ಮಹಾ ನಾಯಕರಿಗೆ ಲಗಾಮು ಹಾಕಲು ಪ್ರಯತ್ನ

S
Published on

ಬೆಳಗಾವಿ: ಗಡಿ ವಿಚಾರವಾಗಿ ಮಹಾರಾಷ್ಟ್ರ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ದಾಖಲಿಸುವ ಕುರಿತು ಚಿಂತನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ, ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ಹೇಳಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಗಡಿ ವಿವಾದ ದಾವೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಡಿ ವಿವಾದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಹಾಗಿರುವಾಗ, ಮಹಾರಾಷ್ಟ್ರ ನಾಯಕರು ಬೆಳಗಾವಿಗೆ ಬಂದು ಕನ್ನಡಿಗರನ್ನು ಕೆರಳಿಸುತ್ತಿದ್ದಾರೆ. ಆದರೆ, ಸರ್ಕಾರ ಅಥವಾ ಆಯೋಗ ಈ ವಿಚಾರವಾಗಿ ತಕ್ಕುತ್ತರ ನೀಡುತ್ತಿಲ್ಲ. ಗಡಿನಾಡ ಕನ್ನಡಿಗರ ಪರಿಸ್ಥಿತಿಯೇ ಹೀಗಾದರೆ, ಹೊರನಾಡ ಕನ್ನಡಿಗರ ಗತಿ ಏನು ಎಂದು ಕನ್ನಡಪರ ಹೋರಾಟಗಾರರಾದ ಅಶೋಕ ಚಂದರಗಿ, ಮಹಾದೇವ ತಳವಾರ ಪ್ರಶ್ನಿಸಿದರು.

‘ನೀವು ಇಂಥ ಸಂಗತಿಗಳಿಗೆ ಕಿವಿಗೊಡಲೇಬೇಡಿ. ಆ ಹೇಳಿಕೆಗಳನ್ನೇ ಕಡೆಗಣಿಸಿ’ ಎಂದು ಅಧ್ಯಕ್ಷರು ಸಮಜಾಯಿಷಿ ನೀಡಲು ಮುಂದಾದರು. ಅದಕ್ಕೆ ಪ್ರತಿಕ್ರಿಯಿಸಿದ ಹೋರಾಟಗಾರರು, ನೀವು ವಿಚಾರವಾಗಿ ದಿಟ್ಟ ನಿಲುವು ತಳೆಯಬೇಕು ಎಂದು ಪಟ್ಟು ಹಿಡಿದರು. ಆಗ, ನೀವು ಬಯಸುವುದಾದರೆ ಶೀಘ್ರ ಮಧ್ಯಂತರ ಅರ್ಜಿ ಸಲ್ಲಿಸಲಾಗುವುದು. ಮಹಾರಾಷ್ಟ್ರ ನಾಯಕರು ಕರ್ನಾಟಕಕ್ಕೆ ಬಂದು ಪ್ರಚೋದನಕಾರಿ ಹೇಳಿಕೆ ನೀಡದಂತೆ ಕೋರಲಾಗುವುದು ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದರು.

ಕರ್ನಾಟಕದ ವಾದ ಗಟ್ಟಿ: ಗಡಿ ವಿವಾದ ಕುರಿತ ಕಾನೂನಾತ್ಮಕ ಹೋರಾಟದಲ್ಲಿ ನಮಗೆ ವಹಿಸಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ. ಕರ್ನಾಟಕದ ಗೆಲುವಿಗೆ ಪೂರಕವಾಗಿ 1,600 ದಾಖಲೆಗಳು ಮತ್ತು 200 ಲಿಖಿತ ಹೇಳಿಕೆಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದೇವೆ. ಮಹಾರಾಷ್ಟ್ರದ ವಾದದಲ್ಲಿ ಯಾವುದೇ ಹುರುಳಿಲ್ಲ. ಆದರೆ, ಕರ್ನಾಟಕದ ವಾದ ಗಟ್ಟಿಯಾಗಿದೆ. ರಾಜ್ಯದ ಜನತೆ ಆತಂಕಪಡುವ ಅಗತ್ಯವೇ ಇಲ್ಲ ಎಂದು ತಿಳಿಸಿದರು.

ಆಯೋಗದ ಸದಸ್ಯ ಜಿನದತ್ತ ದೇಸಾಯಿ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ನಗರ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶಕುಮಾರ್, ಎಸ್‌ಪಿ ಲಕ್ಷ್ಮಣ ನಿಂಬರಗಿ, ಸುಪ್ರೀಂ ಕೋರ್ಟ್ ವಕೀಲ ಎಂ.ಬಿ.ಜಿರಲಿ ಮತ್ತಿತರರು ಇದ್ದರು.

ಅದು ಸರ್ಕಾರಕ್ಕೆ ಬಿಟ್ಟ ವಿಚಾರ: ಆಯೋಗದ ಪ್ರಾದೇಶಿಕ ಕಚೇರಿಯನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತ ಬಂದಿದ್ದೇವೆ. ಆದರೆ, ಸರ್ಕಾರ ಗಮನ ಹರಿಸುತ್ತಿಲ್ಲ. ಒಂದುವೇಳೆ ಕಚೇರಿ ಈ ಭಾಗಕ್ಕೆ ಸ್ಥಳಾಂತರಗೊಂಡರೆ ನಮ್ಮ ಹೋರಾಟಕ್ಕೆ ಇನ್ನಷ್ಟು ಬಲ ಸಿಗಲಿದೆ ಎಂದು ಕನ್ನಡ ಹೋರಾಟಗಾರರು ಅಭಿಪ್ರಾಯಪಟ್ಟರು.ನಾನು ಕರುನಾಡಿನ ಯಾವುದೇ ಭಾಗದಲ್ಲಿ ಕೆಲಸ ಮಾಡಲು ಸಿದ್ಧನಿದ್ದೇನೆ. ಈ ಹಿಂದೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಪ್ರಮುಖ ಇಲಾಖೆಗಳ ಕಚೇರಿಗಳನ್ನು ಸೌಧಕ್ಕೆ ಸ್ಥಳಾಂತರಿಸುವಂತೆ ಪತ್ರವನ್ನೂ ಬರೆದಿದ್ದೇನೆ. ಆದರೆ, ಸರ್ಕಾರವೇ ಅದನ್ನು ನಿರ್ಧರಿಸಬೇಕು ಎಂದು ಅಧ್ಯಕ್ಷ ಮಂಜುನಾಥ ಪ್ರತಿಕ್ರಿಯಿಸಿದರು.

ದೇಶದ್ರೋಹ ಪ್ರಕರಣ ದಾಖಲಿಸಬಹುದು ಪ್ರತಿವರ್ಷ ನಗರದಲ್ಲಿ ನ.1ರಂದು ಕರ್ನಾಟಕ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಕರಾಳ ದಿನ ಆಚರಿಸುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಕರ್ನಾಟಕ ಏಕೀಕರಣಗೊಂಡ ನಂತರ ಈ ಪ್ರದೇಶದಲ್ಲಿ ಜನಿಸಿದ ಪ್ರತಿಯೊಬ್ಬರೂ ಕನ್ನಡಿಗರೇ. ಈ ಸಮಾಜದಲ್ಲಿ ಎಲ್ಲರಿಗೂ ಸಮಾನವಾಗಿ ಸೌಲಭ್ಯಗಳು ಸಿಗುತ್ತಿವೆ. ಹೀಗಿರುವಾಗ, ನಾಡಿನ ವಿರುದ್ಧವೇ ಕಾರ್ಯಕ್ರಮ ಸಂಘಟಿಸುವುದು ಅಪರಾಧ. ಸರ್ಕಾರ ಇದಕ್ಕೆ ಅವಕಾಶವನ್ನೇ ನೀಡಬಾರದು ಎಂದು ಮಂಜುನಾಥ ಹೇಳಿದರು.

ರಕ್ತದಲ್ಲಿ ಬರೆದ ಪತ್ರ: ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನಿಷೇಧಿಸಬೇಕು. ಆಯೋಗದ ಕಚೇರಿಯನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ರಕ್ತದಲ್ಲಿ ಬರೆದ ಮನವಿ ಪತ್ರ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net