

ನವಲಗುಂದ: ವಿಜ್ಞಾನ ತಂತ್ರಜ್ಞಾನ ಇಂದಿನ ಜಗತ್ತಿನಲ್ಲಿ ಅತಿ ವೇಗದಲ್ಲಿ ಬೆಳೆಯುತ್ತಿದೆ. ಆದರೆ, ಪರಸ್ಪರ ಮನುಕುಲದಲ್ಲಿ ಪ್ರೀತಿ, ಕರುಣೆ, ಸಮಾನತೆ, ಸಹೋದರತೆ, ಮೌಲ್ಯಗಳು ಕುಸಿಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಜಮಾತ್ ಇಸ್ಲಾಂ ಹಿಂದ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞ ಹೇಳಿದರು.
ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿ ನ್ಯಾಯದ ಹರಿಕಾರ ಮಹಮ್ಮದ್ ಪೈಗಂಬರ್ ಸೀರತ್ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಇಂದು ಮಹಾಪುರುಷರನ್ನು ಜಾತಿ, ಧರ್ಮ ಆಧಾರಿತವಾಗಿ ವಿಭಜಿಸಿದ್ದೇವೆ. ನಿಜವಾಗಿ ಅವರು ಯಾವುದೇ ಧರ್ಮಕ್ಕೆ ಸೇರದ ಇಡೀ ಮಾನವ ಕುಲದ ಸಂಪತ್ತು. ಮಹಾಪುರುಷರು ಭಾತೃತ್ವ ಸಹೋದರತೆ ಬಗ್ಗೆ ಸಾರಿದ್ದಾರೆ. ಪ್ರವಾದಿ ಪೈಗಂಬರ್ ಶಾಂತಿ, ಸತ್ಯ, ನ್ಯಾಯದ ಸಂದೇಶಗಳನ್ನು ನೀಡಿದರು. ನ್ಯಾಯದ ಪಾಲನೆಯಾದರೆ ಸಮಾಜದಲ್ಲಿ ಶಾಂತಿ ನಿರ್ಮಾಣವಾಗುತ್ತದೆ ಎಂದರು.
ನ್ಯಾಯದ ಅಗತ್ಯ ಇಂದಿನ ಸಮಾಜದಲ್ಲಿ ಬೇಕಾಗಿದೆ. ಮನೆಯಲ್ಲಿ ಪಾಲಕರು ಮಕ್ಕಳಿಗೆ ನ್ಯಾಯದ ಅರಿವು ಮೂಡಿಸಬೇಕು. ಪೈಗಂಬರ್‌ನಂತಹ ಹಲವು ದಾರ್ಶನಿಕರು ನೀಡಿದ ಧಾರ್ಮಿಕ, ಸಾಮಾಜಿಕ ಮೌಲ್ಯಗಳನ್ನು ಬೆಳೆಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ವೀರೇಂದ್ರ ಸ್ವಾಮೀಜಿ ಮಾತನಾಡಿ, ಪ್ರವಾದಿ ಶಾಂತಿದೂತರು ನೀಡಿದ ಪ್ರೀತಿ ಸಹೋದರತೆ ಭಾತೃತ್ವ ನಮ್ಮಲ್ಲಿ ಇರಬೇಕು. ಎಲ್ಲ ವಿದ್ವಾಂಸರು ಒಂದೇ ಸತ್ಯ ಹೇಳಿದ್ದು, ತಮ್ಮದೇ ರೀತಿಯಲ್ಲಿ ಸಾರಿದ್ದಾರೆ. ಒಳ್ಳೆತನ, ಪುಣ್ಯ ಇವು ಧರ್ಮಗಳ ಸಂದೇಶ. ಪ್ರವಾದಿ ತತ್ವಗಳು ಇಂದಿನ ಸಮಾಜಕ್ಕೆ ಅಗತ್ಯ ಅವು ಕೇವಲ ಇಸ್ಲಾಂ ಧರ್ಮಕ್ಕೆ ಸೀಮಿತವಲ್ಲ ಎಲ್ಲ ಧರ್ಮಗಳು ಅನ್ವಯವಾಗುತ್ತವೆ ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಭಾರತದಲ್ಲಿ ನಾವೆಲ್ಲರೂ ಸಹೋದರರು. ಎಲ್ಲ ಧರ್ಮಗಳಿಗೆ ಬೇರೆ ಬೇರೆ ಅನುಯಾಯಿಗಳು ಇದ್ದಾರೆ. ದೇವರು ಮಾತ್ರ ಒಬ್ಬನೇ. ಎಲ್ಲ ಧರ್ಮಗಳಲ್ಲೂ ಜೀವನ ಪಾಠವಿದೆ. ಸರ್ವಧರ್ಮ ಸಮಭಾವ ದೇಶದ ಪ್ರಮುಖ ಸಂದೇಶ. ಸಮಾಜದಲ್ಲಿ ಒಡಕು ಮೂಡಿಸುವ ಕಾರ್ಯ ಮಾಡಬಾರದು ಎಂದರು.
ಜಮಾತ್ ಇಸ್ಲಾಂ ಹಿಂದ್ ಜಿಲ್ಲಾ ಸಂಚಾಲಕ ಅಬ್ದುಲ್ ಖಾದರ್ ಬೆಳಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಜುಮನ್ ಸಂಸ್ಥೆ ಅಧ್ಯಕ್ಷ ಅಲ್ಲಾಸಾಬ ಕಲ್ಲಕುಟ್ರಿ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಗಣ್ಯರಾದ ರಾಯನಗೌಡ ಪಾಟೀಲ, ಅಣ್ಣಪ್ಪ ಬಾಗಿ, ಎಸ್.ಎನ್. ಡಂಬಳ, ಸಿದಲಿಂಗೇಶ ಹಂಡಗಿ, ಸೈಪುದ್ದಿನ ಅವರಾದಿ, ರಿಯಾಜ್‌ಅಹ್ಮದ್ ಪೀರಜಾದೆ, ರಿಯಾಜ್ ಬೇಪಾರಿ, ಅನ್ವರ್ ಮೂಲಿಮನಿ, ಅಬ್ಬಾಸ್ ದೇವರಿಡು, ಹಟೇಲಸಾಬ ರಾಮದುರ್ಗ, ದಾವಲಸಾಬ ಮಸೂತಿ, ಮೋದಿನ ಶಿರೂರ, ಜಮೀರ್ ಕಾಗದಗಾರ, ಗಫಾರಸಾಬ ಮಕಾನದಾರ, ಎ.ಬಿ. ಗಚ್ಚಿ, ಮತ್ತಿತರರು ಇದ್ದರು.
ಸಲೀಂ ಮಕಾಂದಾರ ಕುರಾನ್ ಪಠಣ ಮಾಡಿ ಕನ್ನಡಕ್ಕೆ ಅನುವಾದಿಸಿದರು. ಜಾಫರ್ ಮಕಾನದಾರ ಸ್ವಾಗತಿಸಿದರು. ಅಬ್ದುಲ್ ಖಾದರ ಕುನ್ನಿಬಾವಿ ವಂದಿಸಿದರು.