಿಯು ಬೃಹತ್ ಮೈಸೂರು ಮಹಾನಗರ ಪಾಲಿಕೆಯಾಗಿ (ಗ್ರೇಟರ್ ಮೈಸೂರು) ಆಗಿ ರೂಪುಗೊಳ್ಳಬೇಕೆಂಬ ಮೈಸೂರಿಗರ ಒಂದು ದಶಕದ ಕನಸು ಮತ್ತೆ ಗರಿಬಿಚ್ಚಿದೆ.
ರಾಜ್ಯದಲ್ಲಿ 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ‘ಗ್ರೇಟರ್ ಮೈಸೂರು’ ರಚನೆಯಾಗಬೇಕು ಎಂಬ ಒತ್ತಾಯ ಕೇಳಿ ಬಂತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎ. ರಾಮದಾಸ್ ಗ್ರೇಟರ್ ಮೈಸೂರಿಗೆ ಯೋಜನೆ ಸಿದ್ಧಪಡಿಸಿದ್ದರು. ಆದರೆ ಕಾರಣಾಂತರಗಳಿಂದ ‘ಗ್ರೇಟರ್ ಮೈಸೂರು’ ಕನಸು ನನಸಾಗಲಿಲ್ಲ.
ನಂತರದ ಹಲವು ವರ್ಷಗಳಲ್ಲಿ ‘ಗ್ರೇಟರ್ ಮೈಸೂರು’ ವಿಷಯ ಕೇವಲ ಬಜೆಟ್ ಸಂದರ್ಭ ಮಾತ್ರ ಚರ್ಚೆಗೆ ಸೀಮಿತವಾಯಿತು. ಆದರೆ, ಸಂಸದ ಪ್ರತಾಪ್ ಸಿಂಹ ಮೈಸೂರಿಗರ ‘ಗ್ರೇಟರ್ ಮೈಸೂರು’ ಕನಸಿಗೆ ಮತ್ತೆ ರೆಕ್ಕೆ ಕಟ್ಟಲು ಪ್ರಾರಂಭಿಸಿದರು. ಈ ನಿಟ್ಟಿನಲ್ಲಿ ಹಲವಾರು ಸಭೆಗಳನ್ನು ನಡೆಸಿದರು. ಆದರೆ, ಕೋವಿಡ್, ಮೇಯರ್ ಚುನಾವಣೆ ವಿಳಂಬ ಹಿನ್ನೆಲೆಯಲ್ಲಿ ‘ಗ್ರೇಟರ್ ಮೈಸೂರು’ ಕುರಿತು ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಏಪ್ರಿಲ್ ತಿಂಗಳಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ಶಾಸಕರು, ಸಂಸದರ ಸಭೆ ನಡೆಸಿ ಗ್ರೇಟರ್ ಮೈಸೂರು ಕುರಿತು ಅಭಿಪ್ರಾಯ ಪಡೆಯಲಾಯಿತು. ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಗ್ರೇಟರ್ ಮೈಸೂರು ಕುರಿತು ಒಲವು ವ್ಯಕ್ತಪಡಿಸಿದ್ದಾರೆ.
ಸಂಸದರ ಅಧ್ಯಕ್ಷತೆಯಲ್ಲಿ ಸಭೆ:
ಗ್ರೇಟರ್ ಮೈಸೂರು ರಚನೆಗೆ ಸಂಬಂಧಿಸಿದಂತೆ ಶನಿವಾರ ಮೇಯರ್ ಶಿವಕುಮಾರ್, ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಅವರೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದರು. ಗ್ರೇಟರ್ ಮೈಸೂರಿಗೆ ಕೌನ್ಸಿಲ್ ಅನುಮೋದನೆ ಪಡೆದು ಸರ್ಕಾರಕ್ಕೆ ಕಳುಹಿಸುವ ಅವಶ್ಯಕತೆ ಇದೆ. ಹಾಗಾಗಿ ನಗರ ಪಾಲಿಕೆಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೊಂದಿಗೆ ಪ್ರಾಥಮಿಕ ಸುತ್ತಿನ ಸಭೆ ನಡೆಸಿ ನಂತರ ಕೌನ್ಸಿಲ್ ಸಭೆಯಲ್ಲಿ ವಿಷಯವನ್ನು ಮಂಡಿಸಿ ಒಪ್ಪಿಗೆ ಪಡೆಯಲು ಮೇಯರ್ ಶಿವಕುಮಾರ್ ನಿರ್ಧರಿಸಿದ್ದು, ನವೆಂಬರ್ ತಿಂಗಳ ಒಳಗೆ ಪಾಲಿಕೆ ಕೌನ್ಸಿಲ್‌ನಲ್ಲಿ ಗ್ರೇಟರ್ ಮೈಸೂರಿಗೆ ಅನುಮೋದನೆ ಪಡೆಯುವ ನಿರೀಕ್ಷೆ ಹೊಂದಲಾಗಿದೆ.
ಅಭಿವೃದ್ಧಿಗೆ ಹೊಸ ವೇಗ:
ಗ್ರೇಟರ್ ಮೈಸೂರು ರಚನೆಯಾದರೆ ನಗರದ ಅಭಿವೃದ್ಧಿಗೆ ಹೊಸ ವೇಗ ದೊರೆಯುವುದು ನಿಶ್ಚಿತ. ನಗರಕ್ಕೆ ಹೊಂದಿಕೊಂಡಿರುವ ಪ್ರದೇಶಗಳಿಗೆ ಮೂಲಸೌಲಭ್ಯಗಳು ಶೀಘ್ರದಲ್ಲಿಯೇ ದೊರೆತು ನಗರ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ. ನಗರ ಹಾಗೂ ನಗರದ ಹೊರ ವಲಯದ ಜನರ ದಾಹ ನೀಗಿಸಲು ಹಳೇ ಉಂಡವಾಡಿ ಕುಡಿಯುವ ನೀರಿನ ಯೋಜನೆ, ಕಬಿನಿ ಎರಡನೇ ಹಂತದ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗ್ರೇಟರ್ ಮೈಸೂರು ವ್ಯಾಪ್ತಿಗೆ ಬರುವ ಪ್ರದೇಶ ಗಳಲ್ಲಿ ಕುಡಿಯುವ ನೀರು ಹಾಗೂ ಸೇರಿದಂತೆ ಎಲ್ಲ ಮೂಲಸೌಲಭ್ಯಗಳು ವೇಗವಾಗಿ ದೊರೆಯುವ ನಿರೀಕ್ಷೆ ಹೊಂದಲಾಗಿದೆ. ಎಲ್ಲ ಸೌಲಭ್ಯಗಳು ದೊರೆತರೆ ಸಹಜವಾಗಿಯೇ ಹೊಸ ಬಡಾವಣೆಗಳಲ್ಲಿ ಜನರು ಮನೆಗಳ ನಿರ್ಮಾಣಕ್ಕೆ ಉತ್ಸಾಹ ತೋರುತ್ತಾರೆ. ಇದರಿಂದ ಪಾಲಿಕೆಯ ಆದಾಯವೂ ವೃದ್ಧಿಯಾಗುತ್ತದೆ.
ಯಾವೆಲ್ಲ ಪ್ರದೇಶಗಳು ಸೇರ್ಪಡೆ?
ನಗರದ ಸುತ್ತಮುತ್ತಲಿನ ಪ್ರದೇಶಗಳನ್ನು ಸೇರಿಸಿ ಗ್ರೇಟರ್ ಮೈಸೂರು ರಚಿಸಲು ಉದ್ದೇಶಿಸಲಾಗಿದೆ. ಗ್ರೇಟರ್ ಮೈಸೂರು ರಚನೆಯಾದರೆ ಹೂಟಗಳ್ಳಿ ನಗರಸಭೆ, ಬೋಗಾದಿ, ಕಡಕೊಳ, ಶ್ರೀರಾಂಪುರ ಮತ್ತು ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ, ಹಾಲನಹಳ್ಳಿ, ಚಾಮುಂಡಿಬೆಟ್ಟ, ಇಲವಾಲ ಮತ್ತು ಸಿದ್ದಲಿಂಗಪುರ ಗ್ರಾಮ ಪಂಚಾಯಿತಿಗಳು ಒಳಪಡಲಿವೆ. ಈ ಎಲ್ಲ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ನಗರಸಭೆಯ ಒಪ್ಪಿಗೆ ಅವಶ್ಯಕತೆ ಇದೆ. ಜತೆಗೆ ನಗರ ಪಾಲಿಕೆಯ ಒಪ್ಪಿಗೆಯೂ ದೊರೆಯಬೇಕಾಗಿದೆ.
ವೃದ್ಧಿಸಲಿದೆ ನಗರದ ಆದಾಯ
ಗ್ರೇಟರ್ ಮೈಸೂರು ಕಾರ್ಯರೂಪಕ್ಕೆ ಬಂದರೆ ಪಾಲಿಕೆಗೆ ಹೆಚ್ಚುವರಿಯಾಗಿ 1.51 ಲಕ್ಷ ಜನಸಂಖ್ಯೆ ಸೇರ್ಪಡೆಯಾಗಲಿದೆ. ಅಲ್ಲದೆ ಹೆಚ್ಚುವರಿಯಾಗಿ 25.81 ಕೋಟಿ ರೂ. ಆದಾಯ ಹರಿದು ಬರಲಿದೆ. ನಗರದ ಹೊರ ವಲಯದಲ್ಲಿರುವ ಪಟ್ಟಣ ಪಂಚಾಯಿತಿ, ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ದರ ಕಡಿಮೆ ಇದ್ದು, ನಗರ ಪಾಲಿಕೆ ವ್ಯಾಪ್ತಿಗೆ ಬಂದರೆ ತೆರಿಗೆ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಪ್ರಸ್ತುತ ಸಂಗ್ರಹವಾಗುತ್ತಿರುವ ತೆರಿಗೆ ಹಣಕ್ಕಿಂತ ಹೆಚ್ಚಿನ ಪ್ರಮಾಣದ ಆದಾಯ ನಗರ ಪಾಲಿಕೆಗೆ ದೊರೆಯುವ ನಿರೀಕ್ಷೆ ಇದೆ. ಗ್ರೇಟರ್ ಮೈಸೂರು ರಚನೆಯಾದರೆ ಜನಸಂಖ್ಯೆಗೆ ಪೂರಕವಾಗಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗಲಿದೆ. ಅದರ ಜತೆಗೆ ಹೆಚ್ಚುವರಿ ಅಧಿಕಾರಿ, ಸಿಬ್ಬಂದಿ, ಪೌರ ಕಾರ್ಮಿಕರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕಾಗಿದೆ.
ಗ್ರೇಟರ್ ಮೈಸೂರು ರಚನೆಗೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಚರ್ಚೆ ನಡೆಸಿದ್ದೇವೆ. ಗ್ರೇಟರ್ ಮೈಸೂರು ರಚನೆಯಾದರೆ ನಗರದ ಬೆಳವಣಿಗೆಗೆ ಆಗುವ ಲಾಭ, ಎದುರಾಗುವ ಸಮಸ್ಯೆ ಸವಾಲುಗಳು ಕುರಿತು ಸುದೀರ್ಘ ಚರ್ಚೆ ನಡೆಸಿದ್ದೇವೆ. ಎಲ್ಲರು ಗ್ರೇಟರ್ ಮೈಸೂರು ರಚನೆಯ ಕುರಿತು ಒಲವು ತೋರುತ್ತಿದ್ದಾರೆ. ಸದ್ಯದಲ್ಲಿಯೇ ಪಾಲಿಕೆ ಸದಸ್ಯರ ಸಭೆ ಕರೆದು ಅವರೊಂದಿಗೆ ಚರ್ಚಿಸಲಾಗುವುದು. ಅದಾದ ನಂತರ ಕೌನ್ಸಿಲ್ ಸಭೆಯ ಅನುಮೋದನೆ ಪಡೆದು ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು. ಸರ್ಕಾರ ಮುಂದೆ ಈ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ.
ಶಿವಕುಮಾರ್, ಮೇಯರ್
ಗ್ರೇಟರ್ ಮೈಸೂರು ರಚನೆಗೆ ಸಂಬಂಧಿಸಿದಂತೆ ಈಗಾಗಲೇ ನಕ್ಷೆ ಹಾಗೂ ಪ್ರಸ್ತಾವನೆ ಸಿದ್ಧ ಪಡಿಸಲಾಗಿದೆ. ಈ ಬಗ್ಗೆ ಪಾಲಿಕೆ ಸದಸ್ಯರಿಗೆ ಮಾಹಿತಿ ನೀಡಿ ಆ ನಂತರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ವಿಷಯ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು. ಆ ನಂತರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗುವುದು. ಗ್ರೇಟರ್ ಮೈಸೂರು ರಚನೆಯಾದರೆ ಪಾಲಿಕೆಯ ಆದಾಯದಲ್ಲೂ ಏರಿಕೆ ಕಾಣುವ ನಿರೀಕ್ಷೆ ಇದೆ.
ಲಕ್ಷ್ಮೀಕಾಂತ್ ರೆಡ್ಡಿ, ನಗರ ಪಾಲಿಕೆ ಆಯುಕ್ತ