

ಮಂಜುನಾಥ ಟಿ.ಭೋವಿ ಮೈಸೂರು
ಬೃಹತ್ ಮೈಸೂರು ಮಹಾನಗರ ಪಾಲಿಕೆ(ಬಿಎಂಎಂಪಿ) ರಚನೆಗೆ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಸದ್ಯಕ್ಕೆ ಈ ಪ್ರಸ್ತಾವನೆಗೆ ಗ್ರಹಣ ಹಿಡಿದಿದೆ…!
ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ವ್ಯತರಿಕ್ತ ಹೇಳಿಕೆ ನೀಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ‘ಮೈಸೂರು ನಗರ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಇದಕ್ಕೆ ಪೂರಕವಾಗಿ ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚಿಸುವ ಬೇಡಿಕೆಯೂ ಇದೆ. ಆದರೆ, ಗ್ರೇಟರ್ ಮೈಸೂರು ರಚನೆ ಮಾಡುವ ಆಲೋಚನೆ ಸರ್ಕಾರಕ್ಕೆ ಇಲ್ಲ’ ಎಂದು ಹೇಳುವ ಮೂಲಕ ನಿರೀಕ್ಷೆ ಹುಸಿಗೊಳಿಸಿದ್ದಾರೆ.
ಇನ್ನು 10 ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರಲಿದ್ದು, ಆಗ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ ಆಪಕ್ಷ ಈ ನಿಟ್ಟಿನಲ್ಲಿ ಕ್ರಮ ವಹಿಸುತ್ತದೆಯೋ, ಇಲ್ಲವೋ ಎಂಬ ಅನುಮಾನ ಜನರಲ್ಲಿ ಮೂಡಿದೆ.
ಜನರ ಆಸೆಗೆ ತಣ್ಣೀರು: ತ್ವರಿತವಾಗಿ ಬೆಳವಣಿಗೆಯಾಗುತ್ತಿರುವ ಮೈಸೂರು ನಗರದ ಜನಸಂಖ್ಯೆ ಅಂದಾಜು 12 ಲಕ್ಷ ಇದೆ. ಇದು ಇನ್ನು ಒಂದು ದಶಕದಲ್ಲಿ ದುಪ್ಪಟ್ಟಾಗಲಿದೆ. ಜತೆಗೆ, ನಗರದ ನಾಲ್ಕು ದಿಕ್ಕಿನಲ್ಲೂ ಖಾಸಗಿ ಬಡಾವಣೆಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಆದರೆ, ಅಗತ್ಯ ಮೂಲಸೌಕರ್ಯಗಳಿಲ್ಲದೆ ಅಲ್ಲಿಯ ನಿವಾಸಿಗಳು ನಿತ್ಯ ಪರದಾಡುವಂತಾಗಿದೆ. ಇದರೊಂದಿಗೆ ನಗರ ಪ್ರದೇಶ ವ್ಯಾಪ್ತಿ ವಿಸ್ತಾರವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಕ್ರಮಬದ್ಧ ಮತ್ತು ಯೋಜನಾಬದ್ಧವಾಗಿ ಮೈಸೂರಿನ ಹೊರವಲಯವನ್ನೂ ಕಟ್ಟಬೇಕಾಗಿದೆ. ಅದಕ್ಕಾಗಿ ಹೊರವಲಯ ಪಾಲಿಕೆ ಆಡಳಿತಕ್ಕೆ ಒಳಪಡಬೇಕಾಗಿದೆ. ಆದರೆ, ಈ ಆಸೆಗೆ ರಾಜ್ಯ ಸರ್ಕಾರ ತಣ್ಣೀರು ಎರಚುವ ಕೆಲಸ ಮಾಡಿದೆ.
ಯಾವ ಪ್ರದೇಶ ಸೇರ್ಪಡೆ?:ಎರಡು ವರ್ಷದ ಹಿಂದೆ ಮೇಲ್ದರ್ಜೆಗೇರಿರುವ ಹೂಟಗಳ್ಳಿ ನಗರಸಭೆ, ಬೋಗಾದಿ, ಶ್ರೀರಾಂಪುರ, ರಮ್ಮನಹಳ್ಳಿ, ಕಡಕೊಳ ಪಟ್ಟಣ ಪಂಚಾಯಿತಿ ಜತೆಗೆ ಚಾಮುಂಡಿಬೆಟ್ಟ, ಆಲನಹಳ್ಳಿ, ಸಿದ್ದಲಿಂಗಪುರ, ಇಲವಾಲ ಗ್ರಾಮ ಪಂಚಾಯಿತಿಯನ್ನು ಮೈಸೂರು ಪಾಲಿಕೆಗೆ ಸೇರಿಸಿಕೊಂಡು ಬೃಹತ್ ಮಹಾನಗರಪಾಲಿಕೆ ಮಾಡಬೇಕಿದೆ. ಇದರಿಂದ ಪಾಲಿಕೆಗೆ ಹೆಚ್ಚುವರಿಯಾಗಿ 1.51 ಲಕ್ಷ ಜನಸಂಖ್ಯೆ ಸೇರ್ಪಡೆಯಾಗಲಿದೆ. ಇದರಿಂದ ಹೆಚ್ಚುವರಿಯಾಗಿ ವರ್ಷಕ್ಕೆ 25.81 ಕೋಟಿ ರೂ.ಆದಾಯ ಬರಲಿದೆ. ಹಾಗಾಗಿ ಈ ಯೋಜನೆ ಪಾಲಿಕೆಗೆ ಹೊರೆಯಲ್ಲ, ಬದಲಿಗೆ ಹೆಚ್ಚಿನ ಆದಾಯ ಹರಿದು ಬರಲಿದೆ.
ಸ್ಥಳೀಯ ಸಂಸ್ಥೆಗಳ ಸಮ್ಮತಿಯೂ ಬೇಕು: ಗ್ರೇಟರ್ ಮೈಸೂರು ರಚನೆಗೆ ಮುನ್ನ ಆಯಾ ಸ್ಥಳೀಯ ಸಂಸ್ಥೆಗಳ ಒಪ್ಪಿಗೆ ಪಡೆದುಕೊಳ್ಳಬೇಕಾಗಿದೆ. ಹೂಟಗಳ್ಳಿ ನಗರಸಭೆ, ಬೋಗಾದಿ, ಶ್ರೀರಾಂಪುರ, ರಮ್ಮನಹಳ್ಳಿ, ಕಡಕೊಳ ಪಟ್ಟಣ ಪಂಚಾಯಿತಿಯ ಆಡಳಿತಾಧಿಕಾರಿಗಳು ಈ ಕುರಿತು ನಿರ್ಣಯ ತೆಗೆದುಕೊಂಡು ಜಿಲ್ಲಾಡಳಿತಕ್ಕೆ ಕಳುಹಿಸಿಕೊಡಬೇಕು. ಆದರೆ, ಈಗಷ್ಟೇ ರಚನೆಯಾಗಿರುವ ಈ ನೂತನ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿಲ್ಲ. ಚುನಾಯಿತ ಆಡಳಿತ ಮಂಡಳಿ ಇರುವ ಚಾಮುಂಡಿಬೆಟ್ಟ, ಸಿದ್ದಲಿಂಗಪುರ ಗ್ರಾಪಂನಲ್ಲಿ ಸಾಮಾನ್ಯ ಸಭೆ ನಡೆಸಿ ನಿರ್ಣಯಿಸಬೇಕು. ಚುನಾಯಿತ ಆಡಳಿತ ಮಂಡಳಿ ಇಲ್ಲದ ಆಲನಹಳ್ಳಿ ಮತ್ತು ಇಲವಾಲ ಗ್ರಾಪಂನ ಆಡಳಿತಾಧಿಕಾರಿಗಳು ನಿರ್ಣಯ ತೆಗೆದುಕೊಂಡು ಪ್ರಸ್ತಾವನೆಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಿಕೊಡಬೇಕು. ಬಳಿಕ ಸಮಗ್ರ ವರದಿಯನ್ನು ತಯಾರಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಬೇಕಿದೆ. ಆ ಕಾರ್ಯಗಳು ನಡೆದಿಲ್ಲ.
ವರ್ಷಕ್ಕೆ 100 ಕೋಟಿ ರೂ. ತೆರಿಗೆ: ಮುಡಾ ವ್ಯಾಪ್ತಿಯ ಖಾಸಗಿ ಬಡಾವಣೆಗಳಲ್ಲಿ 1.40 ಲಕ್ಷ, ಮುಡಾ ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿ 90 ಸಾವಿರ, ಮುಡಾ ವ್ಯಾಪ್ತಿಯ ಹೊರಭಾಗದಲ್ಲಿ 40 ಸಾವಿರ ನಿವೇಶನಗಳಿವೆ. ಈ ಪೈಕಿ 1 ಲಕ್ಷ ನಿವೇಶನಗಳು ಬೃಹತ್ ಪಾಲಿಕೆಯ ವ್ಯಾಪ್ತಿಗೆ ಬರಬೇಕಾಗಿದೆ. ಇದರಿಂದ ವರ್ಷಕ್ಕೆ ಅಂದಾಜು 100 ಕೋಟಿ ರೂ. ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ.
ಬೃಹತ್ ಮೈಸೂರು ಮಹಾನಗರ ಪಾಲಿಕೆ(ಬಿಎಂಎಂಪಿ) ಕುರಿತು ಮೊದಲು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಆಗಬೇಕು. ಅಲ್ಲಿಯವರೆಗೆ ಏನು ಮಾಡಲು ಬರುವುದಿಲ್ಲ. ನಿರ್ಣಯವಾದ ಬಳಿಕ ಇತರ ಪ್ರಕ್ರಿಯೆಗಳು ಶುರುವಾಗಲಿವೆ. ಅದಕ್ಕಾಗಿ ಕಾಯಲಾಗುತ್ತಿದೆ. ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ
ಗ್ರೇಟರ್ ಮೈಸೂರು ರಚನೆ ಪ್ರಸ್ತಾವನೆಯನ್ನು ಕೈಬಿಟ್ಟಿಲ್ಲ. ಈ ಬಗ್ಗೆ ಎಲ್ಲ ಸದಸ್ಯರ ಒಪ್ಪಿಗೆ ಪಡೆದುಕೊಳ್ಳಬೇಕಾಗಿದೆ. ಬಳಿಕ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಜಿಲ್ಲಾಡಳಿತಕ್ಕೆ ಕಳುಹಿಸಲಾಗುವುದು.ಲಕ್ಷ್ಮೀಕಾಂತ್ ರೆಡ್ಡಿ, ಪಾಲಿಕೆ ಆಯುಕ್ತರು