

ಶಿಗ್ಗಾಂವಿ: ಜಗತ್ತು ಕವಲು ದಾರಿಯಲ್ಲಿದೆ. ಇದನ್ನು ಬೆಳಕಿಗೆ ತರಬೇಕಾದರೆ ನಾಡಿನ ಮಠಾಧೀಶರು ವಕ್ಪ್ ಬೋರ್ಡ್ ವಿರುದ್ಧ ಮಹಾಯುದ್ಧ ಸಾರುವ ಸಂದರ್ಭ ಬಂದಿದೆ ಎಂದು ಹುಬ್ಬಳ್ಳಿ ಬೃಹನ್ಮಠದ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಶುಕ್ರವಾರ ರಾಜ್ಯ ಮಠಾಧೀಶರ ಒಕ್ಕೂಟದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ತಲೆತಲಾಂತರಗಳಿಂದ ಬಾಳಿ ಬದುಕಿದ ನಮ್ಮದೇ ಮನೆಯನ್ನು, ಇನ್ನೊಬ್ಬರು ಬಂದು ನಮ್ಮದು ಎನ್ನುತ್ತಿದ್ದಾರೆ. ನಮ್ಮ ಆಸ್ತಿ ಉಳಿಸಿಕೊಳ್ಳಬೇಕಾದರೆ ಹೋರಾಟ ಅನಿವಾರ್ಯ. ಎಲ್ಲರೂ ಒಂದಾಗಿ ಸರ್ಕಾರಗಳ ಕಣ್ಣು ತೆರೆಸಲು ಸಜ್ಜಾಗಬೇಕು ಎಂದು ನಾಡಿನ ಮಠಾಧೀಶರಲ್ಲಿ ಮನವಿ ಮಾಡಿದರು.
ಯಾದಗಿರಿಯ ವೇದವ್ಯಾಸ ಪೀಠದ ರಾಜಗುರುಸ್ವಾಮಿ ಮಾತನಾಡಿ, ರೈತರ ಜಮೀನು, ಮಠಗಳ ಆಸ್ತಿಯನ್ನು ಕಬಳಿಸುವವರಿಗೆ ಪಾಠ ಕಲಿಸುವ ಸಮಯ ಬಂದಿದೆ. ಹಿಂದು ಧರ್ಮ ಹಾಗೂ ಸನಾತನ ಧರ್ಮ ಉಳಿಯಬೇಕಾದರೆ ಶಿಗ್ಗಾಂವಿಯ ಉಪಚುನಾವಣೆಯಲ್ಲಿ ಭರತ ಬೊಮ್ಮಾಯಿಗೆ ಬೆಂಬಲ ವ್ಯಕ್ತಪಡಿಸೋಣ ಎಂದರು. ಏಕೆಂದರೆ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ವಿವಿಧ ಮಠಮಾನ್ಯಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ತಂದೆ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಭರತ ಬೊಮ್ಮಾಯಿ ಮುನ್ನಡೆಯಲಿದ್ದಾರೆ ಎಂದರು.
ಭಾಗೀರತಾನಂದ ಮಹಾಸ್ವಾಮಿಗಳು ಮಾತನಾಡಿ, ವಕ್ಪ್ ಬೋರ್ಡ್ ಅಕ್ರಮಣಕಾರಿ ರೀತಿಯಲ್ಲಿ ಮಠ ಮಾನ್ಯ, ಶಿಕ್ಷಣ ಸಂಸ್ಥೆಗಳನ್ನು ವಕ್ಪ್ ಸೇರಿಸಿದ ಹಿನ್ನೆಲೆಯಲ್ಲಿ ನಾಡಿನ ಮಠಾಧೀಶರು ಖಂಡಿಸುತ್ತೇವೆ ಎಂದರು.
ಮಠಾಧೀಶರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ವಿರೂಪಾಕ್ಷಪ್ಪ ಕಳ್ಳಿಮನಿ ಮಾತನಾಡಿ, ಪ್ರಧಾನ ಮಂತ್ರಿ ಮೋದಿ ಅವರು ವಕ್ಪ್ ಬೋರ್ಡ್ ಕಾನೂನು ರದ್ದು ಪಡಿಸಬೇಕು. ಪಹಣಿಯಲ್ಲಿ ಬಂದ ವಕ್ಪ್ ಬೋರ್ಡ್ ಹೆಸರು ಶೀಘ್ರದಲ್ಲಿ ಬದಲಿಸಬೇಕು. ಬದಲಾಗದಿದ್ದರೆ ವಕ್ಪ್ ಬೋರ್ಡ್ ಅನ್ಯಾಯದ ವಿರುದ್ಧ ದೇಶಾದ್ಯಂತ ಮಠಾಧೀಶರ ಒಕ್ಕೂಟದ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ರಾಜ್ಯ ಮಠಾಧೀಶರ ಒಕ್ಕೂಟವು ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಭರತ ಬೊಮ್ಮಾಯಿ ಅವರನ್ನು ಬೆಂಬಲಿಸಲು ಕ್ಷೇತ್ರದ ವಿವಿಧ ಸಮಾಜದ ಜನತೆಗೆ ಮನವಿ ಮಾಡಿದರು.
ಶಾಂತಗಂಗಾಧರ ಮಹಾಸ್ವಾಮಿಗಳು ಸಿಂಧಗಿ, ಶಿವಾನಂದ ಮಹಾಸ್ವಾಮಿಗಳು ಗದಗ, ಮೌನೇಶ್ವರ ಮಹಾಸ್ವಾಮಿಗಳು ವಿಶ್ವಕರ್ಮ ಹುಲಗೂರ, ಬಸವರಾಜ ಮಹಾಸ್ವಾಮಿಗಳು ಹುಬ್ಬಳ್ಳಿ, ವಿಜಯ ಮಹಾಸ್ವಾಮೀಜಿ ಚಳಕಿ ಸವದತ್ತಿ, ಹಿರೇಬೆಂಡಿಗೇರಿಯ ಲಿಂಗಾನಂದ ಮಹಾಸ್ವಾಮಿಗಳು ಉಪಸ್ಥಿತರಿದ್ದರು.