ಸ್ಪೀಕರ್​​​​ಗೆ ಸೋಮವಾರ ಗ್ರೇಟರ್ ಬೆಂಗಳೂರು ವರದಿ ಸಲ್ಲಿಕೆ

greaterblorebill
Published on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯನ್ನು ಹಿಗ್ಗಿಸಿ ಹೊಸದಾಗಿ 7 ಪಾಲಿಕೆಗಳನ್ನು ರಚಿಸುವ ಮೂಲಕ ರಾಜಧಾನಿಯ ಆಡಳಿತಕ್ಕೆ ಹೊಸರೂಪ ನೀಡುವ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದ (ಜಿಬಿಜಿಬಿ) ಪರಿಶೀಲನಾ ವರದಿಯು ಸೋಮವಾರ ವಿಧಾನಸಭಾಧ್ಯಕ್ಷರಿಗೆ ಸಲ್ಲಿಕೆಯಾಗಲಿದೆ.

ಕಳೆದ ವರ್ಷ ವಿಧಾನಮಂಡಲದಲ್ಲಿ ಜಿಬಿಜಿಬಿ ಬಿಲ್ ಮಂಡಿಸಿದ್ದ ವೇಳೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ವಿಧೇಯಕದ ಸಾಧಕ-ಬಾಧಕ ಪರಿಶೀಲಿಸಿ ವರದಿ ನೀಡಲು ಸಮಿತಿಯೊಂದನ್ನು ರಚಿಸಿದ್ದರು. ಸಮಿತಿ ನೇತೃತ್ವವನ್ನು ಆಡಳಿತ ಪಕ್ಷದ ಶಾಸಕ ರಿಜ್ವಾನ್ ಅರ್ಷದ್ ವಹಿಸಿದ್ದು, ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಿ ಕೆಲ ಅಂಶಗಳನ್ನು ವಿಧೇಯಕಕ್ಕೆ ಸೇರಿಸಲು ಶಿಫಾರಸುಗಳನ್ನು ಸಿದ್ಧಪಡಿಸಲಾಗಿದೆ.

ಈ ಶಿಫಾರಸುಗಳಲ್ಲಿ ಹಾಲಿ ಬಿಬಿಎಂಪಿ ವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸುವ ಅಂಶ ಒಳಗೊಂಡಿದೆ ಎನ್ನಲಾಗಿದೆ. ಟೆಕ್ ಕಾರಿಡಾರ್‌ನ ಪ್ರಮುಖ ಕೇಂದ್ರವಾಗಿರುವ ಇಲೆಕ್ಟ್ರಾನಿಕ್ ಸಿಟಿ ಪ್ರದೇಶ ಹಾಗೂ ಪಾಲಿಕೆ ಗಡಿಗೆ ಹೊಂದಿಕೊಂಡಿರುವ ಕೆಲವು ಭಾಗವನ್ನು ಸೇರಿಸಿಕೊಳ್ಳಲಾಗುತ್ತಿದೆ. ಹಾಲಿ ಬಿಬಿಎಂಪಿಯಲ್ಲಿ ಆಡಳಿತ ನಡೆಸಲು ಒಬ್ಬ ಮೇಯರ್ ಹಾಗೂ ಆಯುಕ್ತರಿಂದ ಸಾಧ್ಯವಿಲ್ಲ ಎಂಬ ಮಾತು ಎಲ್ಲ ಪಕ್ಷಗಳಿಂದಲೂ ಕೇಳಿಬಂದಿದೆ. ಇದನ್ನೇ ಆಧಾರವಾಗಿರಿಸಿಕೊಂಡು ಕಾಂಗ್ರೆಸ್ ಸರ್ಕಾರವು ಸಣ್ಣ ಪಾಲಿಕೆಗಳನ್ನಾಗಿ ರಚಿಸಿ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಲು ಮುಂದಾಗಿದೆ.

ಈಗಾಗಲೇ ಮಂಡಿಸಿರುವ ಬಿಲ್‌ನಲ್ಲಿ ನಮೂದಿಸಿರುವಂತೆ ಗರಿಷ್ಠ 10 ಪಾಲಿಕೆ ಹಾಗೂ 400 ವಾರ್ಡ್ ಮೀರದಂತೆ ನಿಯಮ ಇದೆ. ಈಗ ಹೊಸ ಪ್ರದೇಶಗಳು ಸೇರಿಕೊಂಡಲ್ಲಿ ಇನ್ನಷ್ಟು ವ್ಯಾಪ್ತಿ ಹಿಗ್ಗಿದರೆ 7 ಪಾಲಿಕೆಗೆ ಹಂಚಿಕೆ ಮಾಡಲು ಹೆಚ್ಚಿನ ವಾರ್ಡ್‌ಗಳನ್ನು ರಚಿಸಬೇಕಾಗುತ್ತದೆ. ಇದಕ್ಕಾಗಿ ವಿಧೇಯಕದಲ್ಲಿ ಹೊಸ ಅಂಶಗಳನ್ನು ಸೇರಿಸಬೇಕಾಗುತ್ತದೆ.

ಅಧಿವೇಶನದಲ್ಲಿ ಬಿಲ್ ಮಂಡನೆ ನಿರೀಕ್ಷೆ:

ಈಗಾಗಲೇ ಪರಿಶೀಲನಾ ಸಮಿತಿಯು ನಗರದ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿದೆ. ಜತೆಗೆ ಕಳೆದ ವಾರ ಪಾಲಿಕೆಯ ಎಂಟೂ ವಲುಯಗಳಿಗೆ ಸಂಬಂಧಿಸಿ ನಾಗರಿಕರಿಂದ ಸಲಹೆ-ಸೂಚನೆ ಸಂಗ್ರಹಿಸುವ ಕಸರತ್ತು ನಡೆಸಿತ್ತು. ಈಗ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸ್ಪೀಕರ್‌ಗೆ ಸಲ್ಲಿಸಿದ ಬಳಿಕ ಮಾ.3ರಿಂದ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಪರಿಷ್ಕೃತ ವಿಧೇಯಕ ಮಂಡಿಸುವ ಸಾಧ್ಯತೆ ಇದೆ. ಇದರ ಬಗ್ಗೆ ಪ್ರತಿಪಕ್ಷ ಅಪಸ್ವರ ಎತ್ತಿದರೂ, ಚರ್ಚೆಯ ಸ್ವರೂಪ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯೂ ಇದೆ.

ಇಲೆಕ್ಟ್ರಾನಿಕ್ ಸಿಟಿ ಸೇರ್ಪಡೆಗೆ ಶಿಫಾರಸು:

ಬಿಬಿಎಂಪಿಯ ಹಾಲಿ ಮಿತಿ 741 ಚದರ ಕಿ.ಮೀ. ಇದ್ದು, ಈಗ ಇಲೆಕ್ಟ್ರಾನಿಕ್ ಸಿಟಿ ಹಾಗೂ ಇನ್ನಿತರ ಪ್ರದೇಶಗಳನ್ನು ಸೇರಿಸಿಕೊಳ್ಳಲು ಉತ್ಸುಕತೆ ಹೊಂದಲಾಗಿದೆ. ಇಲೆಕ್ಟ್ರಾನಿಕ್ ಸಿಟಿ ಸೇರ್ಪಡೆ ಹಿಂದೆ ಆದಾಯ ವೃದ್ಧಿಸಿಕೊಳ್ಳುವ ದೂರಗಾಮಿ ಆಲೋಚನೆ ಇದ್ದಂತಿದೆ. ಇದರಿಂದಾಗಿ ಬಿಬಿಎಂಪಿ ವ್ಯಾಪ್ತಿ 850 ಚದರ ಕಿ.ಮೀ.ಗೆ ಹಿಗ್ಗುವ ಸಾಧ್ಯತೆ ಇದೆ.

ಮಂಗಳವಾರ ಸುಪ್ರೀಂನಲ್ಲಿ ವಿಚಾರಣೆ:

ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಮಂಗಳವಾರ (ಫೆ.25) ನಡೆಯಲಿದೆ. ವಿಚಾರಣೆ ಬಳಿಕ ನ್ಯಾಯಾಲಯ ಯಾವ ಆದೇಶ ಮಾಡಲಿದೆ ಎಂಬುದರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಒಂದು ವೇಳೆ ಚುನಾವಣೆ ನಡೆಸುವಂತೆ ನಿರ್ದೇಶನ ಬಂದಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಡಿಸಿಎಂ ತಮ್ಮ ಪಕ್ಷದ ಕಾರ್ಯಕರ್ತರಿಗೆ ಚುನಾವಣೆಗೆ ಸಿದ್ಧರಾಗುವಂತೆ ಕರೆ ನೀಡಿರುವುದು ಬಿಬಿಎಂಪಿಗೆ ಚುನಾವಣೆ ನಡೆಯುವ ಕುರುಹು ಕಾಣುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net