ಬಿಬಿಎಂಪಿ ಚುನಾವಣೆ ಮುಂದೂಡಿಕೆಗೆ ‘ಗ್ರೇಟರ್’ ಜಪ ! ?

bbmp office
Published on

ಬೆಂಗಳೂರು: ಬಿಬಿಎಂಪಿ ವಿಭಜಿಸಿ ಸಣ್ಣ ಪಾಲಿಕೆಗಳನ್ನಾಗಿ ಮಾಡುವ ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ’ಕ್ಕೆ ವಿಧಾನಮಂಡಲದ ಒಪ್ಪಿಗೆ ಬಳಿಕ ರಾಜ್ಯಪಾಲರು ಅಂಕಿತ ಹಾಕಿದರೂ, ಆನಂತರ ನಡೆಯುವ ರಾಜಕೀಯ ವಿದ್ಯಮಾನಗಳೇ ನಿರ್ಣಾಯಕವಾಗಲಿವೆ. ಮುಖ್ಯವಾಗಿ ಹಾಲಿ ಪಾಲಿಕೆಗೆ ಚುನಾವಣೆ ಮುಂದೂಡಲು ಸರ್ಕಾರವೇ ಸಾರಥ್ಯ ವಹಿಸಿದಂತಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಲು 3 ತಿಂಗಳ ಕಾಲಾವಕಾಶವನ್ನು ವಿಧೇಯಕದಲ್ಲೇ ಅವಕಾಶ ಮಾಡಿಕೊಡಲಾಗಿದೆ. ಈ ಗಡುವಿನ ನಂತರವೂ ಸರ್ಕಾರಕ್ಕೆ ಆರು ತಿಂಗಳ ಹೆಚ್ಚಿನ ಕಾಲಾವಕಾಶ ಪಡೆಯಲು ಸುಗ್ರೀವಾಜ್ಞೆ ಬಲ ಸಿಗಲಿದೆ. ಈ ಮಧ್ಯೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಬಾಕಿಯಿರುವ ಅರ್ಜಿ ಸಂಬಂಧ ವಿಧೇಯಕದ ಬ್ಗಗೆ ಮಾಹಿತಿ ನೀಡಿ ಸ್ವಲ್ಪಕಾಲ ಚುನಾವಣೆಯನ್ನು ಮುಂದಕ್ಕೆ ಹಾಕಲು ಕೋರಿಕೆ ಸಲ್ಲಿಸಬಹುದಾಗಿದೆ. ಈ ಕಾರಣದಿಂದಾಗಿ ಪಾಲಿಕೆ ಚುನಾವಣೆಗೆ ಸರ್ಕಾರ ನೆಪ ಹುಡುಕುತ್ತಿದೆ ಎಂಬ ಆಕ್ಷೇಪ ಕೇಳಿಬಂದಿದೆ.

ಇನ್ನೊಂದೆಡೆ, ಬೆಂಗಳೂರಿನ ಶಾಸಕರು ಬಿಬಿಎಂಪಿ ಚುನಾವಣೆ ನಡೆಯದಂತೆ ತೆರೆಯ ಹಿಂದೆ ರಾಜಕೀಯ ನಡೆಸುತ್ತಿದ್ದಾರೆ. ಇದರಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ಶಾಸಕರ ದನಿ ಒಂದೇ ರೀತಿ ಇದೆ. ತೋರಿಕೆಗೆ ಚುನಾವಣೆ ನಡೆಸುವಂತೆ ಹೇಳುತ್ತಿದ್ದರೂ, ತಮ್ಮ ಕ್ಷೇತ್ರದ ಮೇಲೆ ಹಿಡಿತ ಕಳೆದುಕೊಳ್ಳುವ ಆತಂಕದಿಂದ ಎಲೆಕ್ಷನ್ ಬೇಡ ಎಂಬ ಇಂಗಿತವನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ. ಒಂದು ವೇಳೆ ಚುನಾವಣೆಗೆ ತಯಾರಾಗಿದ್ದರೆ ಅವರ ಬೆಂಬಲಿಗರನ್ನು ಆಯಾ ವಾರ್ಡ್‌ಗಳಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸುತ್ತಿದ್ದರು. ನಗರದ ಹಿಡಿತ ತಮ್ಮಲ್ಲೇ ಕೇಂದ್ರೀಕರಿಸಿಕೊಳ್ಳುವ ಭರದಲ್ಲಿ ಎಲೆಕ್ಷನ್ ನಡೆಯಲು ಬಿಡುತ್ತಿಲ್ಲ ಎಂಬ ಆಕ್ಷೇಪದ ಮಾತುಗಳು ಹಲವು ಮಾಜಿ ಕಾರ್ಪೊರೇಟರ್‌ಗಳು ವ್ಯಕ್ತಪಡಿಸಿದ್ದಾರೆ.

ಹೋರಾಟಕ್ಕೆ ವಿಪಕ್ಷ ಚಿಂತನೆ:

ಬಿಬಿಎಂಪಿಯನ್ನು ವಿಭಜಿಸಿ ಒಂದಕ್ಕಿಂತ ಹೆಚ್ಚು ಪಾಲಿಕೆಗಳನ್ನು ರಚಿಸುವ ಕಾಂಗ್ರೆಸ್ ಸರ್ಕಾರದ ಪ್ರಸ್ತಾಪವನ್ನು ಬಿಜೆಪಿ ಹಾಗೂ ಜೆಡಿಎಸ್ ವಿರೋಧಿಸುತ್ತಲೇ ಬಂದಿದೆ. ಈ ಸಂಬಂಧ ಹಿಂದಿನ ವರ್ಷ ಈ ಎರಡೂ ಪಕ್ಷಗಳು ಹಲವು ವೇದಿಕೆಗಳಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದವು. ಬೆಂಗಳೂರು ನಗರವನ್ನು ನಾಡಪ್ರಭು ಕೆಂಪೇಗೌಡರು ನಿರ್ಮಿಸಿ ಎಲ್ಲ ವರ್ಗಗಳ ಜನರು ವಾಸಿಸುವ ಜತೆಗೆ ವ್ಯಾಪಾರ, ವಹಿವಾಟು ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇಂತಹ ವ್ಯವಸ್ಥೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ಸುಧಾರಣೆಗಳನ್ನು ತರುವುದಿದ್ದಲ್ಲಿ ಪಾಲಿಕೆಯ ವಲಯಗಳಿಗೆ ಹೆಚ್ಚಿನ ಅಧಿಕಾರ ನೀಡಿ ಆಡಳಿತ ವ್ಯವಸ್ಥೆಯನ್ನು ಸುಸೂತ್ರವಾಗಿ ನಡೆಸಬಹುದಾಗಿದೆ ಎಂದು ಬಿಜೆಪಿ ಮುಖಂಡರು ಪ್ರಾತಿಪಾದಿಸಿದ್ದಾರೆ.

ಜತೆಗೆ ಇತ್ತೀಚಿಚಿಗೆ ಬಿಜೆಪಿ ವತಿಯಿಂದ ಸುಪ್ರೀಂಕೋಟ್​​ರ್ ಕದ ತಟ್ಟಿದ್ದು, ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದೆ. ಇದರ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ. ಈಗ ವಿಧೇಯಕಕ್ಕೆ ಒಪ್ಪಿಗೆ ಪಡೆದಿರುವುದರಿಂದ ಬಿಜೆಪಿಯು ಸಾರ್ವಜನಿಕರ ಜತೆಗೂಡಿ ಹೋರಾಟ ನಡೆಸಲು ಚಿಂತನೆ ನಡೆಸಿದೆ.

ವಿಂಗಡಣೆಯೇ ಸವಾಲು:

ಗ್ರೇಟರ್​​ ಬೆಂಗಳೂರು ಆಡಳಿತ ವಿಧೇಯಕ ಮಸೂದೆಯಾಗಿ ಜಾರಿಗೆ ಬಂದರೂ, ಹೊಸ ವಾಡ್​​ರ್ಗಳ ರಚನೆ ಹಾಗೂ ಅವುಗಳಿಗೆ ಮೀಸಲು ನಿಗದಿ ಸವಾಲಾಗಲಿದೆ. ವಿಧೇಯಕದಲ್ಲಿ ಎಷ್ಟು ಸಂಖ್ಯೆಯ ಪಾಲಿಕೆಗಳನ್ನು ರಚಿಸಲಾಗುತ್ತದೆ ಎಂಬುದರ ನಿಖರ ಮಾಹಿತಿಯೂ ಇಲ್ಲ. ಗರಿಷ್ಠ ಏಳು ಪಾಲಿಕೆ ರಚಿಸಲು ಅವಕಾಶ ಇದ್ದರೂ, 5 (ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಸೆಂಟ್ರಲ್​​) ಹೊಸ ಪಾಲಿಕೆಯನ್ನು ಗುರುತಿಸಬಹುದಾಗಿದ್ದರೂ, ಸಮಾನ ಆದಾಯ ಬರುವಂತಹ ಪ್ರದೇಶಗಳನ್ನು ಒಟ್ಟುಗೂಡಿಸುವುದು ಕಷ್ಟವಾಗಲಿದೆ. ಈ ಕಸರತ್ತು ನಡೆಸಲು ವಾಡ್​ರ್ಗಳ ಪುನರ್​ ವಿಂಗಡಣೆಗಾಗಿಯೇ ಆಯೋಗ ರಚಿಸಿ ಪರಿಹಾರ ಕಂಡುಕೊಳ್ಳಬೇಕಿದೆ. ಇಂತಹ ಹಲವು ಸಮಸ್ಯೆಗಳು ಮುಂದಿನ ದಿನಗಳಲ್ಲಿ ಎದುರಾಗಲಿದ್ದು, ಗ್ರೇಟರ್​​ ಬೆಂಗಳೂರು ರಚನೆಯ ಭವಿಷ್ಯ ಮಾತ್ರ ಡೋಲಾಯಮಾನ ಸ್ಥಿತಿಯಲ್ಲಿದೆ ಎಂಬ ಮಾತು ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net