ಗೌರಿ-ಗಣೇಶ ಹಬ್ಬಕ್ಕೆ ಭರ್ಜರಿ ತಯಾರಿ

17sirsi3 GANAPA
Published on

ಶಿರಸಿ: ಹಿಂದುಗಳ ಪವಿತ್ರ ಹಬ್ಬವಾದ ಗೌರಿ-ಗಣೇಶ ಹಬ್ಬದ ತಯಾರಿ ಪಟ್ಟಣದಲ್ಲಿ ಭರ್ಜರಿಯಾಗಿ ನಡೆಯುತ್ತಿದ್ದು, ಗಣೇಶನ ಮೂರ್ತಿಗೆ ಗುಡಿಗಾರರು ಅಂತಿಮ ಸ್ಪರ್ಶ ನೀಡುವಲ್ಲಿ ನಿರತರಾಗಿದ್ದಾರೆ.

ಒಂದೆಡೆ ಹಬ್ಬಕ್ಕೆ ಬೇಕಾದ ವಸ್ತುಗಳು ಬೆಲೆಯೆರಿಕೆ ಮತ್ತೊಂದೆಡೆ ಮಳೆಯ ಅಭಾವ. ಇದ್ಯಾವುದನ್ನು ಲೆಕ್ಕಿಸದ ಸಾರ್ವಜನಿಕರು ಗೌರಿ-ಗಣೇಶ ಚತುರ್ಥಿ ಹಬ್ಬದ ತಯಾರಿಯಲ್ಲಿ ನಿರತರಾಗಿದ್ದಾರೆ. ಈ ವರ್ಷ ಕೆಲವು ಕಡೆ ಸೋಮವಾರ ಹಾಗೂ ಕೆಲವೆಡೆ ಮಂಗಳವಾರ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. ಆದ್ದರಿಂದ ಭಾನುವಾರ ಶಿರಸಿಯ ಹೂವಿನ ಮಾರುಕಟ್ಟೆ, ತರಕಾರಿ ಮಾರುಕಟ್ಟೆ ಯಲ್ಲಿ ಜನಜಂಗುಳಿಯಿಂದ ಕೂಡಿತ್ತು.

ಕಳೆದ 15 ದಿನಗಳಿಗೆ ಹೋಲಿಸಿದರೆ ತರಕಾರಿ ದರದಲ್ಲಿ ಏರಿಕೆಯಾಗದಿದ್ದರೂ ಹೂವಿನ ದರ ಕೊಂಚ ಮಟ್ಟಿಗೆ ಏರಿಕೆಯಾಗಿದೆ. ಸೇವಂತಿಗೆ ಹೂವಿನ ಮಾಲೆ ಪ್ರತಿ ಮಾರಿಗೆ 80 ರಿಂದ 120 ರೂ. ಆದರೆ, ಮಲ್ಲಿಗೆ 80ರಿಂದ 100 ರೂಪಾಯಿ ಆಗಿದೆ. ಉಳಿದಂತೆ ಕನಕಾಂಬರ, ಚೆಂಡು ಹೂವಿನ ದರದಲ್ಲಿ ಏರಿಕೆಯಾಗಿಲ್ಲ ಎನ್ನುತ್ತಾರೆ ಹೂವಿನ ವ್ಯಾಪಾರಿ ಸುಕೇತನ್.

ಭಕ್ತರ ಮನೆಗೆ ಹೊರಡಲು ರೆಡಿಯಾದ ಗಣಪ

ಮೂರು ತಿಂಗಳಿಂದ ಕಷ್ಟ ಪಟ್ಟು ಹಗಲು ರಾತ್ರಿ ಎನ್ನದೆ ಗುಡಿಗಾರರು ಸಿದ್ಧ ಮಾಡಿದ ಗಣೇಶ ಮೂರ್ತಿಗಳು ಭಕ್ತರ ಮನೆಗೆ ಹೊರಡಲು ಅಣಿಯಾಗಿವೆ. ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುವಲ್ಲಿ ಗುಡಿಗಾರರು ನಿರತರಾಗಿದ್ದಾರೆ.

ಈ ಬಾರಿ ಶಿರಸಿಯಲ್ಲಿ ಸಿದ್ಧವಾಗುವ ಗಣೇಶ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ, ಗಣೇಶ ಮೂರ್ತಿ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳ ದರ ಗಗನಕ್ಕೇರಿದೆ. ಆದರೂ ನಾವು ಗಣೇಶ ಮೂರ್ತಿಗಳಿಗೆ ಇಂತಿಷ್ಟೇ ದರ ಎಂದು ನಿಗದಿ ಮಾಡಿಲ್ಲ. ಇದೊಂದು ಪುಣ್ಯದ ಕೆಲಸ ಎಂದು ತಿಳಿದು ತಲೆತಲಾಂತರದಿಂದ ಮಾಡಿಕೊಂಡು ಬಂದಿದ್ದೇವೆ. | ರಜತ್ ಗುಡಿಗಾರ ಶಿರಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net