

ಮಡಿಕೇರಿ: ಗೋಣಿಕೊಪ್ಪಕ್ಕೆ ಜ.25ರಂದು ಆಗಮಿಸುವ ಸಿಎಂ ಸಿದ್ದರಾಮಯ್ಯ ಅವರಿಗೆ ಪೂರ್ಣ ಕುಂಭ ಸ್ವಾಗತ ಕೋರಲು ವಿರಾಜಪೇಟೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಸಿಎಂ ಸಿದ್ದರಾಮಯ್ಯ ಸ್ವಾಗತಕ್ಕೆ ಸಂಬಂಧಿಸಿದಂತೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಗೃಹಕಚೇರಿಯಲ್ಲಿ ಶುಕ್ರವಾರ ವಿರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷರಾದ ಮಾದಂಡ ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ಪೂರ್ವ ಭಾವಿ ಸಭೆ ನಡೆಯಿತು. ಈ ಸಭೆಯಲ್ಲಿ ನಗರದಲ್ಲಿ ಅಲಂಕಾರ, ಊಟೋಪಚಾರ ವ್ಯವಸ್ಥೆ, ಮುಖ್ಯಮಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, ಮೆರವಣಿಗೆಯಲ್ಲಿ ಚಂಡೆವಾದ್ಯ, ಕೊಡವ ಸಾಂಪ್ರದಾಯಿಕ ವಾಲಗ, ವೇದಿಕೆ ಸಿದ್ಧತೆ, ಪ್ರಮುಖ ರಸ್ತೆಯ ಡಾಂಬರೀಕರಣ ಮಾಡುವುದು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ನಗರ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಾದಂಡ ತಿಮ್ಮಯ್ಯ ಮಾತನಾಡಿ, ಮುಖ್ಯಮಂತ್ರಿ ನೋಡಲು ನಿರೀಕ್ಷೆಗೂ ಮೀರಿ ಜನರು ಆಗಮಿಸುವ ಸಾಧ್ಯತೆ ಇದೆ. ಹಾಗಾಗಿ, ನಗರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜನರನ್ನು ನಿರ್ವಹಣೆ ಮಾಡಬೇಕು ಎಂದು ಹೇಳಿದರು.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಮಾತನಾಡಿ, ಪಕ್ಷದ ಕಾರ್ಯಕರ್ತರಿಗೆ ಸ್ವಾಗತ ಕಾರ್ಯಕ್ರಮದ ಹೆಚ್ಚಿನ ಜವಾಬ್ದಾರಿ ವಹಿಸಲಾಗುತ್ತದೆ. ವಿವಿಧ ಉಪ ಸಮಿತಿಯಲ್ಲಿ ತಮ್ಮ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ವೇದಿಕೆಯ ಆವರಣದಲ್ಲಿ ಬೃಹತ್ ಪರದೆಯ 5 ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗುತ್ತದೆ. ಊಟದ ವ್ಯವಸ್ಥೆಗಾಗಿ 50 ಕೌಂಟರ್ ತೆರೆಯಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ವಿರಾಜಪೇಟೆ ಪುರಸಭಾ ಸದಸ್ಯರಾದ ರಾಜೇಶ್ ಪದ್ಮನಾಭ, ಮೊಹಮ್ಮದ್ ರಫಿ, ಮತಿನ್ ಎಸ್.ಎಚ್., ಅಗಸ್ಟಿನ ಬೆನ್ನಿ, ಫಜೀಯ ತಬ್ಸಮ್, ಪ್ರಮುಖರಾದ ನರೇಂದ್ರ ಕಾಮತ್, ಕೆ.ಎ.ಅಯೂಬ್, ಜಾನ್ಸನ್, ಹಮೀದ್, ದಿನೇಶ್, ಆತಿಫ್ ಮನ್ನ, ಜೋಕಿಮ್ ರೋಡ್ರಿಕ್ಸ್, ಮುತ್ತಿಬ್ ಹಾಗೂ ತಾಹಿರ್ ಸೇರಿದಂತೆ ಹಲವರು ಇದ್ದರು.