ಉದ್ಯಮಶೀಲ ಕಾರ್ಯಗಾರಕ್ಕೆ ದೊಡ್ಡ ಯಶಸ್ಸು

Great success for an enterprising worker
Published on

ಮಡಿಕೇರಿ:

ಕೊಡಗಿನ ಯುವಜನತೆ ಸ್ಥಳೀಯವಾಗಿಯೇ ಉದ್ಯಮಗಳನ್ನು ಸ್ಥಾಪಿಸುವಂತಾಗಬೇಕು. ಸಾಂಪ್ರದಾಯಿಕ ಕೃಷಿಗೆ ಪೂರಕವಾದ ಚಟುವಟಿಕೆಗಳ ಮೂಲಕ ಆರ್ಥಿಕವಾಗಿ ಸಬಲೀಕರಣ ಸಾಧಿಸಬೇಕು ಎನ್ನುವ ಮಹತ್ವಾಕಾಂಕ್ಷೆಯಿAದ ಗೋಣಿಕೊಪ್ಪದಲ್ಲಿ ಈಚೆಗೆ ನಡೆದ ಉದ್ಯಮಶೀಲ ಕಾರ್ಯಗಾರ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಸುಮಾರು ನಾನೂರಕ್ಕೂ ಅಧಿಕ ಯುವಕರು ಕೊಡಗು ಜಿಲ್ಲಾ ಹಿಂದೂ ಎಕನಾಮಿಕ್ ಫೋರಮ್ ಮತ್ತು ಮೈಸೂರು ವಿಭಾಗದ ಲಘು ಉದ್ಯೋಗ ಭಾರತಿ ವತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮದ ಲಾಭ ಪಡೆದುಕೊಂಡರು.

ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಕೊಡಗು ಕಾಫಿಯನ್ನು ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಬೆಳೆಯುತ್ತಿದ್ದು, ಇದೇ ಇಲ್ಲಿನ ಆರ್ಥಿಕತೆಯ ಬೆನ್ನೆಲುಬಾಗಿದೆ. ಇತ್ತೀಚಿನ ದಶಕದಿಂದ ಪ್ರವಾಸೋದ್ಯಮ ಬೆಳವಣಿಗೆಯೂ ಏರುಗತಿಯಲ್ಲಿದೆ. ಇಷ್ಟಾದರೂ ಸ್ಥಳೀಯ ಯುವಕರು ಉದ್ಯೋಗ ಅರಸಿ ಮಹಾನಗರಗಳಿಗೆ ವಲಸೆ ಹೋಗುವುದು ನಿಂತಿಲ್ಲ. ಇದರಿಂದಾಗಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನಿಧಾನಕ್ಕೆ ಯುವ ಸಮೂಹ ಕಣ್ಮರೆ ಆಗುತ್ತಿದೆ. ಜಿಲ್ಲೆಯ ಆರ್ಥಿಕತೆಯೂ ಸಮತೋಲನದಿಂದ ಕೂಡಿಲ್ಲ.

ಮತ್ತೊಂದು ಕಡೆ ಕೊಡಗು ಪ್ರಾಕೃತಿಕ ಸಂಪನ್ಮೂಲಗಳಿAದ ಶ್ರೀಮಂತವಾಗಿದ್ದರೂ ಇವುಗಳ ಸಮರ್ಪಕ ಬಳಕೆ ಆಗಿಲ್ಲ ಎನ್ನುವ ದೂರುಗಳಿವೆ. ಇಲ್ಲಿ ಬೆಳೆಯುವ ಕಾಫಿ, ಕರಿಮೆಣಸು, ಏಲಕ್ಕಿ, ಜೇನು, ಕಿತ್ತಳೆ, ಕಾಚಂಪುಳಿ… ಹೀಗೆ ವಿವಿಧ ಉತ್ಪನ್ನಗಳಿಗೆ ಅವುಗಳದ್ದೇ ಆದ ವಿಶೇಷತೆಗಳಿದ್ದರೂ ಇವುಗಳನ್ನು ಸಮರ್ಪಕವಾಗಿ ಪ್ರಚುರಪಡಿಸಿ ದೊಡ್ಡ ಮಟ್ಟದಲ್ಲಿ ಆರ್ಥಿಕ ಪ್ರಯೋಜನ ಪಡೆದುಕೊಳ್ಳಲು ಈತನಕ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ವತಃ ಯಶಸ್ವಿ ಉದ್ಯಮಿಯೂ ಆಗಿರುವ ಕೊಡಗು ಮೂಲದ ಕುಪ್ಪಂಡ ಛಾಯಾ ನಂಜಪ್ಪ ನೇತೃತ್ವದಲ್ಲಿ ಕೊಡಗಿನವರಿಗೆ ಉದ್ಯಮಶೀಲತೆಯ ಅವಕಾಶಗಳ ಬಗ್ಗೆ ಮಾಹಿತಿ ಕೊಡುವ ಉದ್ದೇಶದಿಂದ ಗೋಣಿಕೊಪ್ಪದಲ್ಲಿ ಉದ್ಯಮಶೀಲ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.

ಒಂದು ಉದ್ಯಮ ಆರಂಭಿಸಲು ಬೇಕಾಗಿರುವ ಎಲ್ಲಾ ಬಗೆಯ ಸಂಪೂರ್ಣ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಕೊಡುವ ರೀತಿಯಲ್ಲಿ ಕೊಡಗಿನಲ್ಲಿ ಮೊದಲ ಬಾರಿಗೆ ವಿಭಿನ್ನ ಕಾರ್ಯಕ್ರಮ ಸಂಯೋಜಿಸಲಾಗಿತ್ತು. ಅವಕಾಶಗಳ ಬಗ್ಗೆ ಮಾರ್ಗದರ್ಶನ, ಉದ್ಯಮ ಸ್ಥಾಪನೆ ವೇಳೆ ಯಾರನ್ನು, ಯಾವ ರೀತಿಯಲ್ಲಿ ಸಂಪರ್ಕಿಸಬೇಕು ? ಬಂಡವಾಳದ ಮೂಲವಾಗಿ ಸಾಲ ಪಡೆಯಲು ಇರುವ ದಾರಿಗಳು, ಹೊಸದಾಗಿ ಉದ್ಯಮ ಸ್ಥಾಪಿಸುವ ಸಂದರ್ಭದಲ್ಲಿ ಎದುರಾಗುವ ಸವಾಲುಗಳು, ಉದ್ಯಮದಲ್ಲಿ ಸ್ಥಳೀಯ ಸಂಪನ್ಮೂಲಗಳ ಸಕರಾತ್ಮಕ ಬಳಕೆ… ಹೀಗೆ ಎಲ್ಲಾ ಆಯಾಮಗಳಲ್ಲಿ ಇಲ್ಲಿ ವಿಷಯಗಳನ್ನು ಪ್ರಚುರಪಡಿಸಲಾಯಿತು. ಸಂಶಯಗಳಿದ್ದಲ್ಲಿ ತಜ್ಞರ ಜತೆಗೆ ಪ್ರಶ್ನೋತರ ನಡೆÀಸುವ ಅವಕಾಶವನ್ನೂ ಕಲ್ಪಿಸಲಾಗಿತ್ತು.

ಭಾರತ ಸರ್ಕಾರದ ಎಂ.ಎಸ್.ಎA.ಇ. ಜಂಟಿ ನಿರ್ದೇಶಕ ಕೆ. ದೇವರಾಜ್, ಸಿಎಫ್‌ಟಿಆರ್‌ಐ ಮುಖ್ಯಸ್ಥ ಡಾ. ಪುಷ್ಪ ಎಸ್.ಮೂರ್ತಿ, ಖಾದಿ ಗ್ರಾಮೋದ್ಯೋಗ ನಿರ್ದೇಶಕ ಡಾ. ಮೋಹನ್‌ರಾವ್, ಸಿಎಸ್‌ಐಆರ್ ಮುಖ್ಯಸ್ಥ ಡಾ. ಪಿ.ಎಸ್. ನೇಗಿ, ಖಾದಿ ಮಂಡಳಿ ಗ್ರಾಮೋದ್ಯೋಗ ಸಿಇಒ ಹೆಚ್.ಆರ್. ರಾಜಪ್ಪ, ಬ್ಯಾಂಕ್ ಆಫ್ ಮಹಾರಾಷ್ಟç ವಿಭಾಗೀಯ ಮುಖ್ಯಸ್ಥ ಚಿರುಕುಲ ಯೋಗೇಶ್‌ಬಾಬು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯುವಕರಿಗೆ ಉಪಯುಕ್ತ ಮಾಹಿತಿ ನೀಡಿದರು.

ಕೊಡಗಿನಲ್ಲಿ ನೂತನ ವಹಿವಾಟು ಸ್ಥಾಪಿಸುವ ಆಸಕ್ತರಿಗೆ ಹಣಕಾಸು ನೆರವಿನ ಕಾರ್ಯಕ್ರಮಗಳು, ಉತ್ತಮ ರೀತಿಯ ತರಬೇತಿ ಸೌಲಭ್ಯಗಳು, ಕೇಂದ್ರ ಸರ್ಕಾರದ ಸ್ಟಾರ್ಟ್ಅಪ್ ಯೋಜನೆಗಳ ಬಗ್ಗೆ ಮಾಹಿತಿ, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು, ಗುಡಿ ಕೈಗಾರಿಕೆಯಿಂದ ಪ್ರಾರಂಭಗೊAಡು ಸಣ್ಣ ಮತ್ತು ಮಧ್ಯಮವರ್ಗದ ವ್ಯಾಪಾರಸ್ಥರಿಗೆ ಮಹಿಳಾ ಸಂಘಗಳು, ಸಂಘ ಸಂಸ್ಥೆಗಳಿಗೆ ನೀಡಲಾಗುವ ಸಾಲ ಸೌಲಭ್ಯಗಳು ಹೀಗೆ ವಿವಿಧ ವಿಷಯಳ ಬಗ್ಗೆ ವಿಷಯ ತಜ್ಞರು ಸವಿಸ್ತಾರ ಮಾಹಿತಿ ನೀಡಿದರು.

ಕೊಡಗಿನಲ್ಲಿ ಪರಿಸರ ಕಾಳಜಿಯೊಂದಿಗೆ ಉತ್ತಮ ರೀತಿಯಲ್ಲಿ ಪ್ರವಾಸೋದ್ಯಮ ಬೆಳೆಯಬೇಕು. ಇದರಿಂದ ಆದಾಯದ ಮೂಲ ಹೆಚ್ಚಾಗಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಪ್ರತಿಯೊಬ್ಬರು ಉದ್ಯಮಶೀಲರಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. ಮತ್ತೊಬ್ಬರಿಗೆ ಉದ್ಯೋಗ ಅವಕಾಶಗಳನ್ನು ನೀಡುವಂತಾಗಬೇಕು. 2047ರ ವಿಕಸಿತ ಭಾರತ ಇದೇ ಕಲ್ಪನೆಯದ್ದಾಗಿದೆ.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕೊಡಗು-ಮೈಸೂರು ಸಂಸದ

ಕೊಡಗಿನ ಯುವ ಸಮುದಾಯಕ್ಕೆ ಸಾಮರ್ಥ್ಯವರ್ಧನೆ ಸಿಗುವಂತಾಗಬೇಕು. ಕೊಡಗಿನಲ್ಲಿ ಜೇನು ಸಾಕಾಣಿಕೆ, ಉತ್ಪಾದನೆ, ಗೊಬ್ಬರ ತಯಾರಿಕೆ, ಔಷಧಿ ಗುಣ ಹೊಂದಿರುವ ಗಿಡಗಳ ಉತ್ಪಾದನೆ ಹಣ್ಣು, ತರಕಾರಿ ರಫ್ತ್ತುಗಾರಿಕೆ ಸೇರಿದಂತೆ ಅನೇಕ ರೀತಿಯ ಯೋಜನೆಗಳನ್ನು ಕೈಗೆತ್ತಿಕೊಂಡು ಆ ಮೂಲಕ ಕೊಡಗಿನಲ್ಲಿ ಉದ್ಯಮ ಬೆಳೆಸುವಂತಾಗಬೇಕು. ಮುಂದಿನ ಸಾಲಿನಲ್ಲಿ ಆಸಕ್ತರಿಗೆ ವಿಶ್ವವಿದ್ಯಾನಿಲಯದಲ್ಲಿ ಈ ನಿಟ್ಟಿನಲ್ಲಿ 2 ದಿನದ ಕಾರ್ಯಗಾರ ಹಮ್ಮಿಕೊಳ್ಳಲಾಗುವುದು.
ಅಶೋಕ್ ಎಸ್. ಆಲೂರ, ಕುಲಪತಿ, ಕೊಡಗು ವಿಶ್ವವಿದ್ಯಾಲಯ

ಉದ್ಯಮಗಳ ಸ್ಥಾಪನೆ ಮೂಲಕ ಎಲ್ಲರೂ ಆರ್ಥಿಕವಾಗಿ ಸಬಲರಾಗಬೇಕು ಎನ್ನುವುದೇ ಹಿಂದೂ ಎಕನಾಮಿಕ್ ಫೋರಮ್ ಉದ್ದೇಶ. ಕಾಫಿಗಿರುವ ಬೆಲೆಯ ಅನಿಶ್ಚಿತÀತೆ, ದುಬಾರಿಯಾಗಿರುವ ತೋಟದ ನಿರ್ವಹಣೆಯಿಂದಾಗಿ ಮಹಾನಗರಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಇದು ತಪ್ಪಬೇಕಾದರೆ ಸ್ಥಳೀಯವಾಗಿ ಉದ್ಯಮಗಳು ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಯುವಕರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಯಶಸ್ಸು ಕಂಡಿದೆ.
ಕುಪ್ಪಂಡ ಛಾಯ ನಂಜಪ್ಪ, ಉಪಾಧ್ಯಕ್ಷೆ, ಲಘು ಉದ್ಯೋಗ ಭಾರತಿ, ಕರ್ನಾಟಕ

ಪ್ರತಿಕೆಗಳಲ್ಲಿ ಬಂದಿರುವ ಮಾಹಿತಿ ಗಮನಿಸಿ ನಾನೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಉದ್ಯಮ ಸ್ಥಾಪನೆ ಬಗ್ಗೆ ನನ್ನ ನಿರೀಕ್ಷೆಗೂ ಮೀರಿ ಮಾಹಿತಿಗಳು ಇಲ್ಲಿ ಲಭ್ಯವಾಯಿತು. ಉದ್ಯಮ ಸ್ಥಾಪನೆ ಮೂಲಕ ಬದುಕು ಕಟ್ಟಿಕೊಳ್ಳಲು ಚಿಂತಿಸಿರುವ ನನ್ನಂಥವರಿಗೆ ಇದೊಂದು ಬಹಳ ಉಪಯುಕ್ತ ಕಾರ್ಯಕ್ರಮ. ಇಲ್ಲಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಮುಂದುವರಿಯಲು ನಾನು ನಿರ್ಧರಿಸಿದ್ದೇನೆ.
ಬಿ.ಎಂ. ಲತೀಶ್, ಮೇಕೇರಿ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net