

ಬೆಂಗಳೂರು: ಪ್ರಸಕ್ತ ಅಧಿವೇಶನದಲ್ಲಿ ಪರಿಷ್ಕೃತ ರೂಪದ ಗ್ರೇಟರ್ ಬೆಂಗಳೂರು ಗೌರ್ನೆನ್ಸ್ ಬಿಲ್ (ಜಿಬಿಜಿಬಿ) ಮಂಡಿಸುವ ಮೂಲಕ ರಾಜ್ಯ ಸರ್ಕಾರವು ಬಿಬಿಎಂಪಿ ಆಡಳಿತವನ್ನು ದುರ್ಬಲಗೊಳಿಸುವ ಯತ್ನಕ್ಕೆ ಕೈಹಾಕಿದೆ. ಜತೆಗೆ ರಾಜಧಾನಿಯಲ್ಲಿ ತಮ್ಮ ಪಕ್ಷವನ್ನು ಬಲವರ್ಧನೆಗೊಳಿಸುವ ರಾಜಕೀಯ ಹುನ್ನಾರದ ಭಾಗವಾಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಸಂಸದರು, ಬಿಬಿಎಂಪಿಯ ಕಾರ್ಪೊರೇಟರ್, ವಾರ್ಡ್ ಸಮಿತಿಗಳ ಸಲಹೆ ಬದಿಗೊತ್ತಿ ಸಿಎಂ, ಡಿಸಿಎಂ ಹಾಗೂ ಅಧಿಕಾರಿಗಳ ದರ್ಬಾರ್ ನಡೆಸಲಷ್ಟೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಲು ಅತ್ಯುತ್ಸಾಹ ತೋರಿಸಿದಂತಿದೆ. ಬಿಬಿಎಂಪಿ ಚುನಾಯಿತ ಆಡಳಿತ ಇಲ್ಲದಿದ್ದಾಗ ಸ್ಥಳೀಯ ಆಡಳಿತದ ಅಧಿಕಾರ ಕಸಿದಂತಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ವಿಧೇಯಕವನ್ನು ಗುರಾಣಿಯನ್ನಾಗಿಸಿಕೊಂಡು ಬಿಬಿಎಂಪಿಯನ್ನು 10 ಸಣ್ಣ ಪಾಲಿಕೆಗಳನ್ನಾಗಿ ಮಾಡುವುದು ಸರಿಯಾದ ನಿರ್ಧಾರವಲ್ಲ. ಅಧಿಕಾರ ವಿಕೇಂದ್ರೀಕರಣದ ನೆಪದಲ್ಲಿ ಬಿಬಿಎಂಪಿಯನ್ನು ವಿಭಜಿಸಿ ನಗರದ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಗೊಂದಲ ಹಾಗೂ ಗೋಜಲು ಮಾಡುವ ವಿಫಲಯತ್ನವಾಗಿದೆ. ಉನ್ನತ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲೆಂದೇ ಅಸ್ತಿತ್ವದಲ್ಲಿರುವ ಮೆಟ್ರೋಪಾಲಿಟನ್ ಪ್ಲಾನಿಂಗ್ ಕಮಿಟಿ (ಎಂಪಿಸಿ) ಯನ್ನು ಬಲಪಡಿಸಬೇಕು. ವಿಭಜನೆಯಿಂದ ಆಡಳಿತ ವೆಚ್ಚ ಹೆಚ್ಚಳ, ಪಾಲಿಕೆಗಳ ಮಧ್ಯೆ ಆದಾಯ ಹಂಚಿಕೆಯಲ್ಲಿ ತಾರತಮ್ಯ, ದಕ್ಷತೆ ಕ್ಷೀಣ ಸೇರಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಹಿಂದೊಮ್ಮೆ ದೆಹಲಿ ಮಹಾನಗರ ಪಾಲಿಕೆಯನ್ನು 3 ಭಾಗ ಮಾಡಿ ನಂತರದಲ್ಲಿ ಸುಧಾರಣೆ ತರಲಾಗದೆ ಮತ್ತೆ ಒಂದೇ ಪಾಲಿಕೆಯನ್ನಾಗಿ ಒಗ್ಗೂಡಿಸಲಾಯಿತು. ಈ ದೃಷ್ಟಾಂತ ಕಣ್ಣೆದಿರು ಇರುವಾಗ ಸರ್ಕಾರ ವಿವೇಚನಾರಹಿತವಾಗಿ ನಡೆದುಕೊಳ್ಳಬಾರದು ಎಂದು ಸಂಸದರು ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.