

ಹುಬ್ಬಳ್ಳಿ : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಡಾ. ದ. ರಾ. ಬೇಂದ್ರೆಯವರ 129ನೇ ಜನ್ಮದಿನದ ಸಂಸ್ಮರಣೆ ಅಂಗವಾಗಿ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ಅವರಿಗೆ ನಗರದ ಡಾ. ಕೆ.ಎಸ್. ಶರ್ಮಾ ಸಭಾಂಗಣದಲ್ಲಿ ಗುರುವಾರ ‘ಮಹಾನ್ ರಾಜನೀತಿಜ್ಞ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿಶ್ವನಾಥ ಅವರಿಗೆ ಬೇಂದ್ರೆಯವರ ಸಾಂಪ್ರದಾಯಿಕ ಉಡುಗೆಗಳಾದ ಕರಿ ಬಣ್ಣದ ಕೋಟು, ಟೊಪ್ಪಿಗೆ ತೊಡಿಸಿ, ಕೈಗೆ ಛತ್ರಿ ಕೊಡಲಾಯಿತು. ನಂತರ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿ ಪ್ರಶಸ್ತಿ ನೀಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಚ್. ವಿಶ್ವನಾಥ, ಹಿಂದಿನ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಅವರ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಸಂದರ್ಭದಲ್ಲಿ ಕೆ.ಎಸ್. ಶರ್ಮಾ ಅವರ ಕೋರಿಕೆ ಮೇರೆಗೆ ಧಾರವಾಡ ಸಾಧನಕೇರಿಯಲ್ಲಿರುವ ಡಾ. ಬೇಂದ್ರೆಯವರ ಮನೆಯನ್ನು ಒಂದೇ ದಿನದಲ್ಲಿ ಟ್ರಸ್ಟ್ ಆಗಿ ನೋಂದಾಯಿಸಿದ್ದನ್ನು ನೆನಪಿಸಿಕೊಂಡರು.
ಸರ್ಕಾರ ಹಾಗೂ ಜನರು ಎಂತೆಂಥವರಿಗೋ ಪ್ರಶಸ್ತಿಗಳನ್ನು ನೀಡಿವೆ. ಆದರೆ, ಬೇಂದ್ರೆಯವರಿಗೆ ಸಿಗಬೇಕಿದ್ದ ಸಮ್ಮಾನ, ಪ್ರಶಸ್ತಿಗಳನ್ನು ಸರ್ಕಾರವಾಗಲೀ, ಜನರಾಗಲೀ ಕೊಡಲಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸ್ವಾಮೀಜಿಗಳೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದರೆ ಅವರು ಬಿಜೆಪಿ ಸೇರುತ್ತಾರೆಂದು ಸಂಶಯದಿಂದ ಮಾತನಾಡುತ್ತಾರೆ. ಇಂದಿನ ರಾಜಕಾರಣ ಹದಗೆಟ್ಟು ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಬೇಂದ್ರೆ ಕಾವ್ಯದಲ್ಲಿ ನವ ಮಾನವೀಯತೆಯ ಸಿದ್ಧಾಂತ’ ಕುರಿತು ಮಾತನಾಡಿದ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ. ಕೆ.ಆರ್. ದುರ್ಗಾದಾಸ, ಯಾವುದೇ ಕ್ಷೇತ್ರದಲ್ಲಿ ಉನ್ನತ ಹುದ್ದೆ ಸಿಗುವುದಕ್ಕಾಗಲೀ, ತಪ್ಪಲಿಕ್ಕಾಗಲೀ ಜಾತಿಯೇ ಕಾರಣ ಎಂಬಂತಹ ಸನ್ನಿವೇಶದಲ್ಲಿ ನಾವಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಬೇಂದ್ರೆ ಪ್ರತಿಷ್ಠಾನದ ಸಂಚಾಲಕ ಡಾ. ಕೆ.ಎಸ್. ಶರ್ಮಾ ಮಾತನಾಡಿ, ಸಮಯ ಸಾಧಕ ರಾಜಕಾರಣ, ಅಧಿಕಾರ ರಾಜಕಾರಣ ಸಾಮಾನ್ಯವಾಗಿರುವ ಇಂದಿನ ದಿನಗಳಲ್ಲಿ ರಾಜನೀತಿಜ್ಞ ರಾಜಕಾರಣ ಅಪರೂಪ ಎಂದರು.
ಬೇಂದ್ರೆಯವರ ‘ಗರಿ’ ಕವನ ಸಂಗ್ರಹದ ಮರುಮುದ್ರಿತ ಕೃತಿಯನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಇದಕ್ಕೂ ಮೊದಲು ವಿದುಷಿ ಡಾ. ಗಾಯತ್ರಿ ದೇಶಪಾಂಡೆ ಹಾಗೂ ಸಂಗಡಿಗರು ವರಕವಿ ಬೇಂದ್ರೆಯವರು ರಚಿಸಿದ ಗೀತೆಗಳ ಗಾಯನ ಪ್ರಸ್ತುತಪಡಿಸಿದರು.
ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ಎನ್.ಬಿ. ಕುಲಕರ್ಣಿ, ಸಂಜೀವಿನಿ ಆಯುರ್ವೆದ ಮಹಾವಿದ್ಯಾಲಯದ ಮುಖ್ಯ ಆಡಳಿತಾಧಿಕಾರಿ ಡಾ. ಶ್ರೀನಿವಾಸ ಬನ್ನಿಗೋಳ, ಪ್ರಾಚಾರ್ಯ ಡಾ. ಸಿ.ಸಿ. ಹಿರೇಮಠ, ಡಾ. ಸೋಮಶೇಖರ ಹುದ್ದಾರ, ಪುನರ್ವಸು ಬೇಂದ್ರೆ, ಸುಮಿತ್ರಾ ಪೋತ್ನೀಸ್, ಉಮೇಶ ಬಳಿಗಾರ, ರವೀಂದ್ರ ಶಿರೋಳ್ಕರ ಹಾಗೂ ಇತರರು ಇದ್ದರು.