ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ: ನಾಗರಿಕರಿಂದ ಸಲಹೆ ಸ್ವೀಕಾರಕ್ಕೆ ಸಭೆ

bbmp office
Published on

ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024ರಂತೆ ಪ್ರಾಧಿಕಾರ ರಚನೆ ಬಗ್ಗೆ ನಗರದಲ್ಲಿ ಮೂರು ದಿನ 5 ಕಡೆ ಬಿಬಿಎಂಪಿಯ ಎಂಟೂ ವಲಯಗಳಲ್ಲಿ ನಾಗರಿಕರು ಹಾಗೂ ಸಂಘ-ಸಂಸ್ಥೆಗಳಿಂದ ಸಲಹೆಗಳನ್ನು ಸ್ವೀಕರಿಸುವ ಸಭೆಗಳನ್ನು ಆಯೋಜಿಸಲಾಗುತ್ತಿದೆ.

ವಿಧೇಯಕದ ಪರಿಶೀಲನೆ ಮತ್ತು ವರದಿಗೆ ಸಂಬಂಧಿಸಿ ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿಯನ್ನು ರಚಿಸಿದ್ದು, ಆ ಸಮಿತಿಗೆ ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆಯಲ್ಲಿ ಕಾರ್ಯಚಟುವಟಿಕೆ ಪ್ರಗತಿಯಲ್ಲಿದೆ. ಈಗಾಗಲೇ ಹಲವು ಸಭೆಗಳನ್ನು ಆಯೋಜಿಸಿ ಮಾಹಿತಿ ಸಿದ್ಧಪಡಿಸಿರುವ ಸಮಿತಿಯು, ತನ್ನ ವರದಿಯನ್ನು ಅಂತಿಮಗೊಳಿಸಲು ಮುಂದಾಗಿದೆ. ಇದಕ್ಕೂ ಮುನ್ನ ಜನರ ಅಭಿಪ್ರಾಯ ಆಲಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಸಮಿತಿ ತಿಳಿಸಿದೆ.

ಗ್ರೇಟರ್ ಬೆಂಗಳೂರು ಪ್ರದೇಶದ ಅಭಿವೃದ್ಧಿಯ ಯೋಜನೆ, ಸಮನ್ವಯ ಮತ್ತು ಮೇಲ್ವಿಚಾರಣೆಗಾಗಿ, ಪರಿಣಾಮಕಾರಿಯಾದ, ಸಹಭಾಗಿತ್ವದ ಮತ್ತು ಸ್ಪಂದನಶೀಲ ಆಡಳಿತಕ್ಕಾಗಿ, ನಗರಾಡಳಿತದ ಮೂಲಕ ಘಟಕಗಳನ್ನಾಗಿಸುವುದಕ್ಕೆ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಸುಗಮಗೊಳಿಸುವುದಕ್ಕೆ ಹಾಗೂ ಸಹಭಾಗಿ, ದಕ್ಷ ಮತ್ತು ನ್ಯಾಯೋಚಿತ ಆಡಳಿತದ ಚೌಕಟ್ಟನ್ನು ಸ್ಥಾಪಿಸುವ ಸಲುವಾಗಿ ಈ ವಿಧೇಯಕ ಜಾರಿಗೆ ತರಲಾಗುತ್ತಿದೆ ಎಂದು ಸಮಿತಿ ತಿಳಿಸಿದೆ.

ಈ ಸಭೆಯನ್ನು ನಾಗರಿಕರು, ಸಂಘ-ಸಂಸ್ಥೆಗಳು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಸದುಪಯೋಗ ಪಡಿಸಿಕೊಂಡು ಸಭೆಗೆ ಆಗಮಿಸಿ ಸಲಹೆಗಳನ್ನು ನೀಡಲು ಕೋರಲಾಗಿದೆ.

ವಲಯವಾರು ಸಭೆ ನಿಗದಿ ವಿವರ:

ವಲಯದ ಹೆಸರು ದಿನ ಸಮಯ ಸ್ಥಳ:

ಪೂರ್ವ- ಫೆ.10 ಬೆ.11ರಿಂದ ಮ.1 ಬಂಜಾರ ಭವನ, ವಸಂತನಗರ

ಮಹದೇವಪುರ- ಫೆ.10 ಮ.3ರಿಂದ ಸಂ.5 ಕೇಂಬ್ರಿಡ್ಜ್ ಇನ್‌ಸ್ಟಿಟ್ಯೂಟ್, ಟಿ.ಸಿ.ಪಾಳ್ಯ ಬಳಿ

ದಕ್ಷಿಣ/ಬೊಮ್ಮನಹಳ್ಳಿ- ಫೆ.11 ಬೆ.11ರಿಂದ ಮ.1 ಆರ್.ವಿ.ಡೆಂಟಲ್ ಕಾಲೇಜ್, ಜೆ.ಪಿ.ನಗರ

ಆರ್.ಆರ್.ನಗರ/ಪಶ್ಚಿಮ- ಫೆ.11 ಮ.3ರಿಂದ ಸಂ.5 ಡಾ.ಎಚ್.ನರಸಿಂಹಯ್ಯ ಹಾಲ್, ಜ್ಞಾನಭಾರತಿ

ಯಲಹಂಕ/ದಾಸರಹಳ್ಳಿ- ಫೆ.12 ಬೆ.11ರಿಂದ ಮ.1 ಡಾ.ಅಂಬೇಡ್ಕರ್ ಭವನ, ಎನ್‌ಇಎಸ್ ಕಚೇರಿ ಬಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net