ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು, ಶಾಸಕ ಶರತ್ ಬಚ್ಚೇಗೌಡ ಅಭಿಮತ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ

19-Manjunath-HSK-01
Published on

ಹೊಸಕೋಟೆ: ಸರ್ಕಾರದ ವಿವಿಧ ಯೋಜನೆಗಳನ್ನು ಆದಷ್ಟು ಬೇಗ ಅನುಷ್ಠಾನಗೊಳಿಸಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ವಿವಿಧ ವಾರ್ಡ್‌ಗಳಲ್ಲಿ ಸಿಸಿ ರಸ್ತೆ, ಮೋರಿ ಕಾಮಗಾರಿ ಹಾಗೂ ರಾಜ ಕಾಲುವೆ ದುರಸ್ತಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿದರು.

ಸರ್ಕಾರದ ವಿವಿಧ ಯೋಜನೆಗಳಲ್ಲಿ ಹಣ ಬಿಡುಗಡೆಯಾಗುತ್ತಿದ್ದು, ಅಧಿಕಾರಿಗಳು ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸಲು ಮುಂದಾಗಬೇಕು ಎಂದರು.

ನಗರದಲ್ಲಿ ನೀರಿನ ಸಮಸ್ಯೆಯನ್ನು ಹಂತ ಹಂತವಾಗಿ ನೀಗಿಸಲಾಗುತ್ತಿದ್ದು, ಬಹುತೇಕ ನೀರಿನ ಸಮಸ್ಯೆ ಬಗೆಹರಿದಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಬಾರದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದರು.

ಖಾಜಿ ಮೊಹಲ್ಲದಲ್ಲಿ 15.45 ಲಕ್ಷ ರೂ. ವೆಚ್ಚದಲ್ಲಿ ಸಾಮೂಹಿಕ ಶೌಚಗೃಹ ನಿರ್ಮಾಣ, 3 ಲಕ್ಷ ರೂ. ವೆಚ್ಚದಲ್ಲಿ ಕನಕನಗರದಲ್ಲಿ ಪಂಪ್ ಹೌಸ್ ರಿಪೇರಿ, ವಿನಾಯಕ ನಗರದಲ್ಲಿ 8 ಲಕ್ಷದಲ್ಲಿ ಸಿಸಿ ರಸ್ತೆ ಹಾಗೂ 25 ಲಕ್ಷ ರೂ. ವೆಚ್ಚದ ರಾಜಕಾಲುವೆ ಅಭಿವೃದ್ಧಿ, ಶಿಕ್ಷಕರ ಬಡಾವಣೆಯಲ್ಲಿ 3.85 ಲಕ್ಷ ರೂ. ವೆಚ್ಚದ ಸಿಸಿ ಮೋರಿ ಹಾಗೂ 3.2 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಅಂಬೇಡ್ಕರ್ ಕಾಲನಿ ಭಾಗದಲ್ಲಿ 18.72 ಲಕ್ಷ ರೂ. ವೆಚ್ಚದ ಚರಂಡಿ ಹಾಗೂ ವರದಾಪುರ ವಾರ್ಡ್‌ನ ಸರ್ಕಾರಿ ಶಾಲಾ ಆವರಣದಲ್ಲಿ 3 ಲಕ್ಷ ರೂ. ವೆಚ್ಚದಲ್ಲಿ ಸಾಮೂಹಿಕ ಶೌಚಗೃಹ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.

ಮುಖಂಡರಾದ ಬಿ.ವಿ. ಬೈರೇಗೌಡ, ವಿಜಯ್ ಕುಮಾರ್, ಡಾ.ಸುಬ್ಬರಾಜ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net