ಹಿರೇಕೆರೂರ ದುರ್ಗಾದೇವಿ ಜಾತ್ರೆಗೆ ಭರದ ಸಿದ್ಧತೆ

Durgadevi Jatre hirekerur
Published on

ಹಿರೇಕೆರೂರ: ಮೂರು ವರ್ಷಗಳಿಗೊಮ್ಮೆ ನಡೆಯುವ ಪಟ್ಟಣದ ದುರ್ಗಾದೇವಿ ಜಾತ್ರೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಮಹೋತ್ಸವ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ಜಾತ್ರಾ ಉತ್ಸವ ಸಮಿತಿ ನೇತೃತ್ವದಲ್ಲಿ ಪಟ್ಟಣದಲ್ಲಿ ವಿದ್ಯುತ್ ದೀಪ ಅಲಂಕಾರ, ಕಾಲನಿಗಳ ಪ್ರಮುಖ ರಸ್ತೆಯಲ್ಲಿ ಮಹಾದ್ವಾರಗಳು ಗಮನ ಸೆಳೆಯುತ್ತಿವೆ.

ಇಲ್ಲಿನ ಪ್ರಮುಖ ರಸ್ತೆಗಳಲ್ಲಿನ ಜಿ.ಬಿ. ಶಂಕರರಾವ್ ವೃತ್ತ, ಚಾವಡಿ ಸರ್ಕಲ್, ಸರ್ವಜ್ಞ ವೃತ್ತ, ಬಾಳಂಬೀಡ ಕ್ರಾಸ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಈಗಾಗಲೇ ಜಾತ್ರೆಗೆ ಸ್ವಾಗತವನ್ನು ಕೋರುವ ನೂರಾರು ಫ್ಲೆಕ್ಸ್​ಗಳು, ಕಟೌಟ್ ಮತ್ತು ಬ್ಯಾನರಗಳು ನೋಡುಗರನ್ನು ಆಕರ್ಷಿಸುತ್ತಿದ್ದು, ಜಾತ್ರೆಗೆ ಮತ್ತಷ್ಟು ಮೆರುಗು ತಂದಿವೆ.

ಕಾರ್ಯಕ್ರಮಕ್ಕೆ ಚಾಲನೆ:

ಫೆ. 20ರಂದು ಮಂಗಳವಾರ ಸಂಜೆ 6 ಗಂಟೆಗೆ ಜಿ.ಬಿ. ಶಂಕರರಾವ್ ವೃತ್ತದಿಂದ ದುರ್ಗಾದೇವಿ ಜಾತ್ರೆಯ ಮೆರವಣಿಗೆ ಆರಂಭವಾಗಲಿದೆ. ದೇವಿಯ ಉತ್ಸವ ಮೂರ್ತಿಯೊಂದಿಗೆ, ವಿದ್ಯುತ್ ಅಲಂಕೃತ ಹೂವಿನ ರಥ, ಸೈನಿಕರು-ಕಹಳೆ-ಚಾಮರಸ ಸೇವೆ-ಮರಗಾಲು ಕಲಾತಂಡ, ಡೊಳ್ಳು ಕುಣಿತ, ದುರ್ಗಾದೇವಿ ಅಲಂಕೃತ ಪಲ್ಲಕ್ಕಿ, ಲೆಗಿನ್ ನೃತ್ಯಕಲಾ ತಂಡ, ಹಲಗೆ ವಾದ್ಯ, ನವ ದುರ್ಗಿಯರ ವಿಶೇಷ ಮುತ್ತಿನ ರಥಗಳು ಹಾಗೂ ಜಾನಪದ ವಾದ್ಯಗಳ ಉತ್ಸವ ಜರುಗಲಿವೆ. ಶ್ರೀ ಅಂಬಾಭವಾನಿ ಹಾಗೂ ಶಿವಾಜಿ ಮಾಹಾರಾಜರ ರೂಪಕ, ಸರ್ವಜ್ಞ ರೂಪಕ, ಕನಕದಾಸರ ರೂಪಕ ಹಾಗೂ ಬೆಳಗಾವಿಯ ಡಿಜೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಗೆ ಸಾಥ್ ನೀಡಲಿವೆ. ಬುಧವಾರ ಬೆಳಗಿನ ಜಾವದವರೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದ್ದು, ನಂತರ ಪಟ್ಟಣದ ಪೊಲೀಸ್ ಮೈದಾನದಲ್ಲಿ ತಮಾಷಾ ಮದ್ದು ಸುಡುವ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಫೆ. 22ರಂದು ಮಧ್ಯಾಹ್ನ 1 ಗಂಟೆಗೆ ತಾಲೂಕು ಕ್ರೀಡಾಂಗಣದಲ್ಲಿ ಭಾರಿ ಬಯಲು ಜಂಗಿ ಕುಸ್ತಿ, ಸಂಜೆ 6.30ರಿಂದ ಪೊಲೀಸ್ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮ ನಂತರ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಲಿವೆ.

23ರಂದು ತಾಲೂಕು ಕ್ರೀಡಾಂಗಣದಲ್ಲಿ ಮಧ್ಯಾಹ್ನ 1 ಗಂಟೆಗೆ ಬಯಲು ಜಂಗಿ ಕುಸ್ತಿ, ಸಂಜೆ 6.30ರಿಂದ ಪೊಲೀಸ್ ಮೈದಾನದಲ್ಲಿ ಗಿರಿಜಾ ಕಲ್ಯಾಣ ದೊಡ್ಡಾಟ ಹಾಗೂ ಗುರುರಾಜ ಹೊಸಕೋಟೆ ತಂಡದಿಂದ ಜಾನಪದ ಗೀತೆಗಳ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

24ರಂದು ಮಧ್ಯಾಹ್ನ 1 ಗಂಟೆಗೆ ತಾಲೂಕು ಕ್ರೀಡಾಂಗಣದಲ್ಲಿ ವಿಶೇಷ ಮಹಿಳಾ ಜಂಗಿ ಕುಸ್ತಿ, ಸಂಜೆ 6.30ರಿಂದ ಪೊಲೀಸ್ ಮೈದಾನದಲ್ಲಿ ಟಿಂಗರ್ ಬುಡ್ಡಣ್ಣ ಏಕಾಂತ ನಾಟಕ ಹಾಗೂ ನಿರ್ದೇಶಕ ಟಿ.ಎಸ್. ನಾಗಾಭರಣ ವರ ಬೆನಕಾ ತಂಡ ಇವರ ಸಾರಥ್ಯದಲ್ಲಿ ಜೋಕುಮಾರಸ್ವಾಮಿ ನಾಟಕ ಪ್ರದರ್ಶನವಾಗಲಿದೆ. 25ರಂದು ಸಂಜೆ 6.30ರಿಂದ ಪೊಲೀಸ್ ಮೈದಾನದಲ್ಲಿ ಡಿಲೆಟ್ ಡ್ಯಾನ್ಸ್ ಈವೆಂಟ್ಸ್ ಹಿರೇಕೆರೂರ ಅವರಿಂದ ಡ್ಯಾನ್ಸ್, ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ.

26ರಂದು ಸಂಜೆ 7ರಿಂದ 8.30 ರ ವರೆಗೆ ಪೊಲೀಸ್ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ, ನಂತರ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಲಿದೆ ಎಂದು ಜಾತ್ರಾ ವ್ಯವಸ್ಥಾಪಕ ಸಮಿತಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net