ಭಾರತೀ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯಿಂದ ಉತ್ತಮ ಸೇವೆ

18KMD-1
Published on

ಕೆ.ಎಂ.ದೊಡ್ಡಿ : ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೂ ಕಡಿಮೆ ಇಲ್ಲ ಎಂಬಂತೆ ಭಾರತೀ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಉತ್ತಮ ಸೇವೆ ನೀಡಲಾಗುತ್ತಿದೆ. ಆ ಮೂಲಕ ಜನಸ್ನೇಹಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸೊಸೈಟಿ ಅಧ್ಯಕ್ಷ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.


ಇಲ್ಲಿನ ಭಾರತೀ ವಿದ್ಯಾ ಸಂಸ್ಥೆಯ ಭಾರತೀ ಕುವೆಂಪು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಭಾರತೀ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತ ಜನ ಮನ್ನಣೆ ಗಳಿಸಿದೆ ಎಂದರು.

ಸೊಸೈಟಿಯೊಂದು ಬ್ಯಾಂಕ್‌ಗಳು ನೀಡುತ್ತಿರುವ ಸೌಲಭ್ಯಗಳನ್ನು ನೀಡಿ ಬ್ಯಾಂಕ್ ಆಗಿ ಪರಿವರ್ತನೆ ಗೊಳ್ಳುತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು ಎಂದ ಅವರು ಷೇರುದಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿರುವ ಏಕೈಕ ಬ್ಯಾಂಕ್ ಇದಾಗಿದೆ ಎಂದರು.


2010 ರಲ್ಲಿ 534 ಸದಸ್ಯರು, 10.68 ಲಕ್ಷ ರೂ.ಗಳಿಂದ ಆರಂಭವಾದ ಸೊಸೈಟಿ ಪ್ರಸ್ತುತ 1216 ಸದಸ್ಯರನ್ನು ಹೊಂದಿದ್ದು, 35 ಕೋಟಿ ರೂ. ವ್ಯವಹಾರದಲ್ಲಿ ತೊಡಗಿದ್ದು ವಾರ್ಷಿಕ 51 ಲಕ್ಷ ರೂ. ನಿವ್ವಳ ಲಾಭಗಳಿಸಿರುವುದು ಶ್ಲಾಘನೀಯವಾಗಿದೆ ಎಂದರು.


ಸೊಸೈಟಿಯ ಲಾಭಾಂಶದಿಂದ ಷೇರುದಾರರಿಗೆ ಶೇ.30 ರಷ್ಟು ಡೆವಿಡೆಂಟ್ ನೀಡಲು ಸಂಘವು ಒಪ್ಪಿದೆ. ಲೆಕ್ಕಪತ್ರವನ್ನು ಗಣಕೀಕರಣಗೊಳಿಸಿ ಸಾಫ್ಟ್‌ವೇರ್ ಅಳವಡಿಸಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಉತ್ತಮ ಸೇವೆಯೊಂದಿಗೆ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಭಾರತೀ ಗೃಹ ನಿರ್ಮಾಣ ಸಹಕಾರ ಸಂಘವು ಅಭಿವೃದ್ಧಿಯತ್ತ ದಾಪಗಾಲು ಹಾಕುತ್ತಿದ್ದು, ಸದಸ್ಯರಿಗೆ ಮಂಡ್ಯದಲ್ಲಿ ಜಮೀನು ಪಡೆದು ನಿವೇಶನ ಕಲ್ಪಿಸುವ ಆಲೋಚನೆ ಇದೆ. ಈ ಬಗ್ಗೆ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.


ಭಾರತೀ ವಿವಿಧೋದ್ದೇಶ ಸಹಕಾರ ಸಂಘವು 302 ಸದಸ್ಯರಿಂದ 6.04 ಲಕ್ಷ ರೂ. ಗಳಿಂದ ಬಂಡವಾಳ ಹೂಡಿಕೆ ಮಾಡಿ ಈಗ 5 ಕೋಟಿ ರೂ. ವ್ಯವಹಾರದಲ್ಲಿ ನಡೆಯುತ್ತಿದೆ. ಸಂಘವು 5 ಲಕ್ಷ ರೂ. ನಿವ್ವಳ ಲಾಭಗಳಿಸಿದ್ದು ಭಾರತೀ ಸಂಸ್ಥೆ ವತಿಯಿಂದ ಆರಂಭವಾದ ಸೊಸೈಟಿಗಳು ಪ್ರಗತಿಯ ಪಥದಲ್ಲಿ ನಡೆಯುತ್ತಿವೆ ಎಂದರು.


ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ.ಎಸ್.ನಾಗರಾಜು ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ಬಿ.ಎಂ.ನಂಜೇಗೌಡ, ನಿರ್ದೇಶಕರಾದ ಆಶಯ್ ಮಧು, ಗುರುದೇವರಹಳ್ಳಿ ಸಿದ್ದೇಗೌಡ, ಮುದ್ದಯ್ಯ, ಡಾ.ಮಹದೇವಸ್ವಾಮಿ, ಜಿ.ಕೃಷ್ಣ, ಡಾ.ಶಿವಸ್ವಾಮಿ, ಡಾ.ತಮಿಜ್‌ಮಣಿ, ಪಿ.ನಾಗಮಾದಯ್ಯ, ಸಿ.ವಿ.ಮಲ್ಲಿಕಾರ್ಜುನ, ಪಿ.ರಾಜೇಂದ್ರರಾಜೇ ಅರಸ್, ಎಚ್.ಪಿ.ಪ್ರತಿಮಾ, ಮದ್ದೂರು ಅವಿನಾಶ್, ನೌಕರರಾದ ಪ್ರಮೋದ್, ನಿಖಿಲ್‌ಕುಮಾರ, ಮಧು, ಅನಿತಾ, ಸಹನಾ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net