

ಚಿಕ್ಕಮಗಳೂರು: ಗ್ರೇಟ್ ಮಲ್ನಾಡ್ ಚಾಲೆಂಜ್ ಸೈಕ್ಲಿಂಗ್ ಸರಣಿಯ 11ನೇ ಆವೃತ್ತಿ ನ.28ರಿಂದ ಡಿ.4ರವರೆಗೆ ನಡೆಯಲಿದ್ದು, ಏಳು ದಿನಗಳ ಈ ಕಾರ್ಯಕ್ರಮದಲ್ಲಿ ಉತ್ಸಾಹಿ ಸೈಕ್ಲಿಂಗ್ ಪಟುಗಳು ರೋಚಕ ಅನುಭವ ಪಡೆಯಲಿದ್ದಾರೆ.
ನಗರದಲ್ಲಿ ಆಯೋಜಕ ಐ ಸೈಕಲ್ ಸೊಲೂಷನ್ಸ್ ಸಂಸ್ಥೆಯ ಸಿಇಒ ಸಂತೋಷ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಆದ್ರಿಕಾ ಹೋಟೆಲ್ ನಿಂದ ಶನಿವಾರ ಬೆಳಗ್ಗೆ 7 ಗಂಟೆಗೆ ಆರಂಭಗೊಳ್ಳಲಿರುವ ಈ ಸೈಕ್ಲಿಂಗ್ ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್ ಚಾಲನೆ ನೀಡಲಿದ್ದು, ರಾಜ್ಯದ 30 ಮಂದಿ ಹವ್ಯಾಸಿ ಸೈಕಲ್ ಸಾಹಸಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕರೊನಾ: ಸ್ಪರ್ಧೆ ರಾಜ್ಯಕ್ಕೆ ಸೀಮಿತ
ಪ್ರತಿವರ್ಷ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಪಟುಗಳು ಭಾಗವಹಿಸುತ್ತಿದ್ದ ಈ ಸೈಕ್ಲಿಂಗ್ ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ರಾಜ್ಯದ ಸ್ಪರ್ಧಿಗಳಿಗೆ ಸೀಮಿತಗೊಂಡಿದೆ. ಪ್ರತಿ ವರ್ಷ ಆಯೋಜನೆಗೊಳ್ಳುತ್ತಿದ್ದ 9 ದಿನದ 850 ಕಿ.ಮೀ. ಅಂತರದ ಸ್ಪರ್ಧೆ ಈ ಬಾರಿ 7 ದಿನ ಮಾತ್ರ ನಿಗದಿಗೊಂಡಿದೆ. ಚಿಕ್ಕಮಗಳೂರು, ಕಳಸ, ಆಗುಂಬೆ, ನಿಟ್ಟೂರು ಮಾರ್ಗವಾಗಿ ಸಾಗಿ ಕುಂದಾಪುರದಲ್ಲಿ ಮುಕ್ತಾಯಗೊಳ್ಳಲಿದೆ. ದೇಶದಲ್ಲೇ ಈ ಮಾರ್ಗ ಅತ್ಯಂತ ಕಠಿಣ ಎನಿಸಿದ್ದು, ಸುಮಾರು 1000 ಅಡಿಗಳಷ್ಟು ಏರು ರಸ್ತೆಯಲ್ಲಿ ಸಾಗಬೇಕಿರುವ ಹಿನ್ನೆಲೆಯಲ್ಲಿ ಸ್ಪರ್ಧಿಗಳಿಗೆ ಇದು ರೋಚಕ ಅನುಭವ ನೀಡಲಿದೆ ಎಂದರು.
ಹಸಿರು ಸಿರಿಯ ದೃಶ್ಯ ವೈಭವ
ಮಳೆಗಾಲದ ನಂತರ ಆಯೋಜಿಸಲಾಗುವ ಈ ಸಾಹಸ ಯಾನ ನದಿ, ಝರಿ-ತೊರೆಗಳೊಂದಿಗೆ ಹಸಿರು ಸಿರಿಯ ಭೂ ಪ್ರದೇಶದ ವೈಭವವನ್ನು ಅನಾವರಣಗೊಳಿಸಲಿದ್ದು, ಸೈಕ್ಲಿಸ್ಟ್ ಗಳಿಗೆ ಈ ಪ್ರದೇಶದ ಪ್ರಾಕೃತಿಕತೆಯ ವಿಶಿಷ್ಟ ಅನುಭವ ಮತ್ತು ಹೊಸ ದೃಷ್ಟಿಕೋನ ನೀಡಲಿದೆ. ಪೂಜಾ ಸ್ಥಳಗಳಿಂದ ಹಿಡಿದು ರಮಣೀಯ ತಾಣಗಳು ಹಾಗೂ ಪಾರಂಪರಿಕ ಕೇಂದ್ರಗಳನ್ನು ನೋಡುವ ಅಪೂರ್ವ ಅವಕಾಶ ಕೂಡ ಸೈಕ್ಲಿಸ್ಟ್ ಗಳಿಗೆ ಸಿಗಲಿದೆ. ಇದೇ ವೇಳೆ ದೈನಂದಿನ ಪ್ರಯಾಣದ ನಂತರ ಸೈಕ್ಲಿಂಗ್ ಮತ್ತು ಅದಕ್ಕೆ ಸಂಬಂಧಪಟ್ಟಂತೆ ನಡೆಯುವ ಚರ್ಚೆ, ಆಸಕ್ತ ಸೈಕ್ಲಿಸ್ಟ್ ಗಳಿಗೆ ಸಂತಸ ಉಂಟುಮಾಡಲಿದೆ. ಮುಂಜಾನೆಯ ಮಂಜಿನ ನಡುವಿನ ಪಯಣ ಸಹ ಒಂದು ಅದ್ಭುತ ಅನುಭವ ಕಟ್ಟಿಕೊಡಲಿದೆ ಎಂದು ತಿಳಿಸಿದರು.
ಪರಿಸರ ರಕ್ಷಣೆಯ ಜಾಗೃತಿ
ಪಶ್ಚಿಮಘಟ್ಟ ಪ್ರದೇಶ ಸೇರಿದಂತೆ ಪರಿಸರದ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಯೋಜನೆ ಇದಾಗಿದ್ದು, ಮೂರು ಬಾರಿ ರಾಷ್ಟ್ರೀಯ ಎಂಟಿಬಿ ಚಾಂಪಿಯನ್ ಆಗಿ ಹೊರ ಹೊಮ್ಮಿರುವ ಕೆ.ಕಿರಣ್ ಕುಮಾರ್ ರಾಜು ಹಲವು ವರ್ಷಗಳಿಂದ ಎಲ್ಲ ಸೈಕ್ಲಿಸ್ಟ್ ಗಳಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಜತೆಗೆ ಹಲವು ಹೆಸರಾಂತ ಸೈಕ್ಲಿಸ್ಟ್ ಗಳು ಪಾಲ್ಗೊಳ್ಳುತ್ತಿದ್ದು, ಈ ಸಾಹಸಯಾನವನ್ನು ಮಧುಲೋಕ ಗ್ರೂಪ್ ಮತ್ತು ಐ ಸೈಕಲ್ ಸಂಘಟನೆ ಆಯೋಜಿಸುತ್ತಿದೆ ಎಂದು ಹೇಳಿದರು.
ಸಂಘಟನೆಯ ಸುನಿಲ್, ಫಯಾಜ್ ಸುದ್ದಿಗೋಷ್ಠಿಯಲ್ಲಿದ್ದರು.